ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಹಲವಾರು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗಗಳನ್ನು ನೋಡಿ ಎಲ್ಲೂ ಸರಿಹೊಂದದ ಕಾರಣ ಕೊನೆಗೆ ಸ್ಥಳೀಯ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮಿ ವಿದ್ಯಾಪೀಠದಡಿಯಲ್ಲಿ ನಡೆಯುತ್ತಿರುವ ಕಾಲೇಜು ಅವರಣ ಸೂಕ್ತ ಎಂದು ಶ್ರೀಗಳಲ್ಲಿ ಮನವಿ ಮಾಡಿದಾಗ ತಕ್ಷಣವೇ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮಿಜಿ ಒಪ್ಪಿಗೆ ನೀಡಿದ್ದರ ಫಲವಾಗಿ ಇಂದು ಸುಮಾರು 129.29 ಲಕ್ಷ ರು. ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ಸಿದ್ದಗೊಂಡು ಆರಂಭಗೊಂಡಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಪಟ್ಟಣದ ಎಸ್‌ಎಂಎಫ್‌ಸಿ ಕಾಲೇಜು ಅವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಇಂದಿರಾ ಕ್ಯಾಂಟೀನ್ ಅನ್ನು ಮಂಗಳವಾರ ಉದ್ಘಾಟನೆ ಮಾಡಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.
ಹೊನ್ನಾಳಿ- ಶಿವಮೊಗ್ಗ ಹೆದ್ದಾರಿ ಕಡೆಯಿಂದ ಕಾಲೇಜು ಕಡೆಗೆ ಹಾದು ಹೋಗಿರುವ, ಇದೀಗ ಇಂದಿರಾ ಕ್ಯಾಂಟೀನ್ ಇರುವ ರಸ್ತೆ ಪಕ್ಕದಲ್ಲಿ ಚಾನಲ್ ಇದ್ದು ಮುಖ್ಯ ರಸ್ತೆಯಿಂದ ಅಗ್ನಿಶಾಮಕ ಕಚೇರಿಗೆ 25 ಲಕ್ಷ ರು. ಸೇತುವೆ ಇದೆ. ಇದೇ ರಸ್ತೆಯಲ್ಲಿ ಬರುವ ಇಂದಿರಾ ಕ್ಯಾಂಟೀನ್‌ಗೆ ಗ್ರಾಹಕರು ಬರಲು ಅನುಕೂಲವಾಗುವಂತೆ 25 ಲಕ್ಷ ರು. ಅನುದಾನದಲ್ಲಿ ಬ್ರಿಡ್ಚ್, ನಂತರ ವಿದ್ಯಾರ್ಥಿಗಳು ಸರಾಗವಾಗಿ ಕಾಲೇಜಿಗೆ ಬರಲು 25 ಲಕ್ಷ ರು.ನಲ್ಲಿ ಬ್ರಿಡ್ಜ್, ಇದರ ನಂತರ ಕೋರ್ಟ್‌ಗೆ ಜನ ಬಂದುಹೋಗಲು 25 ಲಕ್ಷ ರು. ಒಂದು ಬ್ರಿಡ್ಜ್, ನಂತರದಲ್ಲಿ ಬರುವ ಆಸ್ಪತ್ರೆಗೆ ಕೂಡ 25 ಲಕ್ಷ ರು.ನಲ್ಲಿ ಒಂದು ಸೇತುವೆ ಹೀಗೆ ಒಟ್ಟು 1.25 ಕೋಟಿ ರು. ವೆಚ್ಚದಲ್ಲಿ 5 ಬ್ರಿಡ್ಜ್‌ಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು, ಟೆಂಡರ್‌ಗೆ ಹೋಗಿದೆ ಎಂದು ಶಾಸಕರು ಹೇಳಿದರು.ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಅದ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, 2013ರಲ್ಲಿ ಸಿದ್ದರಾಮಯ್ಯ ಅವರ ಅಧಿಕಾರದ ಕಾಲದಲ್ಲಿ ವಿಶೇಷವಾಗಿ ಕೂಲಿ ಕಾರ್ಮಿಕರಂತಹ ಶ್ರಮಿಕ ವರ್ಗದವರ ಹಸಿವು ಇಂಗಿಸಲು ಕಡಿಮೆ ದರದಲ್ಲಿ ಅವರಿಗೆ ಉಪಾಹಾರ, ಊಟದ ವ್ಯವಸ್ಥೆಗಾಗಿ ಈ ಇಂದಿರಾ ಕ್ಯಾಂಟೀನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಇದೀಗ ಅವರ ಅಧಿಕಾರದ 2ನೇ ಅವಧಿಯಲ್ಲೂ ಕೂಡ ಇದನ್ನು ಮುಂದುವರಿಸಿದ್ದು, ಇದೀಗ ಹೊನ್ನಾಳಿಯಲ್ಲಿ ಇಂದಿರಾ ಕ್ಯಾಂಟೀನ್ ಅರಂಭಗೊಂಡಿರುವುದು ಬಡವರಿಗೆ, ಶ್ರಮಿಕ ವರ್ಗದವರಿಗೆ ಅನುಕೂಲವಾಗಲಿದೆ ಎಂದರು.
ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕಡು ಬಡ ವರ್ಗದ ಜನರಿಗೆ ಈ ಇಂದಿರಾ ಕ್ಯಾಂಟೀನ್ ಹಸಿವು ನೀಗಿಸಿಕೊಳ್ಳಲು ಒಂದು ಆಶಾ ಕಿರಣವಾಗಿದ್ದು, ಸರ್ಕಾರ ಇದೊಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದ್ದು, ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಪುರಸಭೆ ಅಧ್ಯಕ್ಷ ಎ.ಕೆ. ಮೈಲಪ್ಪ ಮಾತನಾಡಿದರು. ಉಪಾಧ್ಯಕ್ಷೆ ಸಾವಿತ್ರಮ್ಮ ವಿಜಯೇಂದ್ರಪ್ಪ, ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ, ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಯುವ ಮುಖಂಡ ಮಧುಗೌಡ, ನ್ಯಾಮತಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಿವರಾಂ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಟಿ. ಲೀಲಾವತಿ. ಎಂಜಿನಿಯರ್ ದೇವರಾಜ್. ಸಿಬ್ಬಂದಿ, ಮುಖಂಡರು ಇದ್ದರು.