ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಕ್ಯಾಂಪ್ ಪ್ರದೇಶದ ಬಿ.ಕೆ.ಮಾಡೆಲ್ ಹೈಸ್ಕೂಲ್ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಬ್ರಿಟಿಷರು ಭಾರತೀಯರ ಮೇಲೆ ಗುಲಾಮಗಿರಿಯನ್ನು ಹೇರುವುದರ ಜೊತೆಗೆ ಅವರ ಮನಸ್ಸಿನಲ್ಲಿ ಕೀಳರಿಮೆಯ ಬೀಜ ಬಿತ್ತಿದ್ದರು. ಭಾರತ ಬಡ ಮತ್ತು ಅಜ್ಞಾನಿ ರಾಷ್ಟ್ರ ಎಂಬ ಗುರುತನ್ನು ಸೃಷ್ಟಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಈ ಕೀಳರಿಮೆ ಹೋಗಲಾಡಿಸುವ ಕೆಲಸ ನಡೆಯುತ್ತಿದೆ. ನಮ್ಮ ದೇಶಕ್ಕೆ ಆರ್ಯಭಟ, ಬ್ರಹ್ಮಗುಪ್ತ, ವರಾಹಮಿಹಿರ, ಚರಕ ಮತ್ತು ಸುಶ್ರುತರಂತಹ ಜ್ಞಾನಿಗಳ ಪರಂಪರೆಯಿದೆ. ನಮ್ಮ ದೇಶ ಋಷಿಮುನಿಗಳ ಅಪೂರ್ವ ಜ್ಞಾನದಿಂದ ಸಂಪನ್ನವಾಗಿದೆ. ಹೊಸ ಶಿಕ್ಷಣ ನೀತಿಯು ಕೇಸರೀಕರಣವಲ್ಲ, ಬದಲಿಗೆ ಅದು ಭಾರತದ ಗೌರವಯುತ ಜ್ಞಾನ ಪರಂಪರೆ ಪ್ರತಿಬಿಂಬಿಸುತ್ತದೆ. ಇಂದು ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲು ನಮ್ಮ ಜ್ಞಾನ ಪರಂಪರೆಯೇ ಕಾರಣ ಎಂದರು.
ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಅವರು ಮಾತನಾಡಿ, ಬೆಳಗಾವಿಯು ಬ್ರಿಟಿಷರ ಕೇಂದ್ರ ಕಚೇರಿಯಾಗಿದ್ದ ಕಾಲದಲ್ಲಿ ಮಿಷನರಿ ಶಾಲೆಗಳ ಪ್ರಭಾವ ಹೆಚ್ಚಿತ್ತು. ಅಂತಹ ಕಠಿಣ ಸಮಯದಲ್ಲಿ ಧೈರ್ಯವಂತ ಶಿಕ್ಷಕರು ಮತ್ತು ದಾನಿಗಳು ಸೇರಿ ಈ ಶಾಲೆಯನ್ನು ಆರಂಭಿಸಿದರು. ಬಿ.ಕೆ.ಮಾಡೆಲ್ ಶಾಲೆಯು ಗುಣಮಟ್ಟದ ಶಿಕ್ಷಣದ ಮೂಲಕ ನೂರು ವರ್ಷಗಳ ಯಶಸ್ವಿ ಪ್ರಯಾಣವನ್ನು ಪೂರೈಸಿರುವುದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಮೇಯರ್ ಮಂಗೇಶ್ ಪವಾರ್, ಉಪಮೇಯರ್ ವಾಣಿ ಜೋಶಿ, ಅವಿನಾಶ ಪೋತದಾರ, ಸಾಹಿತಿ ಬಸವರಾಜ ಜಗಜಂಪಿ, ಶಾಲೆಯ ಹಳೆಯ ವಿದ್ಯಾರ್ಥಿ ಜಯಂತ್ ದೇಶಪಾಂಡೆ ಹಾಗೂ ಮಾಜಿ ಶಾಸಕ ಸಂಜಯ್ ಪಾಟೀಲ್ ಉಪಸ್ಥಿತರಿದ್ದರು.