ಹಾವೇರಿ: ವಿಶ್ವವೇ ಭಾರತದತ್ತ ಮುಖ ಮಾಡುವಂತಾಗಿದ್ದು, ವೃಷ್ಟಿ-ಸಮಷ್ಟಿಗಳನ್ನು ಏಕತ್ರಗೊಳಿಸುವ ರಾಜಮಾರ್ಗ ಭಾರತೀಯ ಸಂಸ್ಕೃತಿಯಾಗಿದೆ. ಇಂತಹ ಸಂಸ್ಕಾರ, ಸಂಸ್ಕೃತಿ ಮತ್ತು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಉಜ್ಜಯನಿ ಸದ್ಧರ್ಮಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಭೂಮಿತಾಯಿ ಸಕಲ ಜೀವರಾಶಿಗಳಿಗೂ ಆಶ್ರಯದಾತೆ. ನಮ್ಮ ಜಗತ್ತಿನ ಎಲ್ಲ ವ್ಯವಹಾರಗಳು ನಡೆಯುವುದು ಇಲ್ಲಿಯೇ, ಭೂಮಿತಾಯಿಗಿಂತ ಮಿಗಿಲಾದ ದೈವವಿಲ್ಲ. ಆದ್ದರಿಂದ ಭೂಮಿಯನ್ನು ಮಾತೃಭೂಮಿ ಎಂದು ಕರೆಯುವುದು. ಈ ಮಾತೃಭೂಮಿ ಕಲುಷಿತವಾಗುವುದು ಎಂದರೆ ನಮ್ಮ ಜೀವನವನ್ನೇ ನಾವೇ ಹಾಳು ಮಾಡಿದಂತಾಗುತ್ತದೆ ಎಂದು ಹೇಳಿದರು.
ಸಮ್ಮುಖ ವಹಿಸಿದ್ದ ಕರಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಇಂದು ಐಶಾರಾಮಿ ಬದುಕು ಸಾಗಿಸುತ್ತಿದ್ದಾನೆ. ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳು ಇವೆ. ಆದರೆ ಭೌತಿಕವಾಗಿ ಶ್ರೀಮಂತರಾದರೂ ಮಾನಸಿಕವಾಗಿ ಬಡವರಾಗಿದ್ದಾರೆ. ಧಾರ್ಮಿಕ ಸಭೆ-ಸಮಾರಂಭಗಳು ನಮ್ಮನ್ನು ಮಾನಸಿಕವಾಗಿ ಸದೃಢವಾಗಿಸುತ್ತವೆ. ಜೀವಜಂಜಾಟದಿಂದ ಮುಕ್ತನಾಗಲು ಇಷ್ಟಲಿಂಗ ಪೂಜಾ ಅನುಷ್ಠಾನ ಅತಿ ಅವಶ್ಯವಾಗಿದೆ. ಜಗದ್ಗುರುಗಳು ನಡೆಸಿಕೊಡುವ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಹೇಳಿದರು.ವರ್ತಕ ಪಿ.ಡಿ. ಶಿರೂರ ಮಾತನಾಡಿ, ಹಾವೇರಿ ಮರಿಕಲ್ಯಾಣ ಎಂದು ಪ್ರಖ್ಯಾತ ಪಡೆದಿದೆ. ವೀರಶೈವ ಸಮಾಜ ಬಹುಸಂಖ್ಯಾತರಾಗಿದ್ದಾರೆ. ಆದರೆ ಉಪಪಂಗಡಗಳ ಹೆಸರಲ್ಲಿ ಸಮಾಜ ವಿಘಟನೆಯಾಗಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವಂತಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಒಗ್ಗಟ್ಟನ್ನು ತರುವ ಕೆಲಸ ಮಾಡುತ್ತವೆ ಎಂದು ಹೇಳಿದರು.
ಸಮಾರಂಭದಲ್ಲಿ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಸಿದ್ಧನಂದೀಶ್ವರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಹಿರೇಮಠ, ಉಮೇಶ ಹತ್ತಿಮತ್ತೂರ, ನಾಗರಾಜ ಕೂಸನೂರ, ಸಂತೋಷ ಹಿರೇಮಠ, ಶಂಭುಲಿಂಗ ಅಗಡಿ, ಕಲ್ಲಪ್ಪ ಮೆಣಸಿನಹಾಳ ಮತ್ತಿತರರು ಉಪಸ್ಥಿತರಿದ್ದರು. ಅಕ್ಕಮಹಾದೇವಿ ಭರತನೂರಮಠ ಪ್ರಾರ್ಥಿಸಿದರು. ತಮ್ಮಣ್ಣ ಮುದ್ದಿ ಸ್ವಾಗತಿಸಿದರು. ಹನುಮಂತಗೌಡ ಗೊಲ್ಲರ ಕಾರ್ಯಕ್ರಮ ನಿರೂಪಿಸಿದರು. ವಿರೂಪಾಕ್ಷಪ್ಪ ಹತ್ತಿಮತ್ತೂರ ವಂದಿಸಿದರು.