ಭಾರತ ಯುದ್ಧ ವಿರೋಧಿ ನಿಲುವು ಹೊಂದಲಿ: ಎಸ್‌ಯುಸಿಐ ಒತ್ತಾಯ

KannadaprabhaNewsNetwork |  
Published : Jun 21, 2025, 12:49 AM IST
ಪ್ಯಾಲೇಸ್ತೇನ್ ಹಾಗೂ ಇರಾನ್ ಮೇಲೆ ನಡೆಯುತ್ತಿರುವ ಸಾಮ್ರಾಜ್ಯಶಾಹಿ ಅಮೆರಿಕಾ ದಾಳಿ ಹಾಗೂ ನರಮೇಧವನ್ನು ಖಂಡಿಸಿ ಎಡ ಪಕ್ಷಗಳ ಕಾರ್ಯಕರ್ತರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪ್ಯಾಲೆಸ್ತೀನ್‌ ಹಾಗೂ ಇರಾನ್ ಮೇಲೆ ನಡೆಯುತ್ತಿರುವ ಸಾಮ್ರಾಜ್ಯಶಾಹಿ ದಾಳಿ ಹಾಗೂ ನರಮೇಧ ಖಂಡಿಸಿ ಎಡ ಪಕ್ಷಗಳ ಕಾರ್ಯಕರ್ತರು ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಳ್ಳಾರಿ: ಪ್ಯಾಲೆಸ್ತೀನ್‌ ಹಾಗೂ ಇರಾನ್ ಮೇಲೆ ನಡೆಯುತ್ತಿರುವ ಸಾಮ್ರಾಜ್ಯಶಾಹಿ ದಾಳಿ ಹಾಗೂ ನರಮೇಧ ಖಂಡಿಸಿ ಎಡ ಪಕ್ಷಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅಮೆರಿಕದ ಕುಮ್ಮಕ್ಕಿನಿಂದ ಇಸ್ರೇಲ್, ಪ್ಯಾಲೆಸ್ತೀನ್‌ ಗಾಜಾದಲ್ಲಿ ಹತ್ಯಾಕಾಂಡ ನಡೆಯುತ್ತಿದ್ದು, ಇರಾನ್ ಮೇಲೆ ಬಾಂಬ್ ದಾಳಿ ನಡೆಸಲಾಗುತ್ತಿದೆ. ಭಾರತ ಸರ್ಕಾರವು ಅಮೆರಿಕ ಹಾಗೂ ಇಸ್ರೇಲ್‌ನ ಯುದ್ಧಕೋರ ನೀತಿಯನ್ನು ಖಂಡಿಸಬೇಕು. ಯುದ್ಧ ವಿರೋಧಿ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಮಾತನಾಡಿ, ವಿವಿಧ ದೇಶಗಳಲ್ಲಿ ಯುದ್ಧದ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಸೃಷ್ಟಿಸಿ, ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿ, ಲಾಭ ಹೆಚ್ಚಿಸಿಕೊಳ್ಳುವುದೇ ಅಮೆರಿಕನ್ ಬಂಡವಾಳಶಾಹಿಗಳ ಕಸುಬಾಗಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಈ ಬಂಡವಾಳಶಾಹಿಗಳ ಪ್ರತಿನಿಧಿ ಆಗಿದ್ದಾರೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವ ಅಮೆರಿಕ, ಯುದ್ಧಗಳೆಂಬ ಕೃತಕ ಉಸಿರಾಟದ ಮೂಲಕ ತನ್ನ ಆರ್ಥಿಕತೆಗೆ ಜೀವ ತುಂಬಲು ಹೊರಟಿದೆ. ಇಂತಹ ಯುದ್ಧ ಪಿಪಾಸು ಅಮೆರಿಕ, ಇಸ್ರೇಲ್ ಹಾಗೂ ಇನ್ನಿತರ ಸಾಮ್ರಾಜ್ಯಶಾಹಿ ದೇಶಗಳಿಗೆ ಸರಿಯಾದ ಪಾಠ ಕಲಿಸಬೇಕಾದರೆ, ಜಗತ್ತಿನಾದ್ಯಂತ ಯುದ್ಧ ವಿರೋಧಿ ಹೋರಾಟಗಳನ್ನು, ದುಡಿಯುವ ಜನರ ಹೋರಾಟಗಳನ್ನು ತೀವ್ರಗೊಳಿಸಬೇಕು. ಈ ಮೂಲಕ ಸಾಮ್ರಾಜ್ಯಶಾಹಿ ನೀತಿಗಳನ್ನು ಹಿಮ್ಮೆಟ್ಟಿಸಬೇಕು ಎಂದು ಹೇಳಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸತ್ಯಬಾಬು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅಮೆರಿಕದ ಕುಮ್ಮಕ್ಕಿನಿಂದ ಇಸ್ರೇಲ್ ಪ್ಯಾಲೇಸ್ತೀನ್‌ನ ಗಾಜಾ ಪಟ್ಟಿಯ ಮೇಲೆ ಅನಾಗರಿಕ ಬಾಂಬು ದಾಳಿ ನಡೆಸುತ್ತಿದೆ. ಕದನ ವಿರಾಮವನ್ನು ನೀತಿಯನ್ನು ಉಲ್ಲಂಘಿಸಿದೆ. ಶಾಲೆ, ಆಸ್ಪತ್ರೆ, ಮಸೀದಿಗಳನ್ನು ಗುರಿಯಾಗಿಸಿಕೊಂಡು, ಇಸ್ರೇಲ್ ಈ ವರೆಗೆ 55 ಸಾವಿರ ಪ್ಯಾಲೆಸ್ತೀನ್‌ ನಾಗರಿಕರನ್ನು ಕಗ್ಗೊಲೆ ಮಾಡಿದೆ. ಇದರಲ್ಲಿ ಬಹುತೇಕ ಮಕ್ಕಳು, ಮಹಿಳೆಯರೇ ಆಗಿದ್ದಾರೆ. ಇತ್ತೀಚೆಗೆ ಇಸ್ರೇಲ್ ದೇಶ ಇರಾನ್ ಮೇಲೂ ಬಾಂಬ್ ದಾಳಿ ಪ್ರಾರಂಭಿಸಿ, ಅನೇಕ ಪ್ರಮುಖರನ್ನು ಹತ್ಯೆಗೈದಿದೆ ಎಂದು ಹೇಳಿದರು.

ಹಿರಿಯ ಕಾರ್ಮಿಕ ಮುಖಂಡ ಟಿ.ಜಿ. ವಿಠ್ಠಲ ಮಾತನಾಡಿದರು. ಕಾರ್ಮಿಕ ಮುಖಂಡ ಡಾ. ಪ್ರಮೋದ, ಎಡಪಕ್ಷಗಳ ಮುಖಂಡರಾದ ಎ. ದೇವದಾಸ, ಚಂದ್ರಕುಮಾರಿ, ಗುರುಮೂರ್ತಿ, ಸೋಮಶೇಖರ ಗೌಡ, ಶಾಂತಾ, ನಾಗರತ್ನಾ, ಹನುಮಪ್ಪ ಹಾಗೂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ