ಚಕ್ರಬಾವಿ ಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ, ಶಸ್ತ್ರ ಚಿಕಿತ್ಸೆ
ಕಣ್ಣು ಅತಿ ಸೂಕ್ಷ್ಮವಾದ ಅಂಗವಾಗಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಅಮೂಲ್ಯವಾದ ಕಣ್ಣನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆಂಗಳೂರಿನ ಅರುಣ್ ಗುರೂಜಿ ಹೇಳಿದರು.
ತಾಲೂಕಿನ ಚಕ್ರಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸಾಯಿ ನೇತ್ರಾಲಯ ಕಣ್ಣಿನ ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಯ ಎಸ್‌ಟಿಎಂಸಿ ಅಧ್ಯಕ್ಷ ನಾರಾಯಣ್ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮೀಣ ಭಾಗದಲ್ಲಿ ಯುವಕರು ಸೇರಿ ಆರೋಗ್ಯ ಶಿಬಿರ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಗ್ರಾಮೀಣರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಆರೋಗ್ಯದ ಕಾಳಜಿ ವಹಿಸುವುದಿಲ್ಲ. ಜ್ವರ, ಕೆಮ್ಮು ಇತರೆ ಕಾಯಿಲೆಗಳು ಬಂದರೂ ಒಂದು ಮಾತ್ರೆ ನುಂಗಿ ಉದಾಸೀನ ಮಾಡುತ್ತಾರೆ. ಆದರೆ ಕಣ್ಣಿನ ಬಗ್ಗೆ ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು. ಕಣ್ಣಿಗೆ ಏನಾದರೂ ತೊಂದರೆಯಾದರೆ ಅದನ್ನು ಮೊದಲ ಹಂತದಲ್ಲೇ ಬಗೆಹರಿಸಿಕೊಂಡರೆ ದೊಡ್ಡ ಪ್ರಮಾಣದ ಹಾನಿ ಕಡಿಮೆಯಾಗುತ್ತದೆ. ಈಗ ಆಧುನಿಕ ತಂತ್ರಜ್ಞಾನ ಬಂದಿದ್ದು, ಕಣ್ಣಿನ ಪೊರೆ ಹಾಗೂ ಇತರ ಶಸ್ತ್ರಚಿಕಿತ್ಸೆ ಕೆಲವೇ ಗಂಟೆಗಳಲ್ಲಿ ಯಶಸ್ವಿಯಾಗಿ ಮುಗಿಸುತ್ತಿದ್ದು ಇಂತಹ ಶಿಬಿರದ ಪ್ರಯೋಜನ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಸಿ.ಬಿ.ರವೀಂದ್ರ ಮಾತನಾಡಿ, ಎಸ್ಡಿಎಂಸಿ ಅಧ್ಯಕ್ಷ ನಾರಾಯಣರ ಉತ್ಸಾಹದಿಂದ ಕಣ್ಣಿನ ತಪಾಸಣಾ ಶಿಬಿರವನ್ನು ಚಕ್ರಬಾವಿಯಲ್ಲಿ ಆಯೋಜಿಸಿದ್ದು, ಮುಂದೆ ಆರೋಗ್ಯ ಶಿಬಿರ ಆಯೋಜಿಸುತ್ತೇವೆ. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮನುಷ್ಯ ಉತ್ಸಾಹದಿಂದ ಜೀವನ ಮಾಡಬಹುದು. ಇಲ್ಲವಾದರೆ ನೆಮ್ಮದಿ ಇರುವುದಿಲ್ಲ. ಆರೋಗ್ಯವೇ ಮನುಷ್ಯನಿಗೆ ದೊಡ್ಡ ಆಸ್ತಿಯಾಗಿದ್ದು, ಇದನ್ನು ಕಾಪಾಡಿಕೊಳ್ಳುವ ಕೆಲಸ ನಾವೆಲ್ಲರೂ ಮಾಡಬೇಕಿದೆ ಎಂದು ತಿಳಿಸಿದರು.ಕಾರ್ಯಕ್ರಮದ ರೂವಾರಿ ನಾರಾಯಣ್ ಮಾತನಾಡಿ, ಚಕ್ರಬಾವಿಯಲ್ಲಿ ಹಲವರು ಕಣ್ಣಿನ ತೊಂದರೆ ಬಗ್ಗೆ ನನ್ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಶ್ರೀ ಸಾಯಿ ನೇತ್ರಾಲಯ ಆಸ್ಪತ್ರೆಯನ್ನು ಸಂಪರ್ಕಿಸಿ ಆಯೋಜಿಸಲಾಗಿದ್ದು, ಇದಾದ ನಂತರ ಸೀಗೇಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಶಿಬಿರವನ್ನು ಆಯೋಜಿಸಲಾಗುವುದು ಎಂದರು.
ಶಿಬಿರದಲ್ಲಿ 150ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಕಣ್ಣಿನ ಪರೀಕ್ಷೆ ಮಾಡಲಾಯಿತು. ಹಲವರಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. 15ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದರು.ಇದೇ ವೇಳೆ ಚಕ್ರಬಾವಿ ಗ್ರಾಮ ಮುಖಂಡರಾದ ರಮೇಶ್, ಪಂಚಾಕ್ಷರಿ, ಬೈರೇಶ್, ಚಂದ್ರಣ್ಣ , ಆನಂದ್, ಮನು (ಜಾನಿ) ಜಿ.ದೇವರಾಜ್, ರಂಗಸ್ವಾಮಿ, ರಾಹುಲ್, ಪ್ರದೀಪ್, ಪಾಪೇ ಗೌಡ, ಮಹೇಶ್, ನವೀನ್ ಆಚಾರ್ ಇತರರು ಭಾಗವಹಿಸಿದ್ದರು.
(ಫೋಟೋ ಕ್ಯಾಫ್ಷನ್)ಮಾಗಡಿ ತಾಲೂಕಿನ ಚಕ್ರಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸಾಯಿ ನೇತ್ರಾಲಯ ಕಣ್ಣಿನ ಆಸ್ಪತ್ರೆ ಹಾಗೂ ಸರ್ಕಾರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ್ ನೇತೃತ್ವದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಶಸ್ತ್ರ ಚಿಕಿತ್ಸೆ ಕಾರ್ಯಕ್ರಮದಲ್ಲಿ ಅರುಣ್ ಗುರೂಜಿ ಉಚಿತ ಕನ್ನಡಕ ವಿತರಿಸಿದರು.