ರೇಷ್ಮೆ ಉತ್ಪಾದನೆಯಲ್ಲಿ ಶೇ.42 ರಷ್ಟು ಭಾರತದ ಪಾಲು

KannadaprabhaNewsNetwork | Published : Dec 22, 2024 1:33 AM

ಸಾರಾಂಶ

ಚಿತ್ರದುರ್ಗದಲ್ಲಿ ಆಯೋಜಿಸಿದ್ದ ರೇಷ್ಮೆ ಕೃಷಿ ಮೇಳ ಕಾರ್ಯಕ್ರಮವನ್ನು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಉದ್ಘಾಟಿಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ರೇಷ್ಮೆ ಉತ್ಪಾದನನೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಪಾಲು ಶೇ.42ರಷ್ಟಿದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಹೇಳಿದರು.

ನಗರದ ಎಸ್‌ಜಿ ಕಲ್ಯಾಣ ಮಂಟಪದಲ್ಲಿ ಕೇಂದ್ರ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕೇಂದ್ರ ರೇಷ್ಮೆ ಮಂಡಳಿ ಜವಳಿ ಸಚಿವಾಲಯ ಮತ್ತು ರೇಷ್ಮೆ ಇಲಾಖೆ ವತಿಯಿಂದ ರೇಷ್ಮೆ ಕೃಷಿ-ಐಸಿರಿಗೆ ದಾರಿ ಎಂಬ ವಿಷಯದೊಂದಿಗೆ ಹಮ್ಮಿಕೊಂಡಿದ್ದ ರೇಷ್ಮೆ ಕೃಷಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೇಷ್ಮೆ ಕೃಷಿ ಉತ್ಪಾದನೆಯಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ. ದೇಶ ಎಲ್ಲ ಭಾಗಗಳ ರೇಷ್ಮೆ ಕೃಷಿ ನೋಡುವುದರ ಸಲುವಾಗಿ ಕೇಂದ್ರ ರೇಷ್ಮೆ ಮಂಡಳಿ ಸ್ಥಾಪನೆಯಾಯಿತು. ಮಂಡಳಿ ಪ್ರಾರಂಭವಾದಾಗ ಜಾಗತೀಕವಾಗಿ ನಮ್ಮ ಉತ್ಪಾದನೆ ಶೇ.6ರಷ್ಟು ಇತ್ತು. ಇಂದು ಶೇ.42ರಷ್ಟು ಆಗಿದ್ದು, ಇದಕ್ಕೆ ರೈತರು ಹಾಗೂ ಕಾರ್ಮಿಕರ ಪರಿಶ್ರಮವೇ ಕಾರಣ. ದೇಶದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ರೇಷ್ಮೆ ಕೆಲಸಗಳು ನಡೆಯುತ್ತಿವೆ ಎಂದರು.

ಕೇಂದ್ರ ರೇಷ್ಮೆ ಮಂಡಳಿ ದೇಶಾದಾದ್ಯಂತ 159 ಶಾಖೆ ಹಾಗೂ ವಿಸ್ತರಣಾ ಶಾಖೆಗಳನ್ನು ಹೊಂದಿದೆ. ಇದರಲ್ಲಿ 28 ಕರ್ನಾಟಕ ರಾಜ್ಯದಲ್ಲಿವೆ. ಬಹಳಷ್ಟು ವಿಜ್ಞಾನಿಗಳು ರಾಜ್ಯದವರೇ ಇದ್ದಾರೆ. ವಿಶ್ವದ ರೇಷ್ಮೆ ಮಾರುಕಟ್ಟೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. 2030ರ ವೇಳೆಗೆ ಭಾರತವು ಶೇ.50ರಷ್ಟು ಉತ್ಪಾದನೆ ಮಾಡಿ ಚೀನಾವನ್ನು ಹಿಂದಿಕ್ಕಬೇಕು. ಈ ನಿಟ್ಟಿನಲ್ಲಿ ರೈತರು ಎದುರಿಸುವ ಸಮಸ್ಯೆ ಪರಿಹರಿಸಲು ಹಾಗೂ ಆರ್ಥಿಕ ನೆರವು ನೀಡಲು ರೇಷ್ಮೆ ಮಂಡಳಿ ಸದಾ ಸಿದ್ದವಿದೆ ಎಂದು ಹೇಳಿದರು.

ಸ್ವಯಂ ಚಾಲಿತ ರೇಷ್ಮೆ ನೂಲಿನ ಯಂತ್ರ ಖರೀದಿಗೆ ಕೇಂದ್ರ ಸರ್ಕಾರ ಶೇ.50ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.25ರಷ್ಟು ಸಹಾಯಧನ ನೀಡುತ್ತಿದೆ. ಉಳಿದ ಹಣವನ್ನು ರೈತರು ಪಾವತಿಸಬೇಕು. ಆದರೆ ಇದರ ಮೇಲಿನ ಜಿಎಸ್‌ಟಿಯನ್ನು ಖರೀದಿಸುವ ರೇಷ್ಮೆ ಕೆಲಸಗಾರರು ಭರಿಸಬೇಕು ಎಂದು ಅಳಲು ತೋಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಸ್ವಯಂ ಚಾಲಿನ ನೂಲಿನ ಯಂತ್ರ ಖರೀದಿ ಮೇಲಿನ ಜಿಎಸ್‌ಟಿ ತೆಗೆದು ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದರು.

ರೇಷ್ಮೆ ಕೃಷಿ ಇಲಾಖೆ ಹಚ್ಚುವರಿ ನಿರ್ದೇಶಕ ವೈ.ಟಿ.ತಿಮ್ಮಯ್ಯ ಮಾತನಾಡಿ, ರೇಷ್ಮೆ ಕೃಷಿ ಬೆಳೆಯು ಮಳೆ ಬಂದಾಗ ಕೊಡೆ ಹಿಡಿಯುವಂತೆ ಕಾಲ-ಕಾಲಕ್ಕೆ ಬದಲಾಗುವ ಬೆಳೆಯಾಗಿ ಮಾರ್ಪಾಡಾಗಿದೆ. ಇದನ್ನು ಅಪ್ಪಿಕೊಂಡಷ್ಟು ಮೇಲೆತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು. ರೇಷ್ಮೆ ಕೃಷಿ ಮೇಳದ ಅಂಗವಾಗಿ ರೇಷ್ಮೆ ಕೃಷಿಗೆ ಸಂಬಂಧಿಸಿದ ರೇಷ್ಮೆ ಕೃಷಿ ವಸ್ತು ಪ್ರದರ್ಶನ, ತಂತ್ರಜ್ಞಾನಗಳು, ಕಿರು ಪುಸ್ತಕಗಳು ಮತ್ತು ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು.

ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ ಗಾಂಧಿದಾಸ್, ವಿಜ್ಞಾನಿಗಳ ವಿಭಾಗದ ಡೀನ್ ಡಾ.ಎಲ್.ಕುಸುಮ, ಡಾ.ಭಾಗ್ಯ, ರೇಷ್ಮೆ ಇಲಾಖೆ ಉಪನಿರ್ದೇಶಕ ಮಾರಪ್ಪ ಬೀರಲದಿನ್ನಿ, ಅಮೃತ ಆಗ್ರ್ಯನಿಕ್ ಫರ್ಟಿಲೈಜರ್ ಕೆ.ನಾಗರಾಜ್, ಪ್ರಗತಿಪರ ಕೃಷಿಕ ಡಾ.ವೀರಭದ್ರಪ್ಪ ಸೇರಿದಂತೆ ರೇಷ್ಮೆ ಇಲಾಖೆ ಅಧಿಕಾರಿಗಳು, ರೇಷ್ಮೆ ಕೃಷಿಕರು ಇದ್ದರು.

Share this article