ಮೋದಿ ಆಡಳಿತದಲ್ಲಿ ಭಾರತ 4ನೇ ಶಕ್ತಿಶಾಲಿ ರಾಷ್ಟ್ರ-ಶಾಸಕ ಸಿ.ಸಿ. ಪಾಟೀಲ

KannadaprabhaNewsNetwork |  
Published : Jun 19, 2025, 11:50 PM ISTUpdated : Jun 19, 2025, 11:51 PM IST
ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ 11 ವರ್ಷಗಳ ಆಡಳಿತದಲ್ಲಿ ಭಾರತವು ವಿಶ್ವದ 4ನೇ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ಗದಗ: ಪ್ರಧಾನಿ ನರೇಂದ್ರ ಮೋದಿ 11 ವರ್ಷಗಳ ಆಡಳಿತದಲ್ಲಿ ಭಾರತವು ವಿಶ್ವದ 4ನೇ ಶಕ್ತಿಶಾಲಿ ರಾಷ್ಟ್ರವಾಗಿ ರೂಪುಗೊಂಡಿದೆ ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು.

ನಗರದ ಗದಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಒಂದು ದಶಕದಲ್ಲಿ ಭಾರತ ಕಂಡ ಅಭೂತಪೂರ್ವ ಪ್ರಗತಿ ಅಸಾಧಾರಣ. 2004ರಿಂದ 2014ರ ಅವಧಿಯಲ್ಲಿ ಯುಪಿಎ ಸರ್ಕಾರ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ₹5,390 ಕೋಟಿ, ರೈಲ್ವೆ ಯೋಜನೆಗಳಿಗೆ ಸರಾಸರಿ ₹ 835 ಕೋಟಿ ಮತ್ತು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಿಗೆ ₹ 39,922 ಕೋಟಿ ವ್ಯಯ ಮಾಡಿತ್ತು. ಆದರೆ, 2014ರಿಂದ ಇಲ್ಲಿಯವರೆಗೆ ನಮ್ಮ ಎನ್‌ಡಿಎ ಸರ್ಕಾರ ಅಭಿವೃದ್ಧಿಗೆ ₹14,685 ಕೋಟಿ, ರೈಲ್ವೆ ಯೋಜನೆಗಳಿಗೆ ₹7,813 ಕೋಟಿ ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ₹1 ಲಕ್ಷ ಕೋಟಿ ನೀಡಿರುವುದು ನಮ್ಮ‌ ಸರ್ಕಾರದ ಸಾಧನೆಯಾಗಿದೆ ಎಂದರು.

ಕೇಂದ್ರ ಸಚಿವ ನಿತಿನ್ ಗಡ್ಕರಿ ದೂರದೃಷ್ಟಿ ಶ್ಲಾಘಿಸಿದ ಸಿ.ಸಿ.ಪಾಟೀಲ, ನರಗುಂದ ಬೈಪಾಸ್ ನಿರ್ಮಾಣಕ್ಕೆ ₹128 ಕೋಟಿ ಬಿಡುಗಡೆ ಮಾಡಿದ್ದಾರೆ. ಸಾಮಾನ್ಯವಾಗಿ, ಭೂ ಸ್ವಾಧೀನದ ಶೇ.50ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸಬೇಕು. ಆದರೆ, ಇದೇ ಮೊದಲ ಬಾರಿಗೆ ಗಡ್ಕರಿ ನರಗುಂದ ಭಾಗದ ಬೈಪಾಸ್ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾಧೀನಕ್ಕೆ ಶೇ.100 ರಷ್ಟು ಅನುದಾನ ಒದಗಿಸಿ ದಾಖಲೆ ಬರೆದಿದ್ದಾರೆ ಎಂದು ತಿಳಿಸಿದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕೇಂದ್ರ ಸರ್ಕಾರ ಗದಗ ಜಿಲ್ಲೆಗೆ ವಿಶೇಷ ಅನುದಾನ ನೀಡಿದೆ. ಅಮೃತ ಸಿಟಿ ಯೋಜನೆಯಡಿ ₹195 ಕೋಟಿ, ಕೇಂದ್ರ ರಸ್ತೆ ನಿಧಿಗೆ ₹55 ಕೋಟಿ, ಗದಗ ಅಮೃತ ಭಾರತ್ ರೈಲ್ವೆ ನಿಲ್ದಾಣಕ್ಕೆ ₹23 ಕೋಟಿ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3630 ಮನೆಗಳ ಮಂಜೂರಾತಿ ಕೊಟ್ಟಿದೆ. ಸ್ವಚ್ಛ ಭಾರತ, ಉಜ್ವಲಾ ಯೋಜನೆ, ಜನೌಷಧ ಕೇಂದ್ರಗಳು, ಜಲಜೀವನ್ ಮಿಷನ್, ಆಹಾರ ಭದ್ರತೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿ ದೇಶದ ಅಭಿವೃದ್ಧಿಯ ವೇಗ ಹೆಚ್ಚಿಸಲಾಗಿದೆ. ರೈಲ್ವೆ ಮಾರ್ಗದ ವಿದ್ಯುದ್ದೀಕರಣದಲ್ಲಿ ಹೊಸ ದಾಖಲೆ ಬರೆಯಲಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿಸಿದ್ದಾರೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕಾರ್ಯದರ್ಶಿ ಲಿಂಗರಾಜ ಪಾಟೀಲ, ಜಗನ್ನಾಥಸಾ ಭಾಂಡಗೆ, ಶ್ರೀಪತಿ ಉಡುಪಿ, ಎಂ.ಎಂ. ಹಿರೇಮಠ, ರವಿ ದಂಡಿನ್, ಅನಿಲ ಅಬ್ಬಿಗೇರಿ, ಮಹೇಶ ದಾಸರ ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

ಕಳೆದ 11 ವರ್ಷಗಳಲ್ಲಿ ಇಂಗ್ಲೆಂಡ್ 6 ಪ್ರಧಾನಿಗಳನ್ನು, ಇಟಲಿ 5, ಅಮೆರಿಕಾ 4, ಜಪಾನ್ 4, ಕೆನಡಾ 3, ಜರ್ಮನಿ 3, ಮತ್ತು ಫ್ರಾನ್ಸ್ ಇಬ್ಬರು ಪ್ರಧಾನಿಗಳನ್ನು ಕಂಡಿವೆ. ಆದರೆ, ಭಾರತ ಸತತ 11 ವರ್ಷಗಳಿಂದ ಪ್ರಧಾನಿ ಮೋದಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವುದು ವಿಕಸಿತ ಭಾರತ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ