ಆಮೆಗತಿಯಲ್ಲಿ ಸಾಗಿದ ಭಾರತದ ಮಾನವ ಸಂಪನ್ಮೂಲ ಅಭಿವೃದ್ಧಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್

KannadaprabhaNewsNetwork |  
Published : Jan 24, 2026, 03:15 AM IST
ಬಳ್ಳಾರಿ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ-2025 ಮತ್ತು ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031 ರವರೆಗೆ ವರದಿ ತಯಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಉದ್ಘಾಟಿಸಿದರು.  | Kannada Prabha

ಸಾರಾಂಶ

ಒಂದು ದೇಶದ ಅಭಿವೃದ್ಧಿ ಎಂದರೆ ಮಾನವನ ಅಭಿವೃದ್ಧಿ ಅಳತೆಯ ಮೂಲಕ ಹೇಳಬಹುದಾಗಿದೆ.

ಬಳ್ಳಾರಿ: ಜಿಲ್ಲಾ ಮಾನವ ಅಭಿವೃದ್ಧಿ-2025 ಮತ್ತು ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-203 ರವರೆಗೆ ವರದಿ ತಯಾರಿಕೆ ಕುರಿತಂತೆ ಅಧಿಕಾರಿಗಳು ನೀಡುವ ವರದಿಯಲ್ಲಿನ ಅಂಶಗಳು ಜಿಲ್ಲೆಯ ಅಭಿವೃದ್ಧಿ ನಿರ್ಣಯಿಸುವ ಪೂರಕ ಅಂಶಗಳಾಗಿರಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಹೇಳಿದರು.ನಗರದ ಜಿಪಂ ಹೊಸ ಅಬ್ದುಲ್ ನಜೀರಸಾಬ್ ಸಭಾಂಗಣದಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ-2025 ಮತ್ತು ಸಮಗ್ರ ಸುಸ್ಥಿರ ಜಿಲ್ಲಾ ಅಭಿವೃದ್ಧಿ ದೂರದೃಷ್ಟಿ ಯೋಜನೆ-2031ರವರೆಗೆ ವರದಿ ತಯಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ವರದಿಗಳ ತಯಾರಿಕೆಗೆ ದತ್ತಾಂಶಗಳು, ಸೂಚಕಗಳು ಹಾಗೂ ಸೂಚ್ಯಂಕಗಳ ಕುರಿತು ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಒಂದು ದೇಶದ ಅಭಿವೃದ್ಧಿ ಎಂದರೆ ಮಾನವನ ಅಭಿವೃದ್ಧಿ ಅಳತೆಯ ಮೂಲಕ ಹೇಳಬಹುದಾಗಿದೆ. ಪ್ರತಿ ರಾಷ್ಟ್ರಗಳು ಇಂತಹ ವರದಿಗಳನ್ನು ತಯಾರಿಸುತ್ತವೆ. ವಿಶ್ವದಲ್ಲಿಯೇ ಆರ್ಥಿಕತೆಯಲ್ಲಿ ಭಾರತ ಉನ್ನತ ಸ್ಥಾನದಲ್ಲಿದ್ದು, ಅಭಿವೃದ್ಧಿಯಲ್ಲಿದೆ. ಆದರೆ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತ ದೇಶ 130ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಮಾನವ ಸಂಪನ್ಮೂಲ ಅಭಿವೃದ್ಧಿ ಹೊಂದುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾ ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಜನರ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಆದಾಯದಂತಹ ಅಂಶಗಳನ್ನು ಅಳೆಯುವ ಬಹಳ ಮುಖ್ಯವಾದ ವರದಿಯಾಗಿದ್ದು, ಎಲ್ಲಾ ಇಲಾಖೆ ಅಧಿಕಾರಿಗಳು ವರದಿ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕು. ನಿಖರವಾದ ಅಂಕಿ- ಅಂಶಗಳನ್ನು ನೀಡುವಿದರಿಂದ ಬಳ್ಳಾರಿಯು ಜಿಲ್ಲಾ ಮಾನವ ಅಭಿವೃದ್ಧಿಯಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.

ಅಭಿವೃದ್ಧಿಗೆ ಪೂರಕವಾಗಿ ವರದಿಗಳನ್ನು ಸಿದ್ಧಪಡಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಳೆಯ ದತ್ತಾಂಶಗಳನ್ನು ನೀಡದೇ, ಇತ್ತೀಚಿನ ದತ್ತಾಂಶಗಳನ್ನು ಮಾತ್ರ ನೀಡಬೇಕು. ವರದಿ ಉತ್ತಮವಾಗಿ ರೂಪುಗೊಳ್ಳಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ನಿಖರ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಜಿ.ಪಂ.ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಶಿಕ್ಷಣ, ಆರೋಗ್ಯ ಪೋಷಣಾ ಸ್ಥಿತಿ, ಜೀವನೋಪಾಯ, ಮೂಲಸೌಕರ್ಯ, ಸಾಮಾಜಿಕ ಒಳಗೊಳ್ಳುವಿಕೆ ಹಾಗೂ ಪರಿಸರದ ಸುಸ್ಥಿರತೆ ಸೇರಿದಂತೆ ವಿವಿಧ ಮಾನವ ಅಭಿವೃದ್ಧಿ ಸೂಚ್ಯಂಕಗಳ ಆಧಾರದ ಮೇಲೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಸಾಧಿಸುವುದು ಈ ವರದಿಗಳ ಪ್ರಮುಖ ಗುರಿಯಾಗಿರುತ್ತದೆ. ಅಧಿಕಾರಿಗಳು ದತ್ತಾಂಶ ಸಂಗ್ರಹಣೆ, ವಿಶ್ಲೇಷಣೆ, ಇಲಾಖಾವಾರು ಸಹಕಾರ ಮತ್ತು ಕಾಲಮಿತಿಯೊಳಗೆ ಮಾಹಿತಿಯನ್ನು ಒದಗಿಸಬೇಕು. ಜಿಲ್ಲೆಯ ಸಮಗ್ರ ಹಾಗೂ ಸಮತೋಲನೆಯುತ ಅಭಿವೃದ್ಧಿಗಾಗಿ ಇಲಾಖೆಗಳ ನಡುವೆ ಪರಸ್ಪರ ಸಮನ್ವಯ ಅಗತ್ಯ ಎಂದು ಅವರು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ(ನಿವೃತ್ತ) ಶ್ರೀನಿವಾಸ್ ರಾವ್ ಮಾತನಾಡಿ, ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ಅತ್ಯಂತ ಮಹ್ವತ್ವವಾದ ಮೌಲ್ಯವಿದೆ. ಇದು ದೀರ್ಘ, ಆರೋಗ್ಯಕರ ಮತ್ತು ಸೃಜನಾತ್ಮಕ ಜೀವನ ನಡೆಸಲು, ಶಿಕ್ಷಣ ಪಡೆಯಲು ಮತ್ತು ಯೋಗ್ಯ ಜೀವನ ಮಟ್ಟಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂದಲು ಅವಕಾಶ ನೀಡುತ್ತದೆ. ಹಾಗಾಗಿ ಅಧಿಕಾರಿಗಳು ತಾವು ತಯಾರಿಸುವ ವರದಿಯಿಂದ ಜಿಲ್ಲೆಯ ಅಭಿವೃದ್ಧಿ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಿರಂಜನ್ ಮಾತನಾಡಿದರು.

ಇದೇ ವೇಳೆ ರಾಷ್ಟ್ರೀಯ ಮತದಾರರ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಎಡಿಸಿ ಮಹಮ್ಮದ್ ಝುಬೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪೂರೆ, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಜಿಪಂ ಯೋಜನಾಧಿಕಾರಿ ಪ್ರಮೋದ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ