ಕ್ರೂರ ಸಾಮಾಜಿಕ ನೀತಿಗಳನ್ನು ಹೊಂದಿರುವ ಮನುಶಾಸ್ತ್ರ । ತ್ರಿಡಿ ರೂಪದಲ್ಲಿ ವಿನ್ಯಾಸಗೊಳಿಸಿರುವ ಸಂವಿಧಾನ ಪೀಠಿಕೆ ಅನಾವರಣ
ಕನ್ನಡಪ್ರಭ ವಾರ್ತೆ ರಾಮನಗರಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಂಬ ಶ್ರೇಷ್ಠ ಗ್ರಂಥದಿಂದ ಭಾರತದ ಕೀರ್ತಿ ಪ್ರಪಂಚದಲ್ಲಿ ಬೆಳಗುತ್ತಿದಿಯೇ ಹೊರತು ಕ್ರೂರ ಸಾಮಾಜಿಕ ನೀತಿಗಳನ್ನು ಹೊಂದಿರುವ ಮನುಶಾಸ್ತ್ರವನ್ನು ಅನುಸರಿಸುತ್ತಿದ್ದ ಸನಾತನ ಧರ್ಮದಿಂದಲ್ಲ ಎಂದು ಸಾಹಿತಿ ಸಾಹಿತಿ ಆದ ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.ನಗರದ ನಗರಸಭೆ ಕಚೇರಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ತ್ರಿಡಿ ರೂಪದಲ್ಲಿ ವಿನ್ಯಾಸಗೊಳಿಸಿರುವ ಸಂವಿಧಾನ ಪೀಠಿಕೆ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಸನಾತನ ಧರ್ಮದ ಮೂಲಕ ಭಾರತದ ಕೀರ್ತಿ ಪ್ರಪಂಚಕ್ಕೆ ಮಾದರಿಯಾಗಿತ್ತು ಎಂದು ಕೆಲವರು ಹೇಳಿಕೊಳ್ಳುತ್ತಾರೆ. ಆದರೆ, ಸನಾತನ ಧರ್ಮದ ಕಾರಣಕ್ಕಾಗಿ ಭಾರತದ ಸಮಾಜ ಪ್ರಪಂಚದ ಎದುರು ತಲೆ ತಗ್ಗಿಸುವಂತಿತ್ತು ಎಂದರು.ಮನುಶಾಸ್ತ್ರದ ಪ್ರಕಾರ ಮನುಷ್ಯರು ಮಾಡುವ ಅಪರಾಧ, ಮನುಷ್ಯರ ಮೇಲೆ ಮನುಷ್ಯರು ಮಾಡುವ ಅಪರಾಧಕ್ಕೆ ಅವರ ಹುಟ್ಟಿನಿಂದ ಶಿಕ್ಷೆ ನಿಗದಿಯಾಗಿತ್ತು. ಬ್ರಾಹ್ಮಣರು, ಶೂದ್ರರು, ದಲಿತರು, ಕ್ಷತ್ರಿಯರಿಗೆ ಬೇರೆ ಬೇರೆ ರೀತಿಯ ಶಿಕ್ಷೆಗಳನ್ನು ವಿಧಿಸಲಾಗುತ್ತಿತ್ತು. ಶೂದ್ರರು, ದಲಿತರು ಹಾಗೂ ಮಹಿಳೆಯರಿಗೆ ಓದುವ ಹಕ್ಕಿರಲಿಲ್ಲ. ಕೆಲ ಜಾತಿಗಳು ಊರಿನಿಂದ ಹೊರಗೆ ಬದುಕುವ, ರಸ್ತೆಗಳಲ್ಲಿ ಓಡಾಡಬಾರದಿತ್ತು. ಇನ್ನೂ ಕೆಲ ಜಾತಿಯವರನ್ನು ನೋಡುವುದನ್ನೂ ನಿಷೇಧ ಮಾಡಲಾಗಿತ್ತು. ಮನುಷ್ಯರನ್ನು ಸಮಾನವಾಗಿ ನೋಡದೆ, ಪ್ರಾಣಿಗಳಿಗಿಂತಲೂ ಕೀಳಾಗಿ ನೋಡುವಂತಹ ಸಾಮಾಜಿಕ ನೀತಿಗಳನ್ನು ಸನಾತನ ಧರ್ಮ ಅನುಸರಿಸಿತು. ಇಂತಹ ಕ್ರೂರವಾದ ಸಾಮಾಜಿಕ ನಿಯಮಗಳ ಮೇಲೆ 2 ಸಾವಿರ ವರ್ಷಗಳ ಕಾಲ ನಡೆದು ಬಂದ ಭಾರತ ಸನಾತನ ಧರ್ಮದ ಕಾರಣಕ್ಕೆ ಪ್ರಪಂಚಕ್ಕೆ ಮಾದರಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ಮನುಧರ್ಮ ಶಾಸ್ತ್ರ ಎಂದು ಕರೆಯಲ್ಪಡುವ ಗ್ರಂಥ, ಅದನ್ನು ಜನರು ಬರೆದುಕೊಂಡು, ತಮಗೆ ತಾವೇ ಅರ್ಪಿಸಿಕೊಂಡಿದ್ದಲ್ಲ. ಅದನ್ನು ಗುಪ್ತರು ಜಾತಿವಾದಿ ವ್ಯವಸ್ಥೆ ನೆಲೆಗೊಳಿಸಲು, ವರ್ಣಾಶ್ರಮ ಪದ್ಧತಿ ಅನುಸರಿಸುವ ಮೂಲಕವಾಗಿ ಜನರನ್ನು ಮೇಲು ಕೀಳಾಗಿ ವಿಂಗಡಿಸಲು ಬರೆಸಿದರು. ಇದನ್ನೇ ಭಾರತದ ಅಧಿಕೃತವಾಗಿರುವ ಸಾಮಾಜಿಕ ಸೂತ್ರ ಎಂದು ಹೇಳಿಕೊಂಡಿದ್ದರು. ಅದರ ಪ್ರಕಾರವಾಗಿ ಯಾರೊ ತಲೆ ಭಾಗದಲ್ಲಿ, ಇನ್ಯಾರೊ ಪಾದದ ಭಾಗದಲ್ಲಿ ಇರುತ್ತಾರೆ. ತಲೆಯ ಭಾಗದಲ್ಲಿರುವವರು ಆಡಳಿತಾತ್ಮಕವಾಗಿ ಮೇಲಿರಬೇಕು. ಅವರು ಹೇಳಿದಂತೆಯೇ ಸಮಾಜ ನಡೆಯಬೇಕಿತ್ತು. ದೇವರ ಪೂಜೆಯಿಂದ ಹಿಡಿದು ಮಂತ್ರಿಗಳಾಗುವುದು, ರಾಜಪುರೋಹಿತರಾಗುವುದು, ರಾಜ ಗುರುಗಳಾಗುವುದು ಎಲ್ಲವೂ ಮೇಲ್ಜಾತಿಯವರ ಹಕ್ಕು. ಕೆಳ ಜಾತಿಯವರಿಗೆ ಹಕ್ಕಿಲ್ಲ ಎಂದು ಪ್ರತಿಪಾದಿಸಲಾಗಿತ್ತು ಎಂದು ಕಿಡಿಕಾರಿದರು.ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನಕ್ಕೆ ಗೌರವ ಕೊಟ್ಟು ಪಾಲನೆ ಮಾಡುವ ಕರ್ತವ್ಯ ನಮ್ಮಗಳ ಮೇಲಿದೆ. ಸಂವಿಧಾನದ ನೆರಳಿನಡಿ ನಾವೆಲ್ಲರೂ ಬದುಕು ನಡೆಸುತ್ತಿದ್ದೇವೆ. ಸಂವಿಧಾನವು ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆಗೆ, ನಾಗರಿಕರ ಕರ್ತವ್ಯಗಳನ್ನು ಕೂಡ ವಿವರಿಸುತ್ತದೆ ಎಂದರು.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಪ್ರತಿಯೊಬ್ಬರು ಸಮಾನವಾಗಿ ಬದುಕು ನಡೆಸಲು ಸಂವಿಧಾನ ಅವಕಾಶ ಕೊಟ್ಟಿದೆ. ಕೋಮುವಾದವನ್ನು ಎದುರಿಸುವ ಶಕ್ತಿಯಿರುವುದು ಭಾರತ ಸಂವಿಧಾನಕ್ಕೆ ಮಾತ್ರ. ಹಾಗಾಗಿ ಮುಂದಿನ ಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರಸಭೆ ಆವರಣದಲ್ಲಿ ಸಂವಿಧಾನ ಪೀಠಿಕೆ ಅನಾವರಣ ಮಾಡಿದ್ದೇವೆ ಎಂದು ತಿಳಿಸಿದರು.
ಅಕ್ಕ ಅಕಾಡೆಮಿಯ ಡಾ.ಶಿವಕುಮಾರ್ ಸಂವಿಧಾನ ಪೀಠಿಕೆ ಬೋಧಿಸಿ ಮಾತನಾಡಿದರು. ಜಿಲ್ಲಾ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜು, ಕೆಎಸ್ಎಂಬಿ ಅಧ್ಯಕ್ಷ ಎಸ್.ಗಂಗಾಧರ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಸುರೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್, ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ, ರೈತ ಹೋರಾಟಗಾರ್ತಿ ಅನುಸೂಯಮ್ಮ, ನಗರಸಭೆ ಉಪಾಧ್ಯಕ್ಷೆ ಆಯಿಷಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪೈರೋಜ್ ಪಾಷ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶೇಖರ್, ಪೌರಾಯುಕ್ತ ಡಾ.ಜಯಣ್ಣ, ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಶಿವಕುಮಾರಸ್ವಾಮಿ, ಹಿಂದುಳಿದ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು....ಕೋಟ್ ...ಸರ್ವ ಶ್ರೇಷ್ಠ ಗ್ರಂಥವಾದ ಸಂವಿಧಾನವನ್ನು ರಕ್ಷಣೆ ಮಾಡದ ಹೊರತು ಮನುಕುಲಕ್ಕೆ ಉಳಿಗಾಲ ಇಲ್ಲ. ಸಂವಿಧಾನ ವಿರೋಧಿಸುವ ಶಕ್ತಿಗಳಿಗೆ ತಕ್ಕಪಾಠ ಕಲಿಸಬೇಕು.ಸಂವಿಧಾನದ ಪಠಣ ಎಲ್ಲೆಡೆ ಮುಳುಗುವಂತಾಗಬೇಕು.- ನರಸಿಂಹಯ್ಯ, ಜಿಲ್ಲಾಧ್ಯಕ್ಷ, ಪರಿಶಿಷ್ಟ ಜಾತಿ ಕಾಂಗ್ರೆಸ್ ವಿಭಾಗ....ಕೋಟ್ ...
ಆಡಳಿತ ಕೊಡುವ ಚುನಾಯಿತ ಪ್ರತಿನಿಧಿಗಳಿಗೆ ಈ ರೀತಿಯ ಹೊಸ ಹೊಸ ಚಿಂತನೆಗಳು ಇರಬೇಕು. ಆ ನಿಟ್ಟಿನಲ್ಲಿ ಶೇಷಾದ್ರಿ ಅವರು ಚಿಂತನೆ ನಡೆಸಿ ಸಂವಿಧಾನ ಪೀಠಿಕೆ ಅನಾವರಣದಂತಹ ಜನಪರ ಕೆಲಸ ಮಾಡುತ್ತಿರುವುದು ಶ್ಲಾಘನೀಯ.- ಸಿ.ಎಂ.ಲಿಂಗಪ್ಪ, ಮಾಜಿ ಶಾಸಕರು.---26ಕೆಆರ್ ಎಂಎನ್ 1.ಜೆಪಿಜಿರಾಮನಗರದ ನಗರಸಭೆ ಕಚೇರಿ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ತ್ರಿಡಿ ರೂಪದಲ್ಲಿ ವಿನ್ಯಾಸಗೊಳಿಸಿರುವ ಸಂವಿಧಾನ ಪೀಠಿಕೆಯನ್ನು ಅತಿಥಿಗಳು ಅನಾವರಣಗೊಳಿಸಿದರು.---------------------------