ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತ ಸ್ಥಿರ: ಕೇಂದ್ರ ಸಚಿವ ಜೋಶಿ

KannadaprabhaNewsNetwork |  
Published : Apr 26, 2026, 03:15 AM IST
ಹುಬ್ಬಳ್ಳಿ ಅಮರಗೋಳದಲ್ಲಿ ನಡೆದ ಇನ್‌ಕಾಮೆಕ್ಸ್‌ನಲ್ಲಿ ಕೆಎಲ್‌ಇ ಸಂಸ್ಥೆಯ ಗೌರವಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜಾಗತಿಕ ಮಟ್ಟದಲ್ಲಿ ಸಾಕಷ್ಟು ಅಸ್ಥಿರತೆ ಇದೆ. ಅತ್ತ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ಸಂಘರ್ಷವಿದೆ. ಇವೆಲ್ಲವೂ ಇಂಧನ ಪೂರೈಕೆ ಮತ್ತು ಪೂರೈಕೆ ಸರಪಳಿಗಳಿಗೆ ಅಡ್ಡಿಪಡಿಸಿವೆ. ಆದರೂ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್‌ ಪಂಪ್‍ ಕೂಡ ಖಾಲಿಯಾಗಿಲ್ಲ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ:

ಮಧ್ಯಪ್ರಾಚ್ಯ ಹಾಗೂ ಯುರೋಪನಲ್ಲಿನ ಸಂಘರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇದೆ. ಆದರೂ ಭಾರತ ಗಮನಾರ್ಹ ಸ್ಥಿರತೆ ಪ್ರದರ್ಶಿಸುತ್ತಿದೆ. ಇದೇ ವಿಕಸಿತ ಭಾರತದತ್ತ ದೃಢ ಹೆಜ್ಜೆಗಳೊಂದಿಗೆ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಅಮರಗೋಳದ ಎಪಿಎಂಸಿ ಪ್ರಾಂಗಣದಲ್ಲಿನ ವಿವಿಧೋದ್ದೇಶ ವಸ್ತು ಪ್ರದರ್ಶನದಲ್ಲಿ ದಶಕದ ನಂತರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಆಯೋಜಿಸಿರುವ ಇನ್‌ಕಾಮೆಕ್ಸ್‌-2026 ಉದ್ಘಾಟಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಸಾಕಷ್ಟು ಅಸ್ಥಿರತೆ ಇದೆ. ಅತ್ತ ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ನಡೆಯುತ್ತಿದೆ. ರಷ್ಯಾ ಮತ್ತು ಉಕ್ರೇನ್‌ ಮಧ್ಯೆ ಸಂಘರ್ಷವಿದೆ. ಇವೆಲ್ಲವೂ ಇಂಧನ ಪೂರೈಕೆ ಮತ್ತು ಪೂರೈಕೆ ಸರಪಳಿಗಳಿಗೆ ಅಡ್ಡಿಪಡಿಸಿವೆ. ಆದರೂ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್‌ ಪಂಪ್‍ ಕೂಡ ಖಾಲಿಯಾಗಿಲ್ಲ. ಇದು ನಮ್ಮ ವ್ಯವಸ್ಥೆಗಳ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. ಜಾಗತಿಕ ಅಸ್ಥಿರತೆ ಹೊರತಾಗಿಯೂ ದೇಶಾದ್ಯಂತ ನಿರಂತರ ಇಂಧನ ಪೂರೈಕೆಯಾಗುತ್ತಿದೆ ಎಂದರು.

ಭಾರತವು ನಾಲ್ಕು ಟ್ರಿಲಿಯನ್‌ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮುತ್ತಿದೆ. ಇದು ಆರ್ಥಿಕ ಸದೃಢತೆಯ ಲಕ್ಷಣ ಎಂದ ಸಚಿವರು, ಉತ್ಪಾದನಾ ಆಧಾರಿತ ಪ್ರೋತ್ಸಾಹಕ ಯೋಜನೆಯ ಯಶಸ್ಸು ಎಂದು ನುಡಿದರು.

ಭಾರತವು ಎಲೆಕ್ಟ್ರಾನಿಕ್ಸ್‌ನ ನಿವ್ವಳ ಆಮದುದಾರ ರಾಷ್ಟ್ರದಿಂದ ಪ್ರಮುಖ ರಫ್ತುದಾರ ರಾಷ್ಟ್ರವಾಗಿ ಪರಿವರ್ತನೆಗೊಂಡಿದೆ ಮತ್ತು ಜಾಗತಿಕ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಗಣನೀಯ ಪಾಲು ಹೊಂದಿದೆ ಎಂದ ಅವರು, ಪ್ರಮುಖ ಜಾಗತಿಕ ತಂತ್ರಜ್ಞಾನ ಕಂಪನಿಗಳ ಇತ್ತೀಚಿನ ರಫ್ತುಗಳ ಪೈಕಿ ಹೆಚ್ಚಿನ ಭಾಗವು ಈಗ ಭಾರತದಲ್ಲೇ ತಯಾರಾಗುತ್ತಿದೆ. ರಾಷ್ಟ್ರೀಯ ಒಟ್ಟು ರಫ್ತು 820 ಬಿಲಿಯನ್ ಡಾಲರ್ ದಾಟಿದೆ ಎಂದು ಹೇಳಿದರು.

ಉಕ ಮೇಲೆ ಗಮನ:

ಪ್ರಾದೇಶಿಕ ಬೆಳವಣಿಗೆ ಉತ್ತೇಜಿಸಲು ಪ್ರಮುಖವಾಗಿ ಮೂಲಸೌಕರ್ಯ ಒದಗಿಸಬೇಕು. ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗದ ಪರಿಷ್ಕೃತ ಪ್ರಸ್ತಾವನೆಯನ್ನು ಪರಿಸರ ಅನುಮತಿಗಾಗಿ ಸಲ್ಲಿಸಲಾಗಿದೆ. ಇದು ಈ ಭಾಗದ ಅಭಿವೃದ್ಧಿಗೆ ಪೂರಕವಾಗಲಿದೆ. ಹೊಸ ಬಂದರು ನಿರ್ಮಾಣ, ಅವುಗಳ ಸಂಪರ್ಕಕ್ಕೆ ದಾರಿ ಮಾಡಿಕೊಡುತ್ತದೆ. ಲಾಜಿಸ್ಟಿಕ್ಸ್ ಸವಾಲುಗಳನ್ನು ಕಡಿಮೆ ಮಾಡುತ್ತದೆ ಎಂದರು.

ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಹುಬ್ಬಳ್ಳಿ-ಧಾರವಾಡ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ ಜಾಗತಿಕ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು 2035ರ ವೇಳೆಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ. 12ರಿಂದ ಶೇ. 6ಕ್ಕೆ ಇಳಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಇಂಧನ ಕ್ಷೇತ್ರದಲ್ಲಿ ಭಾರತವು ನವೀಕರಿಸಬಹುದಾದ ಇಂಧನದ ವಿಶ್ವದ ಮೂರನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿರುವುದು ಹೆಮ್ಮೆಯ ಸಂಗತಿ ಎಂದರು.

ಮಾರ್ಗದರ್ಶನ ಅಗತ್ಯ:

ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಉತ್ತರ ಕರ್ನಾಟಕದ ಪ್ರಗತಿಯನ್ನು ಬೆಂಗಳೂರಿನೊಂದಿಗೆ ಹೋಲಿಸುವುದನ್ನು ನಿಲ್ಲಿಸಿ, ಈ ಭಾಗಕ್ಕೆ ತನ್ನದೇ ಆದ ಸ್ವತಂತ್ರ ಬೆಳವಣಿಗೆಯ ಹಾದಿ ರೂಪಿಸಿಕೊಳ್ಳಬೇಕು ಎಂದರು.

ಬಿಯಾಂಡ್ ಬೆಂಗಳೂರು ಎಂದಾಕ್ಷಣ ಹುಬ್ಬಳ್ಳಿ-ಧಾರವಾಡ ಎನ್ನಲಾಗುತ್ತದೆ. ಆದರೆ, ಇಲ್ಲಿನ ಕೈಗಾರಿಕೆ ಪ್ರದೇಶದಲ್ಲಿ ಭೂ ಬೆಲೆ ಜಾಸ್ತಿ ಇದೆ ಎನ್ನಲಾಗುತ್ತಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಸುತ್ತ ನವಲಗುಂದ, ಕುಂದಗೋಳ, ಹಾವೇರಿ, ಗದಗ ಸೇರಿದಂತೆ ಹತ್ತಾರು ಕಡೆಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶವಿದೆ. ಹೀಗಾಗಿ ಇದನ್ನು ಕೈಗಾರಿಕೋದ್ಯಮಿಗಳಿಗೆ ಮನವರಿಕೆ ಮಾಡುವ ಕೆಲಸವನ್ನು ಸರ್ಕಾರ ಮತ್ತು ಕೆಸಿಸಿಐಗಳಂತಹ ಸಂಸ್ಥೆಗಳು ಮಾಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ಗೌರವಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಜೆಎಸ್‌ಡಬ್ಲ್ಯೂ ಗ್ರೂಪ್ ಚೇರಮನ್ ಸಜ್ಜನ ಜಿಂದಾಲ್ ಅವರ ಅನುಪಸ್ಥಿತಿಯಲ್ಲಿ ಮುರಗನ್ ಅವರಿಗೆ ಕೆಸಿಸಿಐನಿಂದ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್.ಎಚ್. ಕೋನರಡ್ಡಿ, ಎಸ್.ವಿ. ಸಂಕನೂರ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕೆಎಲ್ ಸಂಸ್ಥೆ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕಾರ್ಯಕ್ರಮದಲ್ಲಿ ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಮಹದೇವ ಕರಮರಿ, ರವಿ ಅಂಗಡಿ, ಪ್ರಕಾಶ ಶೃಂಗೇರಿ, ಸಿದ್ದೇಶ್ವರ ಕಮ್ಮಾರ, ಶಶಿಧರ ಶೆಟ್ಟರ, ಉದಯ ರೇವಣಕರ, ವೀರಣ್ಣ ಕಲ್ಲೂರ, ಜಯಪ್ರಕಾಶ ತೆಂಗಿನಕಾಯಿ, ಪಿ.ಕೆ. ಮುದಗಲ್, ಎಂ.ಸಿ. ಹಿರೇಮಠ, ಲಿಂಗನಗೌಡರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದರ್ಶನದಲ್ಲಿ ಮೇ ೨ರಂದು ಬೃಹತ್ ಉದ್ಯೋಗ ಮೇಳ
ಪ್ರಾಮಾಣಿಕ ಶ್ರಮದಿಂದ ಸಿಕ್ಕ ಗೆಲುವು ನಿಜವಾದುದು: ರಾಜೇಶ್ ಧನವಾಡಕರ್