ಬ್ಯಾಡಗಿ: ಕ್ರೀಡೆಯು ಪ್ರತಿಯೊಬ್ಬರ ಜೀವನದ ಭಾಗವಾಗಬೇಕು ಮತ್ತು ಭಾರತವು ಜಾಗತಿಕ ಕ್ರೀಡಾ ಭೂಪಟದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂಬ ನಿಟ್ಟಿನಲ್ಲಿ ಫಿಟ್ ಇಂಡಿಯಾ ಪರಿಕಲ್ಪನೆಯೊಂದಿಗೆ ಕ್ರೀಡಾ ಭಾರತಿ ಕೆಲಸ ನಿರ್ವಹಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಕೋಚ್ ಡಾ. ಈಶ್ವರ ಅಂಗಡಿ ತಿಳಿಸಿದರು.
ಪುಣೆಯಲ್ಲಿ ಸ್ಥಾಪನೆ: ಅಥ್ಲೆಟಿಕ್ಸ್ ಕೋಚ್ ಆರ್.ಕೆ.ಪಡತರೆ ಮಾತನಾಡಿ, ಕ್ರೀಡಾಭಾರತಿ ಕಳೆದ 1992ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸ್ಥಾಪನೆಯಾಯಿತು, ಭಾರತದ ಸಾಂಪ್ರದಾಯಿಕ ಮತ್ತು ಸ್ಥಳೀಯ ಆಟಗಳನ್ನು ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುಂಚೂಣಿಗೆ ತರುವುದು ಇದರ ಪ್ರಮುಖ ಉದ್ದೇಶವಾಗಿತ್ತು, ಅಂದಿನಿಂದ ಇಂದಿನವರೆಗೆ ಈ ಸಂಸ್ಥೆಯು ದೇಶಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸಿ, ಲಕ್ಷಾಂತರ ಯುವ ಕ್ರೀಡಾಪಟುಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದೆ.
ಕ್ರೀಡಾ ಜ್ಞಾನ ಪರೀಕ್ಷೆ: ಟ್ವೆಕೆಂಡೋ ಕೋಚ್ ಪರಪ್ಪ ಮಾತನಾಡಿ, ಕ್ರೀಡಾ ಭಾರತಿಯು ಕೇವಲ ಮೈದಾನದ ಆಟಗಳಿಗೆ ಸೀಮಿತವಾಗಿಲ್ಲ. ಇದು ದೇಶಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ''''ಕ್ರೀಡಾ ಜ್ಞಾನ ಪರೀಕ್ಷೆಯನ್ನು ಆಯೋಜಿಸುತ್ತದೆ. ಇದರ ಮೂಲಕ ಯುವ ಪೀಳಿಗೆಗೆ ಭಾರತದ ಕ್ರೀಡಾ ಇತಿಹಾಸ ಮತ್ತು ಸಾಧಕರ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಇದರೊಂದಿಗೆ ಗ್ರಾಮೀಣ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ವಿವಿಧ ಕ್ರೀಡಾಕೂಟಗಳು, ತರಬೇತಿ ಶಿಬಿರಗಳು ಮತ್ತು ಯೋಗ ದಿನಾಚರಣೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.ಕ್ರೀಡಾ ಸಂಸ್ಕೃತಿ ಪುನರುಜ್ಜೀವನ: ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕರ್ನಾಟಕದ ಪ್ರಮುಖರಾದ ಬಸವರಾಜ ಮಾತನಾಡಿ, ಕ್ರೀಡೆಯು ಮಾನವನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ, ಭಾರತದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಲು ಮತ್ತು ಯುವ ಪೀಳಿಗೆಯಲ್ಲಿ ದೇಶಪ್ರೇಮ ಬೆಳೆಸಲು ಶ್ರಮಿಸುತ್ತಿರುವ ಕ್ರೀಡಾ ಭಾರತಿ ಒಂದು ಪ್ರಮುಖ ರಾಷ್ಟ್ರೀಯ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದೆ, ಇದು ಕೇವಲ ಕ್ರೀಡಾಕೂಟಗಳನ್ನು ಆಯೋಜಿಸುವ ಸಂಸ್ಥೆಯಲ್ಲ, ಬದಲಿಗೆ ಕ್ರೀಡೆಯ ಮೂಲಕ ರಾಷ್ಟ್ರ ನಿರ್ಮಾಣದ ಉದಾತ್ತ ಧ್ಯೇಯವನ್ನು ಹೊಂದಿರುವ ಒಂದು ದೊಡ್ಡ ಸಂಘಟನೆಯಾಗಿದ್ದು ಯುವಜನತೆ ಇಂತಹ ಸಂಘಟನೆಗಳೊಂದಿಗೆ ಕೈಜೋಡಿಸಿ ದೇಶದ ಕ್ರೀಡಾ ಪರಂಪರೆಯನ್ನು ಮುಂದುವರಿಸಬೇಕಾದ ಅಗತ್ಯವಿದೆ ಎಂದರು.