ಮೊದಲಿಗಿಂತ ಈಗ ಭಾರತ ಆರ್ಥಿಕತೆಯಲ್ಲಿ ಬಲಿಷ್ಠ

KannadaprabhaNewsNetwork | Published : Dec 17, 2023 1:45 AM

ಸಾರಾಂಶ

ಚನ್ನಪಟ್ಟಣ: ದೇಶ ಆರ್ಥಿಕತೆಯಲ್ಲಿ ಹಿಂದುಳಿದಿರುವುದನ್ನು ಮನಗಂಡು ಕೇಂದ್ರ ಸರ್ಕಾರ ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಜನರು ಆ ಯೋಜನೆಯ ಸೌಲಭ್ಯಗಳ ಸದುಪಯೋಗ ಪಡೆದುಕೊಂಡಿದ್ದಾರೆ. ಮೊದಲಿಗಿಂತ ಈಗ ಭಾರತ ಆರ್ಥಿಕತೆಯಲ್ಲಿ ಬಲಿಷ್ಠವಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಖಾತೆ ಇಂಧನ ಹಾಗೂ ಭಾರಿ ಕೈಗಾರಿಕಾ ಸಚಿವ ಕೃಷ್ಣ ಪಾಲ್ ಗುರ್ಜರ್ ಹೇಳಿದರು.

ಚನ್ನಪಟ್ಟಣ: ದೇಶ ಆರ್ಥಿಕತೆಯಲ್ಲಿ ಹಿಂದುಳಿದಿರುವುದನ್ನು ಮನಗಂಡು ಕೇಂದ್ರ ಸರ್ಕಾರ ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿದೆ. ಜನರು ಆ ಯೋಜನೆಯ ಸೌಲಭ್ಯಗಳ ಸದುಪಯೋಗ ಪಡೆದುಕೊಂಡಿದ್ದಾರೆ. ಮೊದಲಿಗಿಂತ ಈಗ ಭಾರತ ಆರ್ಥಿಕತೆಯಲ್ಲಿ ಬಲಿಷ್ಠವಾಗಿದೆ ಎಂದು ಕೇಂದ್ರ ಸರ್ಕಾರದ ರಾಜ್ಯ ಖಾತೆ ಇಂಧನ ಹಾಗೂ ಭಾರಿ ಕೈಗಾರಿಕಾ ಸಚಿವ ಕೃಷ್ಣ ಪಾಲ್ ಗುರ್ಜರ್ ಹೇಳಿದರು.

ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ವಿಕಸಿತ ಭಾರತ್ ಸಂಕಲ್ಪಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ಕೆಲಸ ಆಗಬೇಕು ಎಂದರು.

ಮಹಿಳೆಯರ ಸಬಲೀಕರಣವನ್ನು ಖಾತ್ರಿಪಡಿಸಲು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ 37.5 ಲಕ್ಷ ಉಚಿತ ಎಲ್ ಪಿಜಿ ಅನಿಲ ಸಂಪರ್ಕಗಳನ್ನು ಅಳವಡಿಸಲಾಗಿದೆ. ಕರ್ನಾಟಕದಲ್ಲಿ 4608 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಅಮೃತ ಭಾರತ ನಿಲ್ದಾಣಗಳ ಅಡಿಯಲ್ಲಿ 56 ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗಿದೆ. ರಾಜ್ಯದಲ್ಲಿ 4 ವಂದೇ ಭಾರತ್ ರೈಲುಗಳು ಈಗಾಗಲೇ ಸಂಚರಿಸುತ್ತಿದೆ. ಬುಡಕಟ್ಟು ಸಮುದಾಯಗಳಿಗೆ ಗೌರವಗಳು, ಹಕ್ಕುಗಳು ಹಾಗೂ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಕೇಂದ್ರ ಸರ್ಕಾರದಿಂದ 13 ಸಾವಿರ ಕೋಟಿ ರು.ಗಳನ್ನು ಮಂಜೂರು ಮಾಡಲಾಗಿದೆ. 15 ಸಾವಿರ ರು.ಗಳವರೆಗೆ ಟೂಲ್‌ಕಿಟ್ ಪ್ರೋತ್ಸಾಹ, ಕೌಶಲ್ಯ ಉನ್ನತೀಕರಣ, ಡಿಜಿಟಲ್ ವಹಿವಾಟಿಗೆ ಪ್ರೋತ್ಸಾಹ ಮತ್ತು ಮಾರುಕಟ್ಟೆ ಬೆಂಬಲ ನೀಡಲಾಗಿದೆ. 3,958 ವನ್ ಧನ್ ವಿಕಾಸ ಕೇಂದ್ರಗಳನ್ನು ಮಂಜೂರು ಮಾಡಲಾಗಿದೆ. 11.83 ಲಕ್ಷ ಬುಡಕಟ್ಟು ಜನರು ಇವುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದರು.

ಮಾತೃವಂದನಾ ಯೋಜನೆಯಡಿ ಗರ್ಭಿಣಿ ಮಹಿಳೆಯರಿಗೆ 5 ಸಾವಿರ ರು.ಗಳನ್ನು ನೀಡಲಾಗುತ್ತಿದೆ. ಪಿಎಂ ಕಿಸಾನ್ ಯೋಜನೆಯಡಿ ರೈತರು ಪಂಪ್‌ಸೆಟ್‌ಗಳನ್ನು ಖರೀದಿಸಿದರೆ ಶೇ.60ರಷ್ಟು ಸಬ್ಸಿಡಿ ನೀಡಲಾಗುವುದು. ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ನೀಡಲಾಗುತ್ತಿದ್ದು, ಅಪಾರ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕಗಳನ್ನು ಅಳವಡಿಸಲಾಗಿದ್ದು, ಇದರಿಂದ 18 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಕೃಷ್ಣ ಪಾಲ್ ಗುರ್ಜರ್ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಎಲ್‌ಪಿಜಿ ಕನೆಕ್ಷನ್ ನೀಡಲಾಯಿತು. ಬೆಳೆ ಸಾಲ ಯೋಜನೆಯಡಿ ರೈತರಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ತಾಪಂ ಇಒ ಶಿವಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ, ಮುಖಂಡರಾದ ಗೌತಮ್ ಗೌಡ, ಪ್ರಸಾದ್ ಗೌಡ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

16ಕೆಆರ್ ಎಂಎನ್ 4,5,6.ಜೆಪಿಜಿ

4.ಚನ್ನಪಟ್ಟಣ ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ವಿಕಸಿತ ಭಾರತ್ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು

ಕೇಂದ್ರ ಸರ್ಕಾರದ ರಾಜ್ಯ ಖಾತೆ ಇಂಧನ ಹಾಗೂ ಭಾರಿ ಕೈಗಾರಿಕ ಸಚಿವ ಕೃಷ್ಣ ಪಾಲ್ ಗುರ್ಜರ್ ಉದ್ಘಾಟಿಸಿದರು.(ಈ ಫೋಟೋವನ್ನು ಪ್ಯಾನಲ್‌ಗೆ ಬಳಸಿ)

ಚನ್ನಪಟ್ಟಣ ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ವಿಕಸಿತ ಭಾರತ್ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಪಾಲ್ ಗುರ್ಜರ್ ರೈತರಿಗೆ ಬೆಳೆ ಸಾಲ ಮಂಜೂರಾತಿ ಪತ್ರ ವಿತರಿಸಿದರು. ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್, ತಾಪಂ ಇಒ ಶಿವಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣಗೌಡ ಇತರರಿದ್ದರು.

Share this article