ಚನ್ನಪಟ್ಟಣ: ಭಾರತೀಯ ಸಂಸ್ಕೃತಿ ವಿಶ್ವಕ್ಕೆ ದಾರಿದೀಪವಾಗಿರುವ ಶ್ರೇಷ್ಠ ಪರಂಪರೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂದು ಮೃತುಂಜಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಂದು ಆಧುನಿಕತೆಯ ಭರಾಟೆಯಲ್ಲಿ ನಾವು ನಮ್ಮತನ ಮತ್ತು ಸಂಸ್ಕಾರವನ್ನು ಮರೆತಿರುವುದು ವಿಷಾದಕರ. ಮಕ್ಕಳಲ್ಲಿ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಕುಟುಂಬ ಹಾಗೂ ಸಮಾಜದ ಮೇಲಿದೆ. ಸಂಸ್ಕಾರವಿಲ್ಲದ ಶಿಕ್ಷಣ ಅಪೂರ್ಣವಾಗಿದ್ದು, ಸಂಸ್ಕೃತಿ ಉಳಿದಾಗಲೇ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಮಾನವೀಯತೆ ಬೆಳೆಯಲು ಸಾಧ್ಯ, ಭಾರತ ವಿಕಾಸ ಪರಿಷತ್ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ನಗರಸಭೆ ಅಧ್ಯಕ್ಷ ಬಿ.ಎಂ.ನಾಗೇಶ್ ಮಾತನಾಡಿ, ಇಂದಿನ ಯುವಜನತೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯ ಹೆಚ್ಚಿದೆ. ಭಾರತ ವಿಕಾಸ ಪರಿಷತ್ ಯುವಜನರಲ್ಲಿ ಸೇವಾ ಮನೋಭಾವ, ನಾಯಕತ್ವ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉತ್ತಮ ವೇದಿಕೆಯಾಗಿದ್ದು, ಇಂತಹ ಸಂಘಟನೆಗಳೊಂದಿಗೆ ಯುವಕರು ಕೈಜೋಡಿಸಬೇಕು ಎಂದು ಹೇಳಿದರು.ಭಾರತ ವಿಕಾಸ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ್ಯ ವಿಭಾಗೀಯ ಸಂಪರ್ಕ ಸಂಚಾಲಕ ಗುರುನಾಥ ರಾವ್ ಪದಾಧಿಕಾರಿಗಳಿಗೆ ದಾಯಿತ್ವ ಬೋಧನೆ ಮಾಡಿ ಮಾತನಾಡಿ, ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಪಸರಿಸುವ ಅಗತ್ಯ ಇದೆ. ಪರಿಸರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಭಾರತ ವಿಕಾಸ ಪರಿಷತ್ತಿನ ಸೇವೆ ಅಮೂಲ್ಯವಾಗಿದೆ. ಇಂದಿನ ದಿನಗಳಲ್ಲಿ ವಿಭಜನೆಯ ಮನೋಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಂಘಟನೆ ಮೂಲಕ ಮನಸ್ಸುಗಳನ್ನು ಬೆಸೆಯುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಭಾ.ವಿ.ಪ ದಕ್ಷಿಣ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ನೂತನ ಸದಸ್ಯರಿಗೆ ದಾಯಿತ್ವ ಬೋಧನೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಾಂತ್ಯ ಉಪಾಧ್ಯಕ್ಷ ಗುರುಮಾದಯ್ಯ, ಗೌರವಾಧ್ಯಕ್ಷ ಬಿ. ಎನ್. ಕಾಡಯ್ಯ, ಹಿರಿಯ ರಂಗಭೂಮಿ ಕಲಾವಿದ ಗೋಪಾಲಗೌಡ, ಮದ್ದೂರು ಭಾವಿಪ ಟ್ರಸ್ಟ್ ಅಧ್ಯಕ್ಷ ಡಿ.ಪಿ.ಸ್ವಾಮಿ, ರಾಮನಗರ ವಾಲ್ಮೀಕಿ ಶಾಖೆ ಅಧ್ಯಕ್ಷ ಕೆ.ಎಸ್. ರಾಜು, ಭಾವಿಪ ಮದ್ದೂರು ಶಾಖೆ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷರಾದ ಕರಿಯಪ್ಪ, ಜಯಲಕ್ಷ್ಮಮ್ಮ ನಂಜಪ್ಪ, ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಖಜಾಂಚಿ ವಿ.ಟಿ.ರಮೇಶ್, ರಾಧಿಕಾರವಿಕುಮಾರಗೌಡ, ಶೈಲಜಾ ಶಿವಾನಂದ ಇತರರಿದ್ದರು.
ಚನ್ನಪಟ್ಟಣದಲ್ಲಿ ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಆಯೋಜಿಸಿದ್ದ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಮೃತುಂಜಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಇತರರು ಉದ್ಘಾಟಿಸಿದರು.