ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಭಾರತೀಯ ಸೇನೆ ಸಿಂದೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಉಗ್ರರನ್ನು ಸೆದೆ ಬಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ವಿಜಯೋತ್ಸವ ಆಚರಿಸಿದರು.ಪಟ್ಟಣದ ಶ್ರೀ ರಂಗನಾಥ ದೇಗುಲದಲ್ಲಿ ದೇವರಿಗೆ ಸೈನಿಕರ ಹೆಸರಲ್ಲಿ ಪೂಜೆ ಸಲ್ಲಿಸಿ, ಸೈನಿಕರ ಒಳತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ನಂತರ ದೇಗುಲದ ಮುಂಭಾಗ ಭಾರತ ಮಾತೆ ಮತ್ತು ಭಾರತೀಯ ಸೈನಿಕರಿಗೆ ಜೈಕಾರ ಕೂಗಿ ಈಡುಗಾಡಿ ಒಡೆದು ಸಂಭ್ರಮಾಚರಣೆ ನಡೆಸಿದರು.
ಬಳಿಕ ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು ಮಾತನಾಡಿ, ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ತಾಣಗಳ ಮೇಲೆ ಭಾರತ ಸಿಂದೂರ ಕಾರ್ಯಚರಣೆ ಆರಂಭಿಸಿ ಸುಮಾರು 70ಕ್ಕೂ ಹೆಚ್ಚು ಉಗ್ರರನ್ನು ಸೆದೆ ಬಡಿಯುವ ಮೂಲಕ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆಸಿದ ಕೃತ್ಯಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀಕಾರ ತೀರಿಸಲು ಮುಂದಾಗಿರುವುದು ಶ್ಲಾಘನೀಯ.ಈ ಹಿಂದೆ ಕಾಶ್ಮೀರದಲ್ಲಿ ಉಗ್ರರು ಹಿಂದೂಗಳನ್ನು ಹುಡುಕಿ ಹತ್ಯೆ ಮಾಡುವ ಮೂಲಕ ಮಹಿಳೆಯ ಸಿಂದೂರ ಅಳಿಸಿದ್ದರು. ಆದರೆ, ಭಾರತ ಸರ್ಕಾರ ಆಪರೇಷನ್ ಸಿಂದೂರ ಹೆಸರಿನ ಮೂಲಕ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಇನ್ನು ಮುಂದೆ ಯಾವುದೇ ಉಗ್ರರು ಹಾಗೂ ಉಗ್ರ ರಾಷ್ಟ್ರಗಳು ಭಾರತದ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಬೇಕು ಎಂದು ಆಗ್ರಹಿಸಿದರು.
ಮಂಡ್ಯ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೇರಿದಂತೆ ಸ್ಕೌಟ್ ವಿದ್ಯಾರ್ಥಿಗಳ ಜೊತೆಯಲ್ಲಿದ್ದು, ಈಡುಗಾಯಿ ಒಡೆದು ಸಂಭ್ರಮಾಚರಣೆ ನಡೆಸಿದರು.ಆಪರೇಷನ್ ಸಿಂದೂರ ಕಾರ್ಯಾಚರಣೆ: ಮೋದಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಮಂಡ್ಯಉಗ್ರರು ಪಹಲ್ಗಾಂನಲ್ಲಿ ಹಿಂದೂಗಳನ್ನು ಹತ್ಯೆಗೈದ ಪ್ರತೀಕಾರವಾಗಿ ಭಾರತ ನಡೆಸಿರುವ ಆಪರೇಷನ್ ಸಿಂದೂರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ.ನಿಂಗರಾಜ್‌ಗೌಡ ಅವರು ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಆಪರೇಷನ್ ಸಿಂದೂರ ಕಾರ್ಯಾಚರಣೆ ಭಾರತೀಯ ಸೇನೆಯು ಉಗ್ರರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಾಚರಣೆಯನ್ನು ಭಾರತವೂ ಮುಂದುವರೆಸಿ ಪಾಕಿಸ್ತಾನದ ಎಲ್ಲಾ ಉಗ್ರಗಾಮಿ ಭಯೋತ್ಪಾದನೆ ತರಬೇತಿ ಶಿಬಿರಗಳನ್ನು ಸಂಪೂರ್ಣವಾಗಿ ನಾಶ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರ ದಿಟ್ಟ ವಿದೇಶಾಂಗ ನೀತಿಯ ಪರಿಣಾಮವಾಗಿ ವಿಶ್ವದ ಬಹುತೇಕ ದೇಶಗಳು ಭಾರತವನ್ನು ಬೆಂಬಲಿಸುತ್ತಿವೆ. ಇದರ ಸದುಪಯೋಗವನ್ನು ಭಾರತ ಪಡೆದು ಈ ಕೂಡಲೇ ಪಾಕ್ ಆಕ್ರಮೀತ ಕಾಶ್ಮೀರವನ್ನೂ ಸಂಪೂರ್ಣವಾಗಿ ವಶಪಡಿಸಿಕೊಳ್ಳುವಂ ತೆ ಡಾ.ಈ.ಸಿ.ನಿಂಗರಾಜ್ ಗೌಡ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಹರಿಯುವ ಸಿಂಧೂ, ರಾವಿ, ಝೇಲಮ್ ನದಿ ಸೇರಿದಂತೆ ಎಲ್ಲಾ ನದಿಗಳ ನೀರನ್ನೂ ಅಣೆಕಟ್ಟುಗಳನ್ನು ಕಟ್ಟುವುದರ ಮೂಲಕ ಸಂಪೂರ್ಣವಾಗಿ ಉಪಯೋಗಿಸಿಕೊಂಡು ಆ ಎಲ್ಲಾ ನೀರನ್ನೂ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ, ರಾಜಸ್ಥಾನ, ಚಂಡೀಗಢ, ಹಿಮಾಚಲ ಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳ ಕೃಷಿ, ಕೈಗಾರಿಕೆಗೆ ಬಳಸುವಂತೆ ಕೇಂದ್ರ ಸರ್ಕಾರವೂ ತ್ವರೀತವಾಗಿ ಕಾರ್ಯೋನ್ಮಖವಾಗುವಂತೆ ಕೋರಿದ್ದಾರೆ.