ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಒತ್ತಾಯಿಸಿ ಜೂ.10ರಿಂದ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork |  
Published : May 29, 2025, 01:17 AM IST
26ಎಚ್‌ಪಿಟಿ1- ಹೊಸಪೇಟೆ ಪತ್ರಿಕಾ ಭವನದಲ್ಲಿಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ ನಾಯಕ ಮಾತನಾಡಿದರು. ರೈತ ಮುಖಂಡರಾದ ಎಂ.ಜೆ.‌ಜೋಗಯ್ಯ, ಉತ್ತಂಗಿ ಕೊಟ್ರೇಶ, ಕಣವಿಹಳ್ಳಿ ವೆಂಕೋಬಣ್ಣ ಮತ್ತಿತರರಿದ್ದರು. | Kannada Prabha

ಸಾರಾಂಶ

ಈ ಭಾಗದ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು.

ಸಚಿವ ಜಮೀರ್‌ ಅಹಮದ್ ಖಾನ್‌, ಶಾಸಕ ಗವಿಯಪ್ಪ ವಿರುದ್ಧ ರೈತರ ಆಕ್ರೋಶ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಈ ಭಾಗದ ರೈತರ ಅನುಕೂಲಕ್ಕಾಗಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಬೇಕು. ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಸ್ಥಾಪನೆ ಮಾಡಲು ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ನಮ್ಮ ನಿರೀಕ್ಷೆ ಹುಸಿಯಾಗಿದೆ. ಜೂ.10ರಿಂದ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಹೊಸಪೇಟೆ ರೈತರ ಸಂಘದ ಅಧ್ಯಕ್ಷ ಕಟಗಿ ಜಂಬಯ್ಯ ನಾಯಕ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಮೇ 2ರಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಅವರು ಹೊಸಪೇಟೆ ರೈತರ ಸಂಘದ ಮುಖಂಡರನ್ನು ಕರೆದು, ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸಕ್ಕರೆ ಕಾರ್ಖಾನೆ ಸ್ಥಾಪನೆ ಬಗ್ಗೆ ಘೋಷಣೆ ಮಾಡಲಿದ್ದಾರೆ. ಬಹುದಿನಗಳ ರೈತರ ಬೇಡಿಕೆಯಾದ ಸಕ್ಕರೆ ಕಾರ್ಖಾನೆ ಸ್ಥಾಪನೆ ದಿನಾಂಕ ಮತ್ತು ಸ್ಥಳವನ್ನು ಬಹಿರಂಗ ಸಭೆಯಲ್ಲಿ ತಿಳಿಸುತ್ತಾರೆ ಎಂದು ನಂಬಿಸಿದ್ದರು. ಆದರೆ, ಮೇ 20ರಂದು ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವುದೇ ಹೇಳಿಕೆ ಅಥವಾ ಭರವಸೆ ನೀಡಿಲ್ಲ. ರೈತರ ಬಹು ವರ್ಷಗಳ ಬೇಡಿಕೆಯಾದ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಕುರಿತು ಯಾವುದೇ ಕ್ರಮ ಕೈಗೊಳ್ಳದ ಸಚಿವ ಜಮೀರ್‌ ಅಹಮದ್‌ ಖಾನ್‌ ಹಾಗೂ ಶಾಸಕ ಎಚ್‌.ಆರ್. ಗವಿಯಪ್ಪ ಅವರ ಬೇಜವಾಬ್ದಾರಿತನದ ನಡವಳಿಕೆಯನ್ನು ರೈತರ ಸಂಘ ಖಂಡಿಸುತ್ತದೆ. ಸಚಿವ ಜಮೀರ್‌ ಅಹಮದ್‌ ಖಾನ್‌, ಶಾಸಕ ಗವಿಯಪ್ಪ ಅವರಿಗೆ ಹಲವು ಬಾರಿ ಸಕ್ಕರೆ ಕಾರ್ಖಾನೆ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಆದರೆ, ಈ ಬೇಡಿಕೆ ಕುರಿತು ಸಚಿವರು ಹಾಗು ಶಾಸಕರು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಜಮೀರ್‌ ಅಹಮದ್ ಖಾನ್‌ ಅವರು ರೈತರ ನಿಯೋಗದೊಂದಿಗೆ ಮಾತನಾಡಿಯೂ ಕಾರ್ಖಾನೆ ಆರಂಭಕ್ಕೆ ನಿರುತ್ಸಾಹ ತೋರಿದ್ದಾರೆ. ಈ ವಿಷಯದಲ್ಲಿ ಸಚಿವರ ವರ್ತನೆ ಬದಲಾಗಬೇಕು. ಶಾಸಕ ಎಚ್.ಆರ್‌. ಗವಿಯಪ್ಪನವರು ರೈತರ ಪರವಾಗಿ ಎರಡು ವರ್ಷಗಳಿಂದ ಸಕ್ಕರೆ ಕಾರ್ಖಾನೆ ಸ್ಥಾಪನೆ ಬಗ್ಗೆ ಯಾವುದೇ ತೀರ್ಮಾನ ಮಾಡದೇ ಪ್ರತಿ ದಿನ ಹೇಳಿಕೆಗಳನ್ನು ನೀಡುವ ಮೂಲಕ ರೈತರಿಗೆ ದಾರಿ ತಪ್ಪಿಸುತ್ತಿದ್ದಾರೆ. ಇನ್ಮುಂದೆ ಹೊಸಪೇಟೆ ರೈತರ ಸಂಘ ಈ ವಿಷಯವಾಗಿ ಸಚಿವರು, ಶಾಸಕರಿಗೆ ಮನವಿ ಸಲ್ಲಿಸುವುದಿಲ್ಲ. ಹೋರಾಟ ನಡೆಸಲಾಗುವುದು ಎಂದರು.

ಸಕ್ಕರೆ ಕಾರ್ಖಾನೆ ಜಾಗದ ವಿಷಯದಲ್ಲೂ ಸೂಕ್ತ ಸ್ಥಳ ಗುರುತಿಸಲಾಗಿಲ್ಲ. ಕಾಳಗಟ್ಟ ಪ್ರದೇಶ, ಜಂಬುನಾಥನಹಳ್ಳಿ ಪ್ರದೇಶ, ಗಾದಿಗನೂರು ಮತ್ತು ಮರಿಯಮ್ಮನಹಳ್ಳಿ ಭಾಗ ಎಂದು ಹೇಳುತ್ತಲೇ ಕಾಲ ಹರಣ ಮಾಡಲಾಗುತ್ತಿದೆ. ಸಕ್ಕರೆ ಕಾರ್ಖಾನೆ ವಿಷಯದಲ್ಲಿ ರಾಜಕೀಯ ಬೆರೆಸದೇ ರೈತರಿಗೆ ನ್ಯಾಯ ದೊರಕಿಸುವ ಕೆಲಸ ಆಗಬೇಕು. ಈ ಭಾಗದಲ್ಲಿ ಖಾಸಗಿಯವರು ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡಿದರೆ ಒಳ್ಳೆಯದಾಗುತ್ತದೆ. ಇದಕ್ಕಾಗಿ ಸೂಕ್ತ ಜಾಗ ಗುರುತಿಸಲಿ ಎಂದರು.

ರೈತ ಮುಖಂಡರಾದ ಎಂ.ಜೆ.‌ ಜೋಗಯ್ಯ, ಉತ್ತಂಗಿ ಕೊಟ್ರೇಶ, ಕಣವಿಹಳ್ಳಿ ವೆಂಕೋಬಣ್ಣ, ಬಾರಿಕೇರ ನಾಗರಾಜ, ಸಿ.‌ಆಶಾಂ, ಜೆ.‌ಗಾದಿಲಿಂಗಪ್ಪ, ಸಿ.‌ಅಂಜಿನಪ್ಪ, ರಾಮಪುರ ಯಲ್ಲಪ್ಪ, ಮೇಟ್ಟಿ ಮೈಲಾರ, ಜಾಕೀರ್ ಹುಸೇನ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''