ಭಾರತೀಯ ಶಿಕ್ಷಣ ಪದ್ಧತಿ ಮತ್ತೆ ತಲೆ ಎತ್ತುತ್ತಿದೆ: ಹೊಸಬಾಳೆ

KannadaprabhaNewsNetwork |  
Published : May 01, 2025, 12:50 AM IST
30ಹೊಸಬಾಳೆ | Kannada Prabha

ಸಾರಾಂಶ

ಚೇರ್ಕಾಡಿ ಗ್ರಾಮದ ಕೇಶವನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ವಿದ್ಯಾಕೇಂದ್ರದ ಲೋಕಾರ್ಪಣೆ ಸಮಾರಂಭ ನಡೆಯಿತು.

ರಾಷ್ಟ್ರೋತ್ಥಾನ ಪರಿಷತ್‌ನ ವಿದ್ಯಾಕೇಂದ್ರದ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ವಿದ್ಯಾದಾನ ಭಾರತದ ಮಣ್ಣಿನ ಗುಣ. ಆದರೆ ಭಾರತಕ್ಕೆ ದಾಳಿ ಇಟ್ಟ ಪರಕೀಯರು ಈ ಗುಣವನ್ನು ಮಣ್ಣುಗೂಡಿಸಿದರು. ಅದು ಮತ್ತೆ ತಲೆ ಎತ್ತುತ್ತಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಆಶಾವಾದ ವ್ಯಕ್ತಪಡಿಸಿದರು.

ಅವರು ಬುಧವಾರ ಇಲ್ಲಿನ ಚೇರ್ಕಾಡಿ ಗ್ರಾಮದ ಕೇಶವನಗರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ವಿದ್ಯಾಕೇಂದ್ರದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ವಿದ್ವಾಂಸ ಧರ್ಮಪಾಲ್ ಎಂಬವರ ಅಧ್ಯಯನದ ಪ್ರಕಾರ 18ನೇ ಶತಮಾನಕ್ಕೂ ಮುನ್ನ ಭಾರತದ ಬಂಗಾಳ ಪ್ರೆಸಿಡೆನ್ಸಿಯಲ್ಲಿ 5 ಲಕ್ಷ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ 3 ಲಕ್ಷ ಶಾಲೆಗಳಿದ್ದವು. ಇವೆಲ್ಲವೂ ಗುರುಕುಲ ಪದ್ಧತಿಯಲ್ಲಿ ಭಾಷೆ, ವ್ಯಾಕರಣ, ಸಾಹಿತ್ಯ, ಜೀವನ ಪದ್ಧತಿ ಇತ್ಯಾದಿ ಹಲವು ಮುಖಗಳಲ್ಲಿ ಶಿಕ್ಷಣ ಕೊಡುತ್ತಿದ್ದವು, ಆ ಕಾಲದಲ್ಲಿ ಭಾರತೀಯ ಶಿಕ್ಷಣ ಮೇರು ಪರ್ವತ ತಲುಪಿತ್ತು. ಇದನ್ನು ಬ್ರಿಟಿಷರು ಧ್ವಂಸ ಮಾಡಿದರು. ಸ್ವಾತಂತ್ರ್ಯ ನಂತರವಾದರೂ ಭಾರತೀಯ ಸಮಗ್ರ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವಲ್ಲಿ ಆಡಳಿತ ವ್ಯವಸ್ಥೆ ವಿಫಲವಾಗಿದೆ. ನಮ್ಮ ಸಂಸ್ಕೃತಿ, ಇತಿಹಾಸವನ್ನು ಸರಿಯಾಗಿ ಕಲಿಸಲಾಗುತ್ತಿಲ್ಲ. ಭಾರತೀಯ ಜ್ಞಾನಪರಂಪರೆಯನ್ನು ಯುವಪೀಳಿಗೆಗೆ ತಿಳಿಸಿಲ್ಲ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಉಗ್ರಗಾಮಿಗಳೂ ಹುಟ್ಟಿಕೊಂಡಿದ್ದಾರೆ, ಭ್ರಷ್ಟಾಚಾರಿ ನ್ಯಾಯಧೀಶರೂ ಸೃಷ್ಟಿಯಾಗಿದ್ದಾರೆ. ಇದಕ್ಕೆಲ್ಲಾ ಪರಿಹಾರವಾಗಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದವರು ಹೇಳಿದರು.

ಇಸ್ರೋದ ನಿಕಟಪೂರ್ವ ಅಧ್ಯಕ್ಷ ಡಾ.ಎಸ್.ಸೋಮನಾಥ್ ಮಾತನಾಡಿ, ನಮ್ಮ ದೇಶದ ಶಿಕ್ಷಣ ವ್ಯವಸ್ಥೆ, ಜ್ಞಾನ ಶಾಖೆಗಳು ಪ್ರಪಂಚದಾದ್ಯಂತ ಜನರನ್ನು ಸೆಳೆಯುತ್ತಿದೆ. ನಮ್ಮ ಪೂರ್ವಿಕರಲ್ಲಿ ಖಗೋಳಶಾಸ್ತ್ರ, ನಕ್ಷತ್ರಗಳ ಬಗ್ಗೆ ಅಪಾರ ಜ್ಞಾನವಿತ್ತು, ತಂತ್ರಜ್ಞಾನವಿತ್ತು, ವಿದೇಶಿ ಪ್ರವಾಸಿಗರು ಅದನ್ನು ತಮ್ಮ ದೇಶಕ್ಕೆ ಕೊಂಡೊಯ್ದು ತಮ್ಮದೆಂದರು ಎಂದರು.ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥರು ಆರ್ಶೀವಚನ ನೀಡುತ್ತಾ, ನಮ್ಮ ಶತ್ರುಗಳನ್ನು ದೇಶದೊಳಗೆ ಸ್ವಾಗತಕೋರುವ ಜನಪ್ರತಿನಿಧಿಗಳು ನಮ್ಮ ನಡುವೆ ಇದ್ದಾರೆ. ಇದಕ್ಕೆ ಸಂಸ್ಕಾರಯುತ ಶಿಕ್ಷಣದ ಕೊರತೆಯೇ ಕಾರಣ ಎಂದು ವಿಷಾಧಿಸಿದರು.

ಇಂದು ಕೆಲವು ಶಿಕ್ಷಣ ಸಂಸ್ಥೆಗಳು ಪೂತನಿಯೋಪಾದಿಯಲ್ಲಿ ಮಕ್ಕಳನ್ನು ಆಕರ್ಷಿಸುತ್ತಿವೆ. ಅಲ್ಲಿ ಸಂಸ್ಕೃತಿಯ ಬದಲು ವಿಕೃತಿಯನ್ನು ತುಂಬಲಾಗುತ್ತಿದೆ. ಇದರಿಂದ ಈ ದೇಶದ ಅಂತಃಸತ್ವವೇ ಕುಗ್ಗಿಹೋಗುತ್ತಿದೆ. ಅದನ್ನು ಸಮರ್ಥವಾಗಿ ಎದುರಿಸುವ ಮಾತೃಭೂಮಿಯನ್ನು ಪ್ರೀತಿಸುವ ದೊಡ್ಡ ಪಡೆ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಸ್ಥಾನೀಯ ಸಮಿತಿ ಅಧ್ಯಕ್ಷ ಸಾಧು ಸಾಲ್ಯಾನ್, ಕಾರ್ಯದರ್ಶಿ ಋಷಿರಾಜ್, ರಾಷ್ಟ್ರೀಯ ಪರಿಷತ್ ಅಧ್ಯಕ್ಷ ಎಂ.ಪಿ ಕುಮಾರ್ ಉಪಸ್ಥಿತರಿದ್ದರು.

ರಾಷ್ಟ್ರೋತ್ಥಾನ ಪಪೂ ಕಾಲೇಜಿನ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಪ್ರಸ್ತಾವಿಕ ಮಾತನಾಡಿದರು. ಶಾಲಾ ಪ್ರಾಂಶುಪಾಲೆ ಪೂರ್ಣಿಮಾ ಜಿ ವಂದಿಸಿದರು. ನಂದಿನಿ ಮತ್ತು ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದಜಿ ರಾಮ್‌ ಜಿ: ಡಾ। ಸುಧಾಕರ್‌
ದೂರು ಕೊಡಲು ಹೋದವರ ಮೇಲೆಯೇ ಪೊಲೀಸರ ದರ್ಪ