ಶಿವಕುಮಾರ ಕುಷ್ಟಗಿ ಗದಗ
ರಾಜ್ಯ ಸರ್ಕಾರ ಬಡವರಿಗಾಗಿ ಹಲವಾರು ಯೋಜನೆ ಘೋಷಣೆ ಮಾಡಿ ಅನುಷ್ಠಾನಕ್ಕೆ ತಂದಿದ್ದು, ಅದರಲ್ಲಿ ಇಂದಿರಾ ಕ್ಯಾಂಟೀನ್ ಕೂಡಾ ಒಂದು, ಈ ಯೋಜನೆ 2013 ರಿಂದ 2018 ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ಘೋಷಣೆ ಮಾಡಿತ್ತು, ಆದರೆ ವಿಪರ್ಯಾಸವೆಂದರೆ ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿ ಯೋಜನೆ ಘೋಷಣೆಯಾಗಿ 8 ವರ್ಷ ಕಳೆದಿದ್ದರೂ ಇಂದಿರಾ ಕ್ಯಾಂಟೀನ್ ಪ್ರಾರಂಭ ಆಗಿಲ್ಲ.ಶ್ರಮಿಕರು, ಕೂಲಿ ಕಾರ್ಮಿಕರು ಸೇರಿದಂತೆ ಸಮಾಜದಲ್ಲಿನ ಬಡವರಿಗೆ ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡುವ ಯೋಜನೆ ಇದಾಗಿದೆ. ಈ ಯೋಜನೆ ಜಾರಿಗೆ ಬಂದಾಗಿನಿಂದಲೂ ಇದುವರೆಗೂ ಕಾಂಗ್ರೆಸ್ ವರಿಷ್ಠ ನಾಯಕರೇ ಗದಗ ಕ್ಷೇತ್ರ ಪ್ರತಿನಿಧಿಸುತ್ತಿದ್ದರೂ ಜಿಲ್ಲಾ ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲು ಸಾಧ್ಯವಾಗದೇ ಇರುವುದು ಆಶ್ಚರ್ಯದ ಸಂಗತಿಯಾಗಿದೆ.
ಕಾರ್ಯಕರ್ತರಲ್ಲಿ ಬೇಸರ: ನಮ್ಮದೇ ಸರ್ಕಾರ ಅಧಿಕಾರದಲ್ಲಿದ್ದು, ನಮ್ಮದೇ ಶಾಸಕರಿದ್ದರೂ ಇದುವರೆಗೂ ಗದಗ ನಗರದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಸಾಧ್ಯವಾಗದೇ ಇರುವುದು ಸ್ವತಃ ಕಾಂಗ್ರೆಸ್ ಕಾರ್ಯಕರ್ತರಿಗೂ ತೀವ್ರ ಬೇಸರಕ್ಕೆ ಕಾರಣವಾಗಿದೆ. ಗದಗ ನಗರದಲ್ಲಿ ಸಾಕಷ್ಟು ಸ್ಥಳಾವಕಾಶವಿದೆ, ಅದನ್ನು ಬಳಕೆ ಮಾಡಿಕೊಂಡು ಬಡವರು, ಶ್ರಮಿಕರಿಗೆ ಅನುಕೂಲವಾಗುವ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವತ್ತ ನಾಯಕರು ಗಮನಿಸಬೇಕು ಎಂದು ಹಲವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಜಿಲ್ಲೆಗೆ ಒಂದೇ ಇಂದಿರಾ ಕ್ಯಾಂಟೀನ್: ಗದಗ ಬೆಟಗೇರಿ ಅವಳಿ ನಗರ ಹಾಗೂ ಇನ್ನುಳಿದ 6 ತಾಲೂಕುಗಳಲ್ಲಿ (ನಿಯಮದಂತೆ) ತಲಾ ಒಂದು ಕ್ಯಾಂಟೀನ್ ಆರಂಭವಾಗಬೇಕಿತ್ತು. ಸದ್ಯ ಬೆಟಗೇರಿ ತರಕಾರಿ ಮಾರುಕಟ್ಟೆ ಪಕ್ಕ ಆರಂಭವಾಗಿರುವ ಕ್ಯಾಂಟೀನ್ ಹೊರತುಪಡಿಸಿ ಇನ್ನೂ 6 ಕ್ಯಾಂಟೀನ್ ಆರಂಭವೇ ಆಗಿಲ್ಲ. ಜಿಲ್ಲೆಯ ನರಗುಂದ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಮತ್ತು ಶಿರಹಟ್ಟಿ ಸೇರಿದಂತೆ ಎಲ್ಲಿಯೂ ಇಂದಿರಾ ಕ್ಯಾಂಟೀನ್ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಕೂಲಿ ಕಾರ್ಮಿಕರೇ ಹೆಚ್ಚು: ಬೆಟಗೇರಿ ತರಕಾರಿ ಮಾರುಕಟ್ಟೆ ಪಕ್ಕ ಆರಂಭವಾಗಿರುವ ಕ್ಯಾಂಟೀನ್ ನಲ್ಲಿ ಊಟ ಉಪಾಹಾರಕ್ಕೆ ಬಡ ಜನರು ಹಾಗೂ ಕೂಲಿ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಕಾಲೇಜು ವಿದ್ಯಾರ್ಥಿಗಳು, ಫುಟ್‌ಪಾತ್‌ನಲ್ಲಿರುವ ನಿರ್ಗತಿಕರೇ ಹೆಚ್ಚು ಬರುತ್ತಾರೆ. ಹಾಗೇ ಬೇರೆ ಬೇರೆ ಊರುಗಳಿಂದ ಆಗಮಿಸುವ ಪ್ರಯಾಣಿಕರು ಸಹ ಹೆಚ್ಚಿನ ಪ್ರಮಾಣದಲ್ಲಿ ಊಟ ಮಾಡುತ್ತಾರೆ ಎನ್ನುವುದು ಸಮಾಧಾನದ ಸಂಗತಿ, ಆದರೆ ನಿತ್ಯವೂ ಸಾವಿರಾರು ಸಂಖ್ಯೆಯ ಜನರು ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಾರೆ. ಮುಖ್ಯ ಕಚೇರಿಗಳೆಲ್ಲ ಗದಗ ನಗರದಲ್ಲಿಯೇ ಇದೆ, ಆದರೆ ಪ್ರಸ್ತುತ ಸ್ಥಾಪಿಸಿರುವ ಇಂದಿರಾ ಕ್ಯಾಂಟೀನ್ ಗದಗ ನಗರದಿಂದ ಬಹಳಷ್ಟು ದೂರದಲ್ಲಿದ್ದು, ಗದುಗಿನ ಜನರಿಗೆ, ನಿತ್ಯವೂ ಕೆಲಸ ಕಾರ್ಯಗಳಿಗಾಗಿ ಗದಗ ನಗರಕ್ಕೆ ಬರುವವರಿಗೆ ಇದು ಇದ್ದು ಇಲ್ಲದಂತಾಗಿದೆ.ಏಕಾಏಕಿ ದರ ಏರಿಕೆ: ಜಿಲ್ಲೆಯಲ್ಲಿ ಸದ್ಯ ಚಾಲನೆಯಲ್ಲಿರುವ ಬೆಟಗೇರಿಯ ಇಂದಿರಾ ಕ್ಯಾಂಟೀನ್ ತಕ್ಕಮಟ್ಟಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು, ಇಲ್ಲಿನ ಸಿಬ್ಬಂದಿ ಸ್ವಚ್ಛತೆಗೂ ಆದ್ಯತೆ ನೀಡುತ್ತಿದ್ದಾರೆ. ಆದರೆ ದರ ಒಮ್ಮೆಲೇ ದುಪ್ಪಟ್ಟು ಹೆಚ್ಚಿಸಿದ್ದು, ಈ ಹಿಂದೆ ₹5 ಗೆ ಉಪಾಹಾರ ಹಾಗೂ ₹ 10ಗೆ ಊಟ ನೀಡಲಾಗುತ್ತಿತ್ತು. ಕಳೆದ ಕೆಲ ದಿನಗಳಿಂದ ₹10 ಉಪಾಹಾರಕ್ಕೆ ಹಾಗೂ ₹ 20 ಊಟಕ್ಕೆ ದರ ನಿಗದಿ ಮಾಡಲಾಗಿದೆ. ಆದರೆ ಉಪಾಹಾರ ಮತ್ತು ಊಟದ ಪ್ರಮಾಣ ಮಾತ್ರ ಅಷ್ಟೇ ಉಳಿದಿದೆ ಎನ್ನುತ್ತಾರೆ ಅಲ್ಲಿಗೆ ಭೇಟಿ ನೀಡುವ ಹಲವು ಬಡ ಕೂಲಿ ಕಾರ್ಮಿಕರು.
ಗದಗ ನಗರದಲ್ಲಿಯೂ ಇಂದಿರಾ ಕ್ಯಾಂಟೀನ್ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಬಾರಿ ಪ್ರಯತ್ನಿಸಲಾಗಿದೆ. ಜಾಗೆಯ ಸಮಸ್ಯೆಯಿಂದ ವಿಳಂಬವಾಗಿದೆ. ಈ ಬಗ್ಗೆ ಹಿರಿಯರ ಗಮನಕ್ಕೆ ತರುತ್ತೇವೆ. ಗದಗ ನಗರದಲ್ಲಿಯೂ ಇಂದಿರಾ ಕ್ಯಾಂಟೀನ್ ಸಿಗುವಂತೆ ವ್ಯವಸ್ಥೆ ಮಾಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.