ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಗಣನೀಯ ಪ್ರಗತಿ

KannadaprabhaNewsNetwork |  
Published : Sep 06, 2026, 02:15 AM IST
ಬಳ್ಳಾರಿಯ ಎಸ್.ಕೆ.ಮೋದಿ ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ನವೋನ್ಮೇಷ ಉತ್ಸವ’ದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ಹಿರಿಯ ವಿಜ್ಞಾನಿ  ಎ.ಎಸ್.ಕಿರಣ್ ಕುಮಾರ್ ಮಾತನಾಡಿದರು.  | Kannada Prabha

ಸಾರಾಂಶ

ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಹಲವು ಮಹತ್ವದ ಸಾಧನೆ ಮಾಡಿದೆ. ಚಂದ್ರನ ಮೇಲೆ ನೀರಿನ ಅಂಶ ಇರುವುದನ್ನು ಪತ್ತೆ ಹಚ್ಚುವಲ್ಲಿ ಚಂದ್ರಯಾನ-1 ಪ್ರಮುಖ ಪಾತ್ರ ವಹಿಸಿದೆ.

ಬಳ್ಳಾರಿ: ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಗಣನೀಯ ಪ್ರಗತಿ ಸಾಧಿಸಿದ್ದು, ಇದೇ ವೇಗದಲ್ಲಿ ಮುನ್ನಡೆದರೆ ಕೆಲವೇ ವರ್ಷಗಳಲ್ಲಿ ವಿಶ್ವದಲ್ಲಿಯೇ ಅಗ್ರಸ್ಥಾನಕ್ಕೇರಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಹಾಗೂ ಖ್ಯಾತ ಬಾಹ್ಯಾಕಾಶ ಹಿರಿಯ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ.ಮೋದಿ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ನವೋನ್ಮೇಷ ಉತ್ಸವದ ಅಂಗವಾಗಿ ವಿಜ್ಞಾನ ಉದ್ಯಾನವನ (ಸೈನ್ಸ್ ಪಾರ್ಕ್), ನೂತನ ಭೌತಶಾಸ್ತ್ರ ಪ್ರಯೋಗಾಲಯ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತ ಹಲವು ಮಹತ್ವದ ಸಾಧನೆ ಮಾಡಿದೆ. ಚಂದ್ರನ ಮೇಲೆ ನೀರಿನ ಅಂಶ ಇರುವುದನ್ನು ಪತ್ತೆ ಹಚ್ಚುವಲ್ಲಿ ಚಂದ್ರಯಾನ-1 ಪ್ರಮುಖ ಪಾತ್ರ ವಹಿಸಿದೆ. ಭಾರತ ನಡೆಸಿದ ಈ ಸಂಶೋಧನೆಯ ಬಳಿಕವಷ್ಟೇ ಇತರ ರಾಷ್ಟ್ರಗಳು ಚಂದ್ರನಲ್ಲಿನ ನೀರಿನ ಅಂಶದ ಕುರಿತು ಹೆಚ್ಚಿನ ಅಧ್ಯಯನಕ್ಕೆ ಮುಂದಾದವು ಎಂದು ಹೇಳಿದರು.

ದೇಶದ ಬಾಹ್ಯಾಕಾಶ ಕ್ಷೇತ್ರದ ಸಾಧನೆ ಭಾರತೀಯ ವಿಜ್ಞಾನಿಗಳ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ. ಸೀಮಿತ ಸಂಪನ್ಮೂಲಗಳ ನಡುವೆಯೂ ಸಂಕೀರ್ಣ ಬಾಹ್ಯಾಕಾಶ ಯೋಜನೆ ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಸಂಶೋಧನೆ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ಭಾರತ ಮತ್ತಷ್ಟು ವೇಗವಾಗಿ ಮುನ್ನಡೆಯಲಿದೆ ಎಂದರು.

ಇದೇ ವೇಳೆ ಬಾಹ್ಯಾಕಾಶ ವಿಜ್ಞಾನ ಸಂಬಂಧಿತ ಪ್ರಶ್ನೋತ್ತರಗಳ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಮೂಡಿಸಿದ ಹಿರಿಯ ವಿಜ್ಞಾನಿ ಎ.ಎಸ್. ಕಿರಣ್ ಕುಮಾರ್ ಅವರು, ವಿಜ್ಞಾನ ಸಂಬಂಧಿಸಿದ ಯಾವುದೇ ಗೊಂದಲವಿದ್ದರೂ ಪ್ರಶ್ನಿಸಿ ಉತ್ತರ ಕಂಡುಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಎ.ಎಸ್‌.ಕಿರಣ್‌ ಕುಮಾರ್ ಕನ್ನಡದಲ್ಲಿ ಭಾಷಣ ಆರಂಭಿಸುತ್ತಿದ್ದಂತೆಯೇ ವಿದ್ಯಾರ್ಥಿಗಳು ಚಪ್ಪಾಳೆಯ ಮೂಲಕ ಹರ್ಷ ವ್ಯಕ್ತಪಡಿಸಿದರು. ಇಡೀ ಭಾಷಣ ಕನ್ನಡದಲ್ಲಿಯೇ ಮಾತನಾಡಿ ಮಕ್ಕಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.

ಪ್ರತಿಯೊಂದು ಮಗುವಿನಲ್ಲೂ ವಿಜ್ಞಾನಿ:

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿ ಡಾ. ವಿ.ಸುಬ್ರಮಣಿಯನ್ ಮಾತನಾಡಿ, ಪ್ರತಿಯೊಂದು ಮಗುವಿನಲ್ಲೂ ಒಬ್ಬ ವಿಜ್ಞಾನಿ ಅಡಗಿದ್ದಾನೆ. ಮಕ್ಕಳು ಕುತೂಹಲದಿಂದ ಪ್ರಶ್ನೆ ಕೇಳುವುದು, ಸುತ್ತಮುತ್ತಲಿನ ಸಂಗತಿ ಸೂಕ್ಷ್ಮವಾಗಿ ಗಮನಿಸುವುದು ಹಾಗೂ ಅವುಗಳ ಹಿಂದಿನ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸುವುದು ವೈಜ್ಞಾನಿಕ ಮನೋಭಾವದ ಮುಖ್ಯ ಲಕ್ಷಣಗಳಾಗಿವೆ.

ಮಕ್ಕಳ ಕುತೂಹಲಕ್ಕೆ ಕಡಿವಾಣ ಹಾಕದೆ, ಪ್ರಶ್ನೆಗಳಿಗೆ ಉತ್ತರ ಹುಡುಕುವ ಅವಕಾಶ ಕಲ್ಪಿಸಬೇಕು. ಶಾಲೆಗಳಲ್ಲಿ ಪ್ರಯೋಗ, ವೀಕ್ಷಣೆ ಮತ್ತು ಸಂಶೋಧನೆ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆದು ಹೊಸ ಆವಿಷ್ಕಾರಗಳತ್ತ ಅವರ ಚಿಂತನೆ ವಿಸ್ತರಿಸಲಿದೆ ಎಂದು ತಿಳಿಸಿದರು.

ಪ್ರಸಿದ್ಧ ವಿಜ್ಞಾನಿ ಡಾ. ಎಸ್.ಬಾಲಸುಬ್ರಮಣ್ಯಂ ಮಾತನಾಡಿ, ಯುವಪೀಳಿಗೆಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಅಗತ್ಯ ಸೌಲಭ್ಯ ಒದಗಿಸಿದರೆ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡಬಲ್ಲರು. ಭಾರತದ ಭವಿಷ್ಯದ ವೈಜ್ಞಾನಿಕ ಪ್ರಗತಿ ಇಂದಿನ ವಿದ್ಯಾರ್ಥಿಗಳ ಕುತೂಹಲ ಮತ್ತು ಸೃಜನಶೀಲತೆ ಬೆಳೆಸುವುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದರು. ಶಿಕ್ಷಕರಾಗಲೀ, ಪೋಷಕರಾಗಲೀ ಮಕ್ಕಳ ಕುತೂಹಲ ಹತ್ತಿಕ್ಕಬಾರದು. ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಕೌತುಕ ಸಂಗತಿ ಶಿಕ್ಷಕರು ಮಕ್ಕಳಿಗೆ ತಿಳಿಸುತ್ತಿರಬೇಕು. ಇದು ಮಕ್ಕಳಲ್ಲಿನ ಸಂಶೋಧನಾ ಮನೋಭಾವಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚೆ ರಾಜಶೇಖರ್, ದೇಶದ ಪ್ರಮುಖ ವಿಜ್ಞಾನಿಗಳನ್ನು ಎಸ್.ಕೆ. ಮೋದಿ ಶಾಲೆಗೆ ಆಹ್ವಾನಿಸಿ ಅವರಿಂದ ಅನೇಕ ವಿಜ್ಞಾನದ ಸಂಗತಿ ತಿಳಿಸಿಕೊಡಲು ಮನವಿ ಮಾಡಿಕೊಡಲಾಯಿತು. ಅಂತೆಯೇ ನಮ್ಮ ಮನವಿಗೆ ಒಪ್ಪಿ ಖ್ಯಾತ ವಿಜ್ಞಾನಿಗಳು ಆಗಮಿಸಿ ತಮ್ಮ ಸಂಶೋಧನಾ ಅನುಭವ ಹಾಗೂ ಸಂಶೋಧನಾ ಫಲಿತಗಳ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟಿದ್ದಾರೆ. ಇದು ನಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿ ಸೌಭಾಗ್ಯವಾಗಿದೆ ಎಂದು ಸ್ಮರಿಸಿದರು.

ವೀವಿ ಸಂಘದ ಜಂಟಿ ಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ, ಆಡಳಿತ ಮಂಡಳಿ ಸದಸ್ಯ ಅಣ್ಣಾ ವಿರುಪಾಕ್ಷಪ್ಪ, ಶಾಲೆಯ ಮುಖ್ಯಗುರು ಸುನಂದಾ ಎಂ. ಪಾಟೀಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಬಹಳ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಕೆಲಸಗಳಿಗೆ ಅಲೆದಾಟ ತಪ್ಪಲಿದೆ
ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ತರುವಂತೆ ಕಲಿಯಲಿ: ಸಿ.ಸಿ. ಪಾಟೀಲ್