2ನೇ ದಿನಕ್ಕೆ ಕಾಲಿಟ್ಟ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

KannadaprabhaNewsNetwork |  
Published : May 28, 2025, 11:55 PM ISTUpdated : May 28, 2025, 11:56 PM IST
28ಎಚ್‌ಪಿಟಿ4- ಹೊಸಪೇಟೆಯ ಕಮಲಾಪುರದಲ್ಲಿ ಪುರಸಭೆ ನೌಕರರು ಬುಧವಾರ ಮುಷ್ಕರ ನಡೆಸಿದರು. | Kannada Prabha

ಸಾರಾಂಶ

ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘದಿಂದ ಇಲ್ಲಿನ ನಗರಸಭೆ ಸೇರಿದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಎದುರು ಕಚೇರಿ ಕೆಲಸ ಕಾರ್ಯ ಸ್ಥಗಿತಗೊಳಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಬುಧವಾರ ಎರಡನೆ ದಿನಕ್ಕೆ ಕಾಲಿಟ್ಟಿತು.

ರಾಜ್ಯ ಪೌರಸೇವಾ ನೌಕರರ ಸಂಘ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ನೀಡುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಈ ಹಿಂದೆ ಮುಷ್ಕರ ಕೈಗೊಂಡಾಗ ಸರ್ಕಾರದ ಪೌರಾಡಳಿತದ ಉನ್ನತ ಮಟ್ಟದ ಅಧಿಕಾರಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಇದು ಹುಸಿಯಾಗಿದ್ದು, ಸರ್ಕಾರ ತಕ್ಷಣ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಅನಿರ್ದಿಷ್ಟ ಸತ್ಯಾಗ್ರಹ ನಡೆಸುತ್ತಿರುವ ಇವರು ರಾಜ್ಯದಲ್ಲಿರುವ ಎಲ್ಲ ನಗರ, ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಘೋಷಿಸುವುದು. ರಾಜ್ಯ ಸರ್ಕಾರಿ ನೌಕರರಿಗೆ ದೊರಕುತ್ತಿರುವ ಸೌಲಭ್ಯಗಳಾದ ಕೆಜೆಐಡಿ, ಜಿಪಿಎಫ್ ಇತರ ಸವತ್ತುಗಳನ್ನು ನೀಡಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ವೃಂದಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಿಂದ ಮುಕ್ತಗೊಳಿಸಿ ನೇರ ನಗರ ಸ್ಥಳೀಯ ಸಂಸ್ಥೆಗಳಿಂದ ನೇರ ಪಾವತಿಯಡಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ನ್ಯಾಯುತವಾದ ಬೇಡಿಕೆ ಈಡೇರಿಸುವಂತೆ ಪೌರಾಡಳಿತ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಲೆಕ್ಕವಿಲ್ಲದಷ್ಟು ಸಲ ಮನವಿ ಸಲ್ಲಿಸಿದ್ದೇವೆ.ಆದರೂ, ಸರ್ಕಾರ ಸ್ಪಂದಿಸಿಲ್ಲ. ಪೌರ ನೌಕರರ ವಿಷಯದಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದ ಹಾಗೂ ನಡೆಸುತ್ತಿರುವ ಎಲ್ಲ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರ ಕಾಲಮಿತಿಯೊಳಗೆ ಬೇಡಿಕೆ ಈಡೇರಿಸದೇ ಇಲ್ಲದ್ದಲ್ಲಿ ಕಚೇರಿ ಕೆಲಸ, ನೈರ್ಮಲ್ಯದ ಜತೆಗೆ ಕುಡಿಯುವ ನೀರು ಸರಬರಾಜು, ಬೀದಿದೀಪ ನಿರ್ವಹಣೆ ಕೆಲಸ ಕೂಡ ಸ್ಥಗಿತಗೊಳಿಸಿ ಮುಷ್ಕರ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ