ವಿಶ್ವಕ್ಕೆ ಆಧ್ಯಾತ್ಮ ಜ್ಞಾನ ನೀಡಿದ ಭಾರತ: ಸಂಸದ ಸಂಗಣ್ಣ ಕರಡಿ

KannadaprabhaNewsNetwork | Published : Mar 12, 2024 2:03 AM

ಸಾರಾಂಶ

ಭಾರತ ವಿಶ್ವಕ್ಕೆ ಆಧ್ಯಾತ್ಮ ಜ್ಞಾನದ ಬೆಳಕನ್ನು ನೀಡುತ್ತಿರುವ ಗುರುವಾಗಿದೆ.

ಶರಣರು ಕಂಡ ಶಿವ ಪ್ರವಚನ ಮಾಲೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ಭಾರತ ವಿಶ್ವಕ್ಕೆ ಆಧ್ಯಾತ್ಮ ಜ್ಞಾನದ ಬೆಳಕನ್ನು ನೀಡುತ್ತಿರುವ ಗುರುವಾಗಿದೆ. ಮನುಷ್ಯ ತನ್ನ ಅತಿಯಾದ ಆಸೆಯಿಂದ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದಾನೆ. ಮನುಷ್ಯನ ಆಂತರಿಕ, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಆಧ್ಯಾತ್ಮ ಮಾರ್ಗದಿಂದ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಆಯೋಜಿಸಿದ್ದ ಶರಣರು ಕಂಡ ಶಿವ ಪ್ರವಚನ ಮಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಎಲ್ಲದಕ್ಕೂ ಸಮಯವನ್ನು ಕೊಡುವುದರ ಜೊತೆಗೆ ಮನಸ್ಸನ್ನು ಸದೃಢ ಮಾಡಿಕೊಳ್ಳಲು ಧ್ಯಾನಕ್ಕೂ ಒತ್ತು ಕೊಡಬೇಕಾಗಿದೆ. ಜತೆಗೆ ಪ್ರತಿಯೊಬ್ಬರೂ ಮನೆಯ ಮುಂದೆ ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ರಾಜಯೋಗಿನಿ ಬ್ರಹ್ಮಕುಮಾರಿ ಜಯಂತಿ ಅಕ್ಕ, ದಿನದಿಂದ ದಿನಕ್ಕೆ ಮನುಷ್ಯನಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಮನೋ ದೈಹಿಕ ಕಾಯಿಲೆಗಳು ಜಾಸ್ತಿ ಆಗುತ್ತಿವೆ. ಇದರಿಂದ ಹೊರಬರಲು ಪ್ರತಿದಿನ ಒಂದು ಗಂಟೆಯಾದರೂ ಮನಸ್ಸಿಗೆ ಶಕ್ತಿಶಾಲಿ ಭೋಜನವಾದ ಆಧ್ಯಾತ್ಮ ಜ್ಞಾನವನ್ನು ಕೊಡಬೇಕು. ಆಗ ಏನೇ ಪರಿಸ್ಥಿತಿ ಸಮಸ್ಯೆಗಳು ಬಂದರು ಧೈರ್ಯವಾಗಿ ಎದುರಿಸಲು ಸಾಧ್ಯ. ಪ್ರತಿಯೊಬ್ಬರೂ ಪ್ರತಿದಿನ ಸಂಜೆ ಒಂದು ಗಂಟೆ ಸಮಯವನ್ನು ಒಂದು ತಿಂಗಳು ನಡೆಯಲಿರುವ ಶರಣರು ಕಂಡ ಶಿವ ಪ್ರವಚನ ಮಾಲೆಯಲ್ಲಿ ಭಾಗವಹಿಸಿ ಲಾಭ ಪಡೆದುಕೊಳ್ಳಬೇಕು ಎಂದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ನಮ್ಮ ಜೀವನದ ಎಲ್ಲಾ ದುಃಖ ನೋವುಗಳನ್ನು ಮರೆಯಬೇಕಾದರೆ ಇಂತಹ ಅಧ್ಯಾತ್ಮ ಪ್ರವಚನದಲ್ಲಿ ಭಾಗವಹಿಸಬೇಕು ಎಂದರು.

ಮುಖಂಡರಾದ ಸಿ.ವಿ. ಚಂದ್ರಶೇಖರ್ ಮಾತನಾಡಿದರು.

ಪ್ರಮುಖರಾದ ಬಸವರಾಜ ಬಳ್ಳೊಳ್ಳಿ, ಜಿತೇಂದ್ರ ತಾಲೆಡ, ಕಾಶಿನಾಥ್ ಹಂಚಿನಾಳ, ಗವಿಸಿದ್ದಯ್ಯ ಶಶಿಮಠ, ಹೇಮಾ ಬಳ್ಳಾರಿ, ರತ್ನ ಪಾಟೀಲ್ ಇತರರಿದ್ದರು.

Share this article