ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ಶ್ರೇಷ್ಠ

KannadaprabhaNewsNetwork | Published : Nov 19, 2024 12:49 AM

ಸಾರಾಂಶ

ಸಾವಿರಾರು ವರ್ಷಗಳ ಪ್ರಾಚೀನತೆ, ಇತಿಹಾಸ ಹೊಂದಿರುವ ಭಾರತದ ಪರಂಪರೆ ಜಗತ್ತಿಗೆ ಮಹತ್ತರ ಕೊಡುಗೆ ನೀಡಿದ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿಯಾಗಿದೆ ಎಂದು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧೀಶರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಸಾವಿರಾರು ವರ್ಷಗಳ ಪ್ರಾಚೀನತೆ, ಇತಿಹಾಸ ಹೊಂದಿರುವ ಭಾರತದ ಪರಂಪರೆ ಜಗತ್ತಿಗೆ ಮಹತ್ತರ ಕೊಡುಗೆ ನೀಡಿದ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿಯಾಗಿದೆ ಎಂದು ಶ್ರೀ ಕ್ಷೇತ್ರ ಹರಿಹರಪುರ ಪೀಠಾಧೀಶರಾದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ಅವರು ಪಟ್ಟಣದ ಡಾ. ಗೌರೀಶಂಕರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ರಾಮಕೃಷ್ಣ ಆಂಗ್ಲಮಾಧ್ಯಮ ಪ್ರೌಢಶಾಲೆ, ಬಿಆರ್ ವಿ ಮಾಡೆಲ್ ಸ್ಕೂಲ್ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ವಸಂತೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತ ಜಗತ್ತಿಗೆ ಅಹಿಂಸೆ, ಧಾರ್ಮಿಕ ಸಾಮರಸ್ಯ, ವಿಶ್ವಶಾಂತಿಗೆ ಭದ್ರ ಬುನಾದಿಯಾಗಿದೆ ಎಂದರು.

ಜಗತ್ತಿನ ಇತರೆ ಸಂಸ್ಕೃತಿಗಳು ಸತ್ಯವೊಂದೇ ಮಾರ್ಗವೊಂದೇ ಎಂದು ಹೇಳಿದರೆ, ಭಾರತೀಯ ಸಂಸ್ಕೃತಿ ಮಾತ್ರ ಸತ್ಯವೊಂದೇ ಮಾರ್ಗ ಹಲವು ಎಂದು ಹೇಳಿದೆ. ಪ್ರಾಚೀನ ಋಷಿಮುನಿಗಳ ಆಧ್ಯಾತ್ಮ, ಯೋಗದ ಕೊಡುಗೆಯಿಂದ ಹಿಡಿದು ಸೊನ್ನೆಯ ಕೊಡುಗೆ ನೀಡಿದ ಬ್ರಹ್ಮಗುಪ್ತನಂತಹ ಧಾರ್ಮಿಕರು, ವಿದ್ವಾಂಸರು ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಆಧ್ಯಾತ್ಮಿಕತೆಯೆಂದರೆ 60 ವರ್ಷಗಳ ನಂತರದ ಚಿಂತನೆಯಲ್ಲ. ಅದು ಅಂತರಂಗದ ಚಿಂತನೆ. ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಬೇಕು. ಉತ್ತಮ ಸಂಸ್ಕಾರ ಕಲಿಸಬೇಕು. ಮಕ್ಕಳವೈಯಕ್ತಿಕ ಉನ್ನತಿ ಎಂದರೆ ಕೇವಲ ಓದುವುದು, ಮಕ್ಕಳಿಗೆ ಬೇಕಾದಷ್ಟು ಆಸ್ತಿ ಮಾಡಿಡುವುದಲ್ಲ. ಅವರಲ್ಲಿ ಲೌಕಿಕ ಅಭಿವೃದ್ಧಿ, ಆತ್ಮೋದ್ಧಾರ ಮಾಡಬೇಕು ಎಂದು ಹೇಳಿದರು.

ಬದುಕು ಎಂದರೆ ಬಹಳ ಗಹನವಾದ ವಿಷಯವಾಗಿದೆ. ಬದುಕಿನ ಪಯಣ ಅಷ್ಟು ಸುಲಭವಲ್ಲ. ಅನಿಶ್ಚಿತತೆಗಳ ಸರಮಾಲೆಯೇ ಎದರಿಸಬೇಕಾಗುತ್ತದೆ. ಎಲ್ಲಿ, ಯಾವಾಗ, ಯಾವ ಕ್ಷಣದಲ್ಲಾದರೂ ಏನು ಬೇಕಾದರೂ ಸಂಭವಿಸಬಹುದು. ಬದುಕು ಶಾಶ್ವತವಲ್ಲ. ಜೀವನದ ನಡೆ ನುಡಿ, ಆಚರಣೆಗಳು, ಭಗಂತನಲ್ಲಿ ಶ್ರದ್ಧೆ ಭಕ್ತಿಯಿದ್ದಲ್ಲಿ ಮಾತ್ರ ಬದುಕು ಪರಿಪೂರ್ಣವಾಗಲು ಸಾಧ್ಯ. ದ್ವೇಷದಿಂದ ದ್ವೇಶವನ್ನು ಗೆಲ್ಲಲು ಸಾದ್ಯವಿಲ್ಲ. ಪ್ರೀತಿಯಿಂದ ಮಾತ್ರ ಅದು ಸಾಧ್ಯ. ಮನುಷ್ಯನಾಗಿ ದೇವರ ಋಣ, ಋಷಿ ಋಣ, ಪಿತೃಋಣ, ಮನುಷ್ಯ ಋಣ, ಭೂತ ಋಣ ಇವುಗಳನ್ನು ತೀರಿಸುವುದು ಕರ್ತವ್ಯವಾಗಿದೆ ಎಂದು ಹೇಳಿದರು.

ಏಕಗ್ರತೆ, ಶುದ್ಧ ಮನಸ್ಸು ಇದ್ದರೆ ಮಾತ್ರ ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ಅಹಂಕಾರ ಮನುಷ್ಯನ ಬದುಕಿನ ಮೊದಲ ಶತ್ರು. ಮನುಷ್ಯನಲ್ಲಿ ಅಹಂ ಎನ್ನುವ ಭಾವನೆ ಇರಬಾರದು. ನಾಸ್ತಿಕರು ದೇವರ ಆರಾಧನೆ ಮಾಡದಿದ್ದರೂ ಪ್ರಕೃತಿಯ ಆರಾಧಕರಾಗಿ ಆರಾಧನೆ ಮಾಡುತ್ತಾರೆ. ಪ್ರಕೃತಿ ಆರಾಧನೆ ಕೂಡ ಪರಮೇಶ್ವರನ ಆರಾಧನೆಯಾಗಿದೆ. ಜೀವನದಲ್ಲಿ ಎಲ್ಲರನ್ನು ಸಮಾನರನ್ನಾಗಿ ಕಾಣಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ, ತರಗತಿಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಬಹುಮಾನ ವಿತರಿಸಲಾಯಿತು.

ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನಡೆಯಿತು. ಶಿವಮೊಗ್ಗ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಟ್ರಸ್ಟ್ ನ ಟ್ರಸ್ಟಿ ಶೋಭಾ ಆರ್ ವೆಂಕಟರಮಣ, ಶ್ರೀ ರಾಮಕೃಷ್ಣ ಆಂಗ್ಲಮಾದ್ಯಮ ಪ್ರೌಢಶಾಲೆ ಅಧ್ಯಕ್ಷ ತ್ಯಾಗರಾಜ್ ಮತ್ತಿತರರು ಇದ್ದರು.

Share this article