ಕನ್ನಡಪ್ರಭ ವಾರ್ತೆ ಕೋಲಾರ
ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಹಯೋಗದಲ್ಲಿ ಡಿ.31ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ರಸ್ತೆಗೆ ಯಾವುದೇ ಸಾರಿಗೆ ಬಸ್ ಇಳಿಯುವುದಿಲ್ಲ, ಸಾರ್ವಜನಿಕರು ಸಹಕರಿಸಬೇಕು ಎಂದು ಸಮಿತಿ ರಾಜ್ಯ ಮುಖಂಡ ನಾರಾಯಣಸ್ವಾಮಿ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಾರಿಗೆ ನೌಕರರ 32 ಬೇಡಿಕೆಗಳನ್ನು ಈಡೇರಿಸಬೇಕಿದ್ದು, ಬಹು ಮುಖ್ಯವಾಗಿ 2020ರಿಂದ ಇದುವರೆಗೂ ಸಹ 38 ತಿಂಗಳ ವೇತನ ಹಿಂಬಾಕಿ ಪಾವತಿಸಬೇಕು, ಜನವರಿ 1, 2025ರಿಂದ ಹೊಸ ವೇತನ ಪರಿಷ್ಕರಣೆ ಹಾಗೂ ಇತರೆ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು. ಜತೆಗೆ ಸಾರಿಗೆ ಸಂಸ್ಥೆಯಿಂದ ನಿವೃತ್ತ ನೌಕರರಿಗೆ ಸುತ್ತೋಲೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಈ ಹಿಂದೆ ತೀರ್ಮಾನಿಸಿದಂತೆ ಡಿ.9ರಂದು ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನವೇ ಬೆಳಗಾವಿ ಚಲೋ ನಡೆಸಿ, ಮುಖ್ಯಮಂತ್ರಿಯವರಿಗೆ ಡಿ.31 ರಂದು 4 ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟ ಮುಷ್ಕರ ನಡೆಸಲು ನೋಟಿಸ್ ನೀಡಲಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರಿಗೆ ಕಾರ್ಮಿಕರು ಭಾಗವಹಿಸಿ ತಮ್ಮೆಲ್ಲರ ಪರವಾಗಿ ಬೆಳಗಾವಿ ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಇದಕ್ಕಾಗಿ ಜಂಟಿ ಕ್ರಿಯಾ ಸಮಿತಿ ಅಭಿನಂದಿಸುತ್ತದೆ ಎಂದರು.ಮುಷ್ಕರದ ನೋಟಿಸನ್ನು ಸರ್ಕಾರದ ಪರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ವೀಕರಿಸಿ ಸಾರಿಗೆ ನೌಕರರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದರು.
ಸರ್ಕಾರವು ವಿಳಂಬ ಧೋರಣೆ ಮತ್ತು ನಿರ್ಲಕ್ಷ್ಯ ಮನೋಭಾವವನ್ನು ಬಿಟ್ಟು ಕೂಡಲೇ ನಮ್ಮೊಡನೆ ಚರ್ಚಿಸಿ, ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.ಬೇಡಿಕೆ ಈಡೇರಿಕೆಗಾಗಿ ನಾವು ಕಳೆದ ಒಂದು ವರ್ಷದಿಂದ ಹಲವು ಬಾರಿ ಮನವಿ ಸಲ್ಲಿಸಿ ತಾಳ್ಮೆಯಿಂದ ಶಾಂತಿಯುತ ಧರಣಿ, ಉಪವಾಸ ಸತ್ಯಾಗ್ರಹ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸರಕಾರವನ್ನು ಒತ್ತಾಯಿಸಿದ್ದು, ನಿರ್ಲಕ್ಷ್ಯ ಧೋರಣೆ ತಳೆದಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಲು, ಬೇಡಿಕೆಗಳನ್ನು ಪಡೆಯಲು ಅನಿರ್ದಿಷ್ಟ ಮುಷ್ಕರ ಬಿಟ್ಟರೆ ನಮಗೆ ಅನ್ಯ ಮಾರ್ಗವಿಲ್ಲ ಎಂದರು.
ರಾಜ್ಯ ಸರ್ಕಾರ ಸಾರಿಗೆ ನೌಕರರ ಸಂಬಳದಲ್ಲಿ ಕಡಿತ ಮಾಡಿಕೊಂಡಿದ್ದ 2900 ಕೋಟಿ ರು. ಪಿಎಫ್ ಹಣವನ್ನು ಬಾಕಿ ಇಟ್ಟುಕೊಂಡಿದೆ, ರಾಜ್ಯ ಸರಕಾರವೇ ಸಾರಿಗೆ ನೌಕರರಿಗೆ ಬಡ್ಡಿಯನ್ನು ನೀಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಾಲಕೃಷ್ಣ, ಪ್ರಸಾದ್, ನಾಗರಾಜ್, ಅಶೋಕ್ ಕುಮಾರ್ ಇತರರು ಇದ್ದರು.