ಗದಗ: ಭಾರತ ಸರ್ವಧರ್ಮಗಳ ಸಮನ್ವಯದ ತಾಣವಾಗಿದೆ. ಇಲ್ಲಿ ಎಲ್ಲ ಧರ್ಮೀಯರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ನಮ್ಮ ಧರ್ಮದ ಬಗ್ಗೆ ಪರಿಪೂರ್ಣವಾಗಿ ತಿಳಿಯಬೇಕೆಂದರೆ ಭಾರತದಲ್ಲಿರುವ ಅನ್ಯ ಧರ್ಮಗಳ ಅಧ್ಯಯನವು ಬಹಳ ಅವಶ್ಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಅವರು ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2711ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಮ್ಮ ಧರ್ಮದ ಬಗ್ಗೆ ಅಭಿಮಾನ ಮೂಡಬೇಕಾದರೆ ಬೇರೆ ಬೇರೆ ಧರ್ಮಗ್ರಂಥಗಳ ಅಧ್ಯಯನ ಮಾಡಬೇಕು. ಧರ್ಮ ಸಹಿಷ್ಣುತೆ ಬರೀ ಮಾತುಗಳಲ್ಲಿ ಸೀಮಿತವಾದರೆ ಸಾಲದು. ಧರ್ಮ ಸಹಿಷ್ಣುತೆ ಭಾವ ಮೂಡಬೇಕಾದರೆ ಪ್ರತಿಯೊಬ್ಬರು ಶಾಂತಿ, ಸಮಾನತೆ, ಸೌಹಾರ್ದತೆಯಿಂದ ನಡೆದುಕೊಳ್ಳಬೇಕು.ಎಲ್ಲ ಧರ್ಮಗಳು ಸಾರುವ ಸಂದೇಶ ಒಂದೇ. ಧರ್ಮಗ್ರಂಥಗಳ ಅಧ್ಯಯನದಿಂದ ಸಂಕುಚಿತತೆ ನಾಶವಾಗಿ,ನಾವೆಲ್ಲರೂ ಒಂದು ಎಂಬ ವಿಶ್ವ ವ್ಯಾಪಕತೆಯ ಭಾವನೆ ಮೂಡುತ್ತದೆ ಎಂದರು.ಡಿ.ಜಿ.ಎಂ ಆಯುರ್ವೇದ ಕಾಲೇಜಿನ ಡಾ.ಎಂ.ಡಿ. ಸಮುದ್ರಿ ಮಾತನಾಡಿ, ಮಾನವ ಹಲವಾರು ಧರ್ಮಗಳ ಗೊಂದಲದಲ್ಲಿ ಇದ್ದಾನೆ. ನನ್ನ ಧರ್ಮವೇ ಶ್ರೇಷ್ಠ ಎಂಬ ಭಾವನೆಯಲ್ಲಿ ಇರದೆ, ಸರ್ವ ಧರ್ಮಗಳಲ್ಲಿ ಏಕತೆ ಕಾಣಬೇಕು. ಅನೇಕ ಮಹಾತ್ಮರು ಸಾರಿದ ಸಂದೇಶ ಅರಿತು ನಡೆಯಬೇಕೆಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ರತ್ನಾಬಾಯಿ.ಜಿ.ಬದಿ ಅವರನ್ನು ಸನ್ಮಾನಿಸಲಾಯಿತು. ವಚನ ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ, ಗುರುನಾಥ್ ಸುತಾರ ನಡೆಸಿಕೊಟ್ಟರು.ಧರ್ಮಗ್ರಂಥ ಪಠಣವನ್ನು ಪ್ರಶಾಂತ ಜಡಗೊಂಡ, ವಚನ ಚಿಂತನವನ್ನು ಮಂಜುನಾಥ ಅಸ್ಕಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಶಿವಣ್ಣ ಯರಾಸಿ ಹಾಗೂ ಸಮಾಜ ಸೇವಕ ತಯ್ಯಬ ದಾದಾಸಾಹೇಬ್ ಕುನ್ನಿಬಾವಿ ವಹಿಸಿಕೊಂಡಿದ್ದರು. ಸಿದ್ರಾಮಯ್ಯ ಕಾಶಿಮಠ ಅವರು ಬಸವಣ್ಣನವರ ರೂಪಕದ ಏಕಪಾತ್ರಾಭಿನಯ ಮಾಡಿ ಎಲ್ಲರನ್ನು ರಂಜಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಇದ್ದರು. ಪ್ರೊ. ಶಿವಾನಂದ ಹೊಂಬಳ ನಿರೂಪಿಸಿದರು. ಡಾ.ಉಮೇಶ ಪುರದ ಸ್ವಾಗತಿಸಿದರು.