ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗದ ಮುನ್ನಾ ದಿನವಾದ ಶುಕ್ರವಾರ ನಡೆದ ಒಂದು ದಿನದ ಯೋಗ ಸಂಭ್ರಮದಲ್ಲಿ, ಪ್ರಾಣಾಯಾಮ, ಯೋಗಾಸನಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿ ಮಾತನಾಡಿದ ಅವರು, ಇಂದಿನ ಒತ್ತಡದ ಬದುಕಿಗೆ ಯೋಗವು ಹಲವು ರೀತಿಯಲ್ಲಿ ಸಹಕಾರಿಯಾಗಿದೆ ಎಂದರು.
ವ್ಯಕ್ತಿಯ ದೇಹಕ್ಕೆ ಆರೋಗ್ಯ ಸಮಸ್ಯೆ ಬಂದ ಮೇಲೆ ತಪಾಸಣೆಗೆ ಹೊಗುವ ಬದಲು ಪ್ರತಿ ನಿತ್ಯ ಯೋಗದ ಮೊರೆ ಹೋಗುವುದು ಒಳಿತು. ಯೋಗ ವಿಧಾನವು ಕೇವಲ ಕೈ ಕಾಲು ಇತರ ಅಂಗಾಂಗಗಳನ್ನು ಅಲ್ಲಾಡಿಸುವುದಲ್ಲ. ಕ್ರಮಬದ್ಧವಾಗಿ ಮಾಡುತ್ತಾ ಹೋದಾಗ ಅದರ ಪ್ರಭಾವ ಮತ್ತು ಪರಿಣಾಮ ಎರಡೂ ಸಾಧ್ಯವಿದ್ದು ಯೋಗವೇ ಜೀವನವಾಗಬೇಕೆಂದು ಸಲಹೆ ನೀಡಿದರು.ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮೀಜಿ ಮಾತನಾಡಿ, ಹವ್ಯಾಸ ಮತ್ತು ಅಭಿರುಚಿಗಳಿಂದ ಒಬ್ಬ ಮನುಷ್ಯನ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಲು ಯೋಗ ನಮಗೆ ಸಹಕಾರಿಯಾಗಬಲ್ಲದು. ಆರೋಗ್ಯ ಚೆನ್ನಾಗಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು.
ವಿಶ್ವ ಪರಿಸರ ದಿನದ ಅಂಗವಾಗಿ ಶ್ರೀ ಮಠದ ವತಿಯಿಂದ ಈ ಬಾರಿ ಸಸಿ ನೆಡುವ ಸಪ್ತಾಹದ ಮೂಲಕ ಸಾವಿರಾರು ಗಿಡಗಳನ್ನು ನೆಡಲಾಯಿತು. ಪರಿಸರ ಪ್ರಜ್ಞೆ ಎಲ್ಲರಲ್ಲೂ ಜಾಗೃತವಾಗಬೇಕೆಂದು ಕರೆ ನೀಡಿ, ವಿವಿಧ ಸಸಿಗಳನ್ನು ಈ ಸಂದರ್ಭದಲ್ಲಿ ವಿತರಿಸಿದರು.
ಸಮಾರಂಭದ ಸಮ್ಮಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಮಹಾಸ್ವಾಮೀಜಿ ಮಾತನಾಡಿ, ದೇಹದ ಸುಸ್ಥಿರತೆಗೆ ನಿತ್ಯ ಯೋಗವಿಧಾನ ಸಹಕಾರಿ. ಯೋಗ ನಮ್ಮಗಳ ನಡೆಯಲ್ಲಿದ್ದರೆ ಆ ದಿನ ಪೂರ್ತಿ ಕ್ರಿಯಾಶೀಲತೆಯಿಂದಿರಲು ಪುಷ್ಟಿ ನೀಡುತ್ತದೆ. ದೇಹದಲ್ಲಿ ಜಡತ್ವ ತೊಲಗಿಸಿ ಚೇತನದಿಂದಿರಲು ಪ್ರೇರಣೆ ಒದಗಿಸುತ್ತದೆ. ಶಾಂತಿ, ನೆಮ್ಮದಿಯನ್ನು ನಾವು ಕೊಂಡು ತರಲು ಸಾಧ್ಯವಿಲ್ಲ. ಯೋಗ, ಧ್ಯಾನ ಇತರ ಚಟುವಟಿಕೆಗಳಿಂದ ನಮಗೆ ನಾವೇ ತಂದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.ಸೋಮಾರಿತನ ನಮ್ಮ ಶತ್ರು. ಅಂತಹುದನ್ನು ಗೆಲ್ಲಲು ಮತ್ತು ವಿದ್ಯಾರ್ಥಿ ಜೀವನಕ್ಕೆ ಯೋಗ ತುಂಬಾ ಪ್ರಭಾವಶಾಲಿ ಅಂಶವಾಗಿದೆ. ಇದು ದೇಹ ಮತ್ತು ಮನಸ್ಸುಗಳ ಹತೋಟಿಗೆ ಮತ್ತು ಬುದ್ಧಿ ಭಾವಕ್ಕೆ ಸ್ಫೂರ್ತಿ ನೀಡುತ್ತದೆ. ಸಂಕಟ ಬಂದಾಗ ಇದರ ಮೊರೆ ಹೋಗದೆ ನಿತ್ಯ ಒಂದಿಷ್ಟು ನಿಮಿಷಗಳ ಕಾಲ ಯೋಗ ಮಾಡುತ್ತ ಸಾಗಿದರೆ ದೇಹಾರೋಗ್ಯ ಕಾಪಿಟ್ಟುಕೊಳ್ಳಲು ಸಾಧ್ಯವಿದೆ ಎಂದು ನುಡಿದರು.
ಸಾಣೇಹಳ್ಳಿಯಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಸ್ವಾಮಿಗಳ ವಿಭಾಗದಲ್ಲಿ ಪ್ರಥಮ ಸ್ಥಾನಕ್ಕೆ ಆಯ್ಕೆಯಾಗಿದ್ದ ಶ್ರೀ ಬಸವ ಮುರುಘೇಂದ್ರ ಸ್ವಾಮಿಗಳು, ರಾಷ್ಟಿೀಯ ಯೋಗ ಶಿಕ್ಷಣ ಹಾಗೂ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಬಿ.ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಎಂ.ಆರ್ ಮಂಜುನಾಥ್, ಕಾರ್ಯದರ್ಶಿ ಎಲ್.ಎಸ್ ಬಸವರಾಜ ಸೇರಿದಂತೆ ನಗರದ ವಿವಿಧ ಬಡಾವಣೆಗಳ ಯೋಗ ತರಬೇತುದಾರರು ವೇದಿಕೆಯಲ್ಲಿದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ವಚನ ಪ್ರಾರ್ಥನೆ ಹಾಗು ಭಜನೆ ನಡೆಸಿಕೊಟ್ಟರು.