ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ದೇವಲಾಪುರದಲ್ಲಿ ನೂತನವಾಗಿ ತೆರೆದಿರುವ ಪೊಲೀಸ್ ಹೊರ ಠಾಣೆ ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ದೇಶದ ಕಾನೂನಿಗೆ ಪ್ರತಿಯೊಬ್ಬರೂ ಗೌರವ ಕೊಟ್ಟು ಕಾನೂನು ವ್ಯಾಪ್ತಿಯಲ್ಲಿ ನಡೆದುಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.
ಸಾರ್ವಜನಿಕರ ರಕ್ಷಣೆಗೆ ಪೊಲೀಸ್ ಇಲಾಖೆ ಸೇವೆ ಬಹಳ ಮುಖ್ಯ. ಪೊಲೀಸ್ ಠಾಣೆಗಳಿಂದ ಜನಸಾಮಾನ್ಯರ ರಕ್ಷಣೆಯಾಗುತ್ತದೆ ಹೊರತು ಯಾವುದೇ ಕೆಡಕುಂಟಾಗುವುದಿಲ್ಲ. ಸ್ವಲ್ಪ ದಿನಗಳ ಕಾಲ ಕಠಿಣ ಎನಿಸಬಹುದು. ನಂತರದಲ್ಲಿ ರಕ್ಷಣಾ ಇಲಾಖೆಯಿಂದ ಸಿಗುವ ಅನುಕೂಲ ಬೇರ್‍ಯಾವುದೇ ಇಲಾಖೆಯಲ್ಲಿ ಸಿಗುವುದಿಲ್ಲ ಎಂದರು.ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಬಹುತೇಕ ಬೈಕ್ ಸವಾರರು ಹೆಲ್ಮೆಟ್ ಬಳಸುತ್ತಿಲ್ಲ. ಪೊಲೀಸರು ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಸಿ ಎಂದು ಸಲಹೆ ನೀಡುವುದೇ ದೊಡ್ಡ ಅಪರಾಧವೆಂಬಂತಾಗಿದೆ. ಒಳ್ಳೆಯದನ್ನು ಹೇಳುವ ಪೊಲೀಸರ ವಿರುದ್ಧವೇ ಕೇಸ್ ಹಾಕಿ ಎಂದು ಒತ್ತಡ ಹಾಕುವ ಪರಿಸ್ಥಿತಿ ಬಂದೊದಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸುವುದು ಹೇಗೆಂದು ಗೊತ್ತಾಗುತ್ತಿಲ್ಲ. ಜನರು ಸ್ಪಂದಿಸಿದಾಗ ಮಾತ್ರ ಇದನ್ನೆಲ್ಲಾ ಸರಿಪಡಿಸಬಹುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದಾಗಿ ದೇವಲಾಪುರ ಹೋಬಳಿ ಕೇಂದ್ರಕ್ಕೆ ಬಹಳ ಅತ್ಯವಶ್ಯವಕವಾಗಿದ್ದ ಪೊಲೀಸ್ ಹೊರ ಠಾಣೆ ಮಂಜೂರಾಗಿದೆ. ಜಿಲ್ಲೆಯಲ್ಲಿಯೇ ಅತಿ ದೊಡ್ಡದಾದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ 215 ಹಳ್ಳಿಗಳ ಪೈಕಿ 65 ಹಳ್ಳಿಗಳು ದೇವಲಾಪುರ ಪೊಲೀಸ್ ಹೊರ ಠಾಣೆಗೆ ಸೇರುತ್ತವೆ. ಮುಂದಿನ ದಿನಗಳಲ್ಲಿ ಈ ಹೊರ ಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸುವ ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದರು.