ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನದೊಂದಿಗೆ ಸ್ವಾತಂತ್ರ್ಯ ದಿನಾಚರಣೆಗೆ ನಿರ್ಧಾರ

KannadaprabhaNewsNetwork |  
Published : Jul 31, 2024, 01:08 AM IST
51 | Kannada Prabha

ಸಾರಾಂಶ

ಪ್ರತಿಭಾ ಪುರಸ್ಕಾರದ ಮೂಲಕ ತಾಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವಿಭಾಗದ ವಿವಿಧ ವಿಷಯಗಳ ಟಾಪರ್‌ ಗಳನ್ನು ಸನ್ಮಾನಿಸಲಾಗುವುದು

ಕನ್ನಡಪ್ರಭ ವಾರ್ತೆ ಹುಣಸೂರು

ಈ ಬಾರಿಯ ಸ್ವಾತಂತ್ರ್ಯ ದಿನಯನ್ನು ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಈ ಕುರಿತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಜಿ.ಡಿ. ಹರೀಶ್‌ ಗೌಡ ಮಾತನಾಡಿದರು.

ಪ್ರತಿಭಾ ಪುರಸ್ಕಾರದ ಮೂಲಕ ತಾಲೂಕಿನ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವಿಭಾಗದ ವಿವಿಧ ವಿಷಯಗಳ ಟಾಪರ್‌ ಗಳನ್ನು ಸನ್ಮಾನಿಸಲಾಗುವುದು ಎಂದರು. ಇದಕ್ಕಾಗಿ 8.5 ಲಕ್ಷ ರು. ಗಳನ್ನು ವೈಯಕ್ತಿಕವಾಗಿ ಭರಿಸಲಿದ್ದೇನೆ. ಟಾಪರ್‌ಗಳನ್ನು ಗುರುತಿಸುವ ಕಾರ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಡೆಯಲಿದೆ. ಅಲ್ಲದೆ ಐಎಎಸ್ ಪರೀಕ್ಷೆಯನ್ನು ಯಶಸ್ವಿಯಾಗಿ ಸಂಪನ್ನಗೊಳಿಸಿರುವ ತಾಲೂಕಿನ ತಿಪ್ಪಲಾಪುರ ಗ್ರಾಮದ ಗ್ರಾಮೀನ ಪ್ರತಿಭೆ ಲೇಖನ್‌ರನ್ನು ಸನ್ಮಾನಿಸಲಾಗುವುದು.

ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಸಾಂಪ್ರದಾಯಿಕವಾಗಿ ನಡೆಯುವಂತೆ ಧ್ಜಜಾರೋಹಣ, ವಿದ್ಯಾರ್ಥಿಗಳಿಂದ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಬೆಳಗ್ಗೆ ಮತ್ತು ಸಂಜೆ ನಡೆಯುವ ಕಾರ್ಯಕ್ರಮಗಳಿಗೆ ಬಹುಮಾನ, ಪಾರಿತೋಷಕದ ಖರ್ಚನ್ನು ನಾನೇ ವೈಯಕ್ತಿಕವಾಗಿ ಭರಿಸಲಿದ್ದೇನೆ. ಸ್ವಾತಂತ್ರ್ಯ ದಿನದ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಅತ್ಯಂತ ಪ್ರೇರಣಾಪೂಕರವಾಗಿ ಮೂಡಿಬರುವಂತೆ ಸಮಿತಿ ಕ್ರಮವಹಿಸಲಿದೆ ಎಂದರು.

ವಕೀಲ ಪುಟ್ಟರಾಜು ಮಾತನಾಡಿ, ಅಂದು ಬೆಳಗ್ಗೆ ಮುನೇಶ್ವರ ಕಾವಲ್ ಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕಾರ್ಯಕ್ರಮ ನಡೆಯುವ ಜಾಗದ ಸುತ್ತ ಬ್ಯಾರಿಕೇಡ್‌ ಗಳನ್ನು ನಿರ್ಮಿಸಿ ಕಾರ್ಯಕ್ರಮ ಗೊಂದಲಗಳಿಲ್ಲದೇ ನಡೆಯುವಂತೆ ಕ್ರಮವಹಿಸಬೇಕೆಂದು ಕೋರಿದರು.

ಅಧಿಕಾರಿಗಳ ಗೈರಿಗೆ ಬೇಸರಗೊಂಡ ಶಾಸಕ:

ಕಳೆದೊಂದು ವರ್ಷದಿಂದ ನಾನು ನೋಡುತ್ತಲೇ ಇದ್ದೇನೆ. ಕೆಡಿಪಿ ಸೇರಿದಂತೆ ಹಲವಾರು ಸಭೆಗಳಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಒಬ್ಬರೂ ಹಾಜರಾಗುವುದಿಲ್ಲವಲ್ಲ ಏಕೆ? ಇನ್ನು ಹಲವು ಇಲಾಖೆಗಳ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಅಂತಹವರೆಲ್ಲರಿಗೂ ಕಾರಣ ಕೇಳಿ ನೋಟೀಸ್ ನೀಡಿ. ರಾಷ್ಟ್ರೀಯ ಹಬ್ಬಗಳ ಆಚರಣೆಯನ್ನೂ ಕಡೆಗಣಿಸುತ್ತಿರುವುದು ಸರಿಯಲ್ಲ. ತಹಸೀಲ್ದಾರ್ ಈ ಕುರಿತು ನೋಟೀಸ್ ಜಾರಿ ಮಾಡಿ ಉತ್ತರ ಪಡೆಯಿರಿ. ನಂತರ ನಾನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುತ್ತೇನೆ ಎಂದರು.

ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಮಹನೀಯರ ಭಾವಚಿತ್ರಗಳನ್ನು ಇಟ್ಟು ಆಚರಣೆ ನಡೆಸುವ ಕುರಿತು ತಾಲೂಕಿನ ನಾಲ್ಕಾರು ಶಾಲೆಗಳಲ್ಲಿ ಗೊಂದಲ ಏರ್ಪಟ್ಟಿದೆ. ಈ ಬಾರಿ ಇಂತಹ ಅಪಚಾರಗಳು ಆಗದಿರುವಂತೆ ಶಿಕ್ಷಣ ಇಲಾಖೆ ಗಮನಹರಿಸಬೇಕೆಂದು ಮುಖಂಡ ಚಿಕ್ಕಸ್ವಾಮಿ ಕೋರಿದಾಗ, ರಾಜ್ಯ ಸರ್ಕಾರದ ನಿರ್ದೇಶನದಂತೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ಇದರಲ್ಲಿ ತಪ್ಪಿದಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು. ಶಿಷ್ಟಾಚಾರದ ಉಲ್ಲಂಘನೆಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಹರೀಶ್‌ ಗೌಡ ಸೂಚಿಸಿದರು.

ತಹಸೀಲ್ದಾರ್ ಮಂಜುನಾಥ್, ತಾಪಂ ಇಒ ಬಿ.ಕೆ. ಮನು, ಪೌರಾಯುಕ್ತೆ ಕೆ. ಮಾನಸ, ಮುಖಂಡರಾದ ಚಿಕ್ಕಸ್ವಾಮಿ, ನಗರಸಭೆ ಸದಸ್ಯರಾದ ಸತೀಶ್‌ ಕುಮಾರ್, ರಮೇಶ್, ಚಿಕ್ಕಸ್ವಾಮಿ, ರಮೇಶ್, ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌