೭೫ನೇ ಗಣರಾಜ್ಯೋತ್ಸವ
ಭಾರತ ಜಾಗತಿಕ ಮಟ್ಟದಲ್ಲಿ ಪ್ರಬಲವಾಗಿ ಮುಂದುವರೆದ ರಾಷ್ಟ್ರವಾಗಿ ಹೊಮ್ಮುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ೭೫ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಯುವಕರು ಕೃಷಿ, ಕೈಗಾರಿಕೆ ಹಾಗೂ ಸ್ವಂತ ಉದ್ದಿಮೆಗಳನ್ನು ಮಾಡಿಕೊಂಡು ಸ್ವಾವಲಂಬನೆ ಜೀವನವನ್ನು ನಡೆಸಬೇಕು. ತಾಲೂಕಿನಲ್ಲಿ ಕೈಗಾರಿಕೆಗಳು ತೆರೆಯದ ಕಾರಣ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ ದೊಡ್ಡ ಉದ್ದಿಮೆದಾರರು ಕೈಗಾರಿಕೆಗಳನ್ನು ನಿರ್ಮಾಣ ಮಾಡಲು ಮುಂದಾದರೆ ನಿರುದ್ಯೋಗ ಯುವಜನರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ ಎಂದರು.ತಹಸೀಲ್ದಾರ್ ನಂದಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದು, ಜಾತ್ಯತೀತವಾದ ಸಂವಿಧಾನ ಮತ್ತು ಪ್ರಾಕೃತಿಕ ಸಂಪತ್ತನ್ನು ಹೊಂದಿದೆ. ಕೃಷಿ, ಕೈಗಾರಿಕೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಇಂದಿನ ಯುವಕರು ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ, ಸಂಶೋಧನೆ, ಬಾಹ್ಯಕಾಶ, ವೈದ್ಯಕೀಯ, ರಕ್ಷಣೆ ಮುಂತಾದ ಕ್ಷೇತ್ರಗಳಲ್ಲಿ ಇತರೆ ರಾಷ್ಟ್ರಗಳಿಗಿಂತ ಶಕ್ತಿಶಾಲಿಯಾಗಿರುವುದು ಹೆಮ್ಮೆಯ ಸಂಗತಿ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಇಲಾಖೆ ಅಧಿಕಾರಿಗಳು, ಜನಪ್ರತಿನಿದಿಗಳು, ಗಣ್ಯರು ಉಪಸ್ಥಿತರಿದ್ದರು.
ಆಲೂರಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ೭೫ ನೇ ಗಣ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಶಾಸಕ ಸಿಮೆಂಟ್ ಮಂಜು, ತಹಸೀಲ್ದಾರ್ ನಂದಕುಮಾರ್, ಜನಪ್ರತಿನಿದಿಗಳು, ಮುಖಂಡರು ಭಾಗವಹಿಸಿದ್ದರು.