ಭಾರತೀಯ ನಾರಿ ಜಗತ್ತಿಗೆ ಆದರ್ಶ: ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

KannadaprabhaNewsNetwork | Published : Mar 9, 2024 1:33 AM

ಸಾರಾಂಶ

ಕೃಷ್ಣಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಿವಿಧ ಇಲಾಖೆ, ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕೇಂದ್ರೀಕೃತ ಶಾಸನಗಳ ಜಾಗೃತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿಸಮಾಜದಲ್ಲಿ ಮಹಿಳೆಯರ ಸ್ಥಾನ ಅತ್ಯಂತ ಪೂಜ್ಯವಾಗಿದ್ದು, ಶಾಸ್ತ್ರಗಳಲ್ಲಿ ಮಹಿಳೆಯರಿಗೆ ವಿಶೇಷ ಗೌರವವನ್ನು ನೀಡಲಾಗಿದೆ. ಭಾರತೀಯ ನಾರಿಯರು ತಮ್ಮ ಆದರ್ಶವನ್ನು ಜಗತ್ತಿಗೆ ತಮ್ಮ ಸಾಧನೆಗಳ ಮೂಲಕ ಪರಿಚಯಿಸಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕೃಷ್ಣಮಠದ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.ಅವರು ಗುರುವಾರ ಕೃಷ್ಣಮಠದ ರಾಜಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಿವಿಧ ಇಲಾಖೆ, ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕೇಂದ್ರೀಕೃತ ಶಾಸನಗಳ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಸರ್ಕಾರ ಮಹಿಳೆಯರ ಹಿತ ರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ತಮಗೆ ತೊಂದರೆಗೆ ಆದಾಗ ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಮಹಿಳೆಯರಿಗೆ ಈ ದಿನದ ಹೊರತಾಗಿಯೂ ಪ್ರತಿದಿನವೂ ಸಮಾಜದಲ್ಲಿ ಗೌರವ ಸಿಗುವಂತಗಬೇಕು. ಹೆಣ್ಣು ಹಿಂದಿನಿಂದಲೂ ಬದುಕು ಹಾಗೂ ಆಸ್ತಿತ್ವಕ್ಕಾಗಿ ಹೋರಾಟ ಮಾಡಿಕೊಂಡೆ ಬಂದಿದ್ದು, ಇಂದಿಗೂ ಅದು ಕೊನೆಗೊಂಡಿಲ್ಲ. ಇನ್ನಾದರೂ ಅವರಿಗೆ ಶಿಕ್ಷಣ ಹಾಗೂ ಆರ್ಥಿಕ ಸ್ವತಂತ್ರ ನೀಡುವುದರೊಂದಿಗೆ ಉತ್ತಮ ಬದುಕು ರೂಪಿಸಿಕೊಳ್ಳುವಂತೆ ಆಗಬೇಕು ಎಂದರು.ವೈಕುಂಠ ಬಾಳಿಗ ಕಾನೂನು ವಿದ್ಯಾಲಯದ ನಿರ್ದೇಶಕಿ ಡಾ.ನಿರ್ಮಲಾ ಕುಮಾರಿ ವಿಶೇಷ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಹಾದಿಮನಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ಮಹಿಳಾ ಮಂಡಲದ ಒಕ್ಕೂಟ ಅಧ್ಯಕ್ಷೆ ಸರಳಾ ಕಾಂಚನ್, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶೋಭಾ ಕಲ್ಕೂರ್, ಕಾರ್ಯದರ್ಶಿ ಪ್ರೇಮಾ, ಕುಂದಾಪುರ ತಾಲೂಕು ಮಹಿಳಾ ಮಂಡಲದ ಒಕ್ಕೂಟ ಅಧ್ಯಕ್ಷೆ ರಾಧಾ ದಾಸ್, ಕಾರ್ಕಳ ತಾಲೂಕು ಮಹಿಳಾ ಮಂಡಲ ಒಕ್ಕೂಟ ಅಧ್ಯಕ್ಷೆ ಯಶೋಧ ಶೆಟ್ಟಿ, ತಾಲೂಕು ಮಹಿಳಾ ಮಂಡಲದ ಗೌರವಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ. ಸ್ವಾಗತಿಸಿದರು. ಭಾಗೀರಥಿ ಆಚಾರ್ಯ ನಿರೂಪಿಸಿದರು. ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟ ಕಾರ್ಯದರ್ಶಿ ವಸಂತಿ ಕೊರಾವ್ ವಂದಿಸಿದರು.

Share this article