ಆಪರೇಶನ್ ಸಿಂದೂರದಿಂದ ಭಾರತದ ಕ್ಷಾತ್ರ ಶಕ್ತಿ ವಿಶ್ವವ್ಯಾಪಿ: ವಾದಿರಾಜ್ ಗೋಪಾಡಿ

KannadaprabhaNewsNetwork | Updated : May 25 2025, 11:56 PM IST

ಕಡಿಯಾಳಿಯ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಮಾತೃಮಂಡಳಿ ಮತ್ತು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂಗಳ ವತಿಯಿಂದ ಆಪರೇಶನ್ ಸಿಂದೂರದ ವಿಜಯೋತ್ಸವ ಮತ್ತು ಭಾರತೀಯ ಸೈನಿಕರ ಕ್ಷೇಮಕ್ಕಾಗಿ ದೇವಿಗೆ ಹೂವಿನ ಪೂಜೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ವಿಶ್ವದ ಯಾವುದೇ ದೇಶಕ್ಕೆ ಇಲ್ಲದ ಕ್ಷಾತ್ರ ಪರಂಪರೆ ನಮ್ಮ ದೇಶಕ್ಕಿದೆ. ಈ ಕ್ಷಾತ್ರ ಪರಂಪರೆಯನ್ನು ಹುಟ್ಟು ಹಾಕುವಲ್ಲಿ ಮಾತೆಯರು ನೀಡಿದ ಕೊಡುಗೆ ಬಹಳ ದೊಡ್ಡದಿದೆ. ಪಹಲ್ಗಾಂನಲ್ಲಿ ಉಗ್ರರು ಮಾತೆಯರ ಸಿಂದೂರವನ್ನು ಅಳಿಸಿದ ಘಟನೆಯ ನಂತರ ದೇಶದಲ್ಲಿ ಇದೀಗ ಮತ್ತೆ ಕ್ಷಾತ್ರ ಶಕ್ತಿ ಎಚ್ಚೆತ್ತುಕೊಂಡಿದೆ ಮತ್ತು ಆಪರೇಶನ್ ಸಿಂದೂರ ಮೂಲಕ ಅದೀಗ ವಿಶ್ವವ್ಯಾಪಿಯಾಗಿದೆ ಎಂದು ಸಾಮಾಜಿಕ ಚಿಂತಕ ಡಾ. ವಾದಿರಾಜ್ ಗೋಪಾಡಿ ಹೇಳಿದರು.ಅವರು ಶುಕ್ರವಾರ ಇಲ್ಲಿನ ಕಡಿಯಾಳಿಯ ಶ್ರೀ ಮಹಿಷಮರ್ಧಿನಿ ದೇವಾಲಯದಲ್ಲಿ ಮಾತೃಮಂಡಳಿ ಮತ್ತು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂಗಳ ವತಿಯಿಂದ ಆಪರೇಶನ್ ಸಿಂದೂರದ ವಿಜಯೋತ್ಸವ ಮತ್ತು ಭಾರತೀಯ ಸೈನಿಕರ ಕ್ಷೇಮಕ್ಕಾಗಿ ದೇವಿಗೆ ಹೂವಿನ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದ ಸೈನ್ಯ ಪಾಕಿಸ್ತಾನವನ್ನು ಕೆಲವೇ ದಿನಗಳಲ್ಲಿ ನಾಶ ಮಾಡಿಬಿಡಬಹುದಿತ್ತು. ಆದರೆ ಯುದ್ಧ ಕೇವಲ ಎರಡು ದೇಶಗಳ ಮೇಲೆ ಮಾತ್ರವಲ್ಲ ಇಡೀ ವಿಶ್ವದ ಮೇಲೆ ದೀರ್ಘ ಕಾಲದ ದುಷ್ಪರಿಣಾಮವನ್ನು ಬೀರುತ್ತದೆ. ಭಾರತೀಯರು ದೇಶ ವಿದೇಶಗಳಲ್ಲಿದ್ದಾರೆ. ಅವರ ಮೇಲೂ ಪರಿಣಾಮಗಳಾಗುತ್ತವೆ. ಆದ್ದರಿಂದ ಭಾರತ ಯುದ್ಧಕ್ಕೆ ಪರ್ಯಾಯವಾದ ರಾಜತಾಂತ್ರಿಕ ರೀತಿಯಲ್ಲಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ. ಇದನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಈಗ ಆಗಿರುವುದು ಕೇವಲ ಯುದ್ಧ ವಿರಾಮವೇ ಹೊರತು ಭಯೋತ್ಪಾದನೆಯ ವಿರುದ್ಧ ಯುದ್ಧವನ್ನು ಭಾರತ ನಿಲ್ಲಿಸಿಲ್ಲ ಎಂದವರು ವಿಶ್ಲೇಷಿಸಿದರು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾಧ್ಯಕ್ಷ ರಾಧಕೃಷ್ಣ ಮೆಂಡನ್, ಕಾರ್ಯದರ್ಶಿ ರಂಜಿತ್ ಶೆಟ್ಟಿ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಸಂಧ್ಯಾ ರಮೇಶ್, ಕಡಿಯಾಳಿ ಮಾತ್ರಮಂಡಳಿ ಅಧ್ಯಕ್ಷೆ ಪದ್ಮಾವತಿ ರತ್ನಾಕರ್, ಸಲಹೆಗಾರರಾದ ಸುಪ್ರಭಾ ಅಚಾರ್ಯ ವೇದಿಕೆಯಲ್ಲಿದ್ದರು. ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಮಹಿಳಾ ಘಟಕದ ಅಧ್ಯಕ್ಷ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದರು.

ಪ್ರಮುಖರಾದ ಸರೋಜ ಶೆಣೈ, ಉಷಾ ಸುವರ್ಣ, ವೀಣಾ ಎಸ್. ಶೆಟ್ಟಿ, ರಮಿತಾ ಶೈಲೇಂದ್ರ, ತಾರಾ ಸತೀಶ್, ದಿವಾಕರ್ ಶೆಟ್ಟಿ ಮಲ್ಲಾರ್, ಯಶೋಧಾ ಕೇಶವ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾತೆಯರೆಲ್ಲರಿಗೆ ಸಿಂದೂರ ಕರಡಿಗೆಗಳನ್ನು ವಿತರಿಸಿ ಗೌರವಿಸಲಾಯಿತು.