- ಹೊನ್ನಾಳಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿಕೆ । ಸೂಕ್ತ ಜಾಗ ಕೊರತೆಯಿಂದ ವಿಳಂಬ; ಸ್ಪಷ್ಟನೆ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಇಂದಿರಾ ಕ್ಯಾಂಟೀನ್ ಯೋಜನೆ ಕಾಂಗ್ರೆಸ್ ಸಿಎಂ ಆಗಿರುವ ಸಿದ್ದರಾಯಮ್ಯನವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ರಾಜ್ಯದ ಬಹುತೇಕ ಎಲ್ಲ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಅನುಷ್ಠಾನಗೊಂಡಿದೆ. ಹೊನ್ನಾಳಿ ಪಟ್ಟಣದಲ್ಲಿ ಜಾಗದ ಲಭ್ಯತೆ ಸಮಸ್ಯೆಯಿಂದಾಗಿ ಕ್ಯಾಂಟೀನ್ ಆರಂಭ ವಿಳಂಬವಾಗಿತ್ತು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಗುರುವಾರ ಸಂಜೆ ಪಟ್ಟಣದ ಮಾರಿಕೊಪ್ಪ ರಸ್ತೆಯ ಶ್ರೀ ಚನ್ನಪ್ಪಸ್ವಾಮಿ ಮಠದ ಆಶ್ರಯದಲ್ಲಿ ನಡೆಯುತ್ತಿರುವ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರು ಇಂದಿರಾ ಕ್ಯಾಂಟೀನ್ ನಿರ್ಮಿಸಲು ಉದಾರವಾಗಿ ಜಾಗ ನೀಡಿದ್ದಾರೆ. ಇದರ ಫಲವಾಗಿ ಇಂದು ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.
ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಿಸುತ್ತಿರುವ ಜಾಗ ಸೂಕ್ತವಾಗಿದೆ. ಸ್ವಲ್ಪ ದೂರದಲ್ಲೇ ನ್ಯಾಯಾಲಯ, ಆಸ್ಪತ್ರೆಗಳು ಇರುವುದರಿಂದ ಇಲ್ಲಿಗೆ ಬರುವ ಜನರಿಗೆ ಉಪಾಹಾರ- ಊಟಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.ಸರ್ಕಾರ ಸುಮಾರು ₹87 ಲಕ್ಷ ವೆಚ್ಚದಲ್ಲಿ ಬೆಂಗಳೂರಿನ ಎಕ್ಸೇಲ್ ಪ್ರೀ.ಕಾಸ್ಟ್ ಪ್ರೈವೇಟ್ ಲಿ. ಕಂಪನಿಯ ಗುತ್ತಿಗೆಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಒಟ್ಟು 52 ಅಡಿ ಉದ್ದ 45 ಅಡಿ ಅಗಲದ ನಿವೇಶನದಲ್ಲಿ ಕಟ್ಟಡ ನಿರ್ಮಿಸಲಾಗುವುದು. ಇಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ದೊರೆಯಲಿದ್ದು, ಸದುಪಯೋಗ ಮುಖ್ಯವಾಗಿದೆ ಎಂದರು.
ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸ್ಥಳ ನಿಗದಿ ಮಾಡಿದಾಗ ಅಲ್ಲೇ ಪಕ್ಕದಲ್ಲೇ ಸಾರ್ವಜನಿಕ ಶೌಟಾಲಯವಿದ್ದ ಕಾರಣ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಅನಂತರ ಬೇರೆ ಒಂದೆರಡು ಕಡೆ ಗುರುತಿಸಿದ ಜಾಗಗಳೂ ಸೂಕ್ತವಾಗಿರಲಿಲ್ಲ. ಪರಿಣಾಮ ಇಷ್ಟು ದಿನ ಯೋಜನೆ ಜಾರಿ ನನೆಗುದಿಗೆ ಬಿದ್ದಿತ್ತು ಎಂದು ಹೇಳಿದರು.ಬೆಂಗಳೂರು ಸೇರಿದಂತೆ ಹಲವೆಡೆ ಸುಮಾರು 30ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳು ಹಲವು ಕಾರಣಗಳಿಂದ ಸ್ಥಗಿತಗೊಂಡಿವೆ. ಬಡವರ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗಲು ಸರ್ಕಾರಗಳಿಗೆ ಇಚ್ಛಾಶಕ್ತಿ ಬೇಕಾಗುತ್ತದೆ. ಇದೀಗ ಹೊನ್ನಾಳಿಗೆ ಅಕ್ಕ ಕೆಫೆಗಾಗಿ ಕೂಡ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭ ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದು ಶುಭ ಹಾರೈಸಿರು. ಸರ್ಕಾರದ ಯಾವುದೇ ಯೋಜನೆಗಳ ಸದುಪಯೋಗ ಸಾರ್ವಜನಿಕರು ಮಾಡಿಕೊಂಡಾಗ ಮಾತ್ರವೇ ಆ ಯೋಜನೆ ಸಾರ್ಥಕವಾಗುತ್ತದೆ ಎಂದರು.ಪುರಸಭೆ ಅಧ್ಯಕ್ಷ ಮೈಲಪ್ಪ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಎಚ್.ಎ. ಉಮಾಪತಿ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜಯೇಂದ್ರಪ್ಪ, ಸದಸ್ಯರು, ಮುಖ್ಯಾಧಿಕಾರಿ ಟಿ.ಲೀಲಾವತಿ, ಎಂಜಿನಿಯರ್ ದೇವರಾಜ್, ಗಣ್ಯರು ಇದ್ದರು.
- - - -6ಎಚ್.ಎಲ್.ಐ1.ಜೆಪಿಜಿ:ಹೊನ್ನಾಳಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಗುದ್ದಲಿ ಪೂಜೆ ನೆರವೇರಿಸಿದರು. ಹಿರೇಕಲ್ಮಠದ ಸ್ವಾಮೀಜಿ, ಪುರಸಭೆ ಅಧ್ಯಕ್ಷ ಮೈಲಪ್ಪ, ಉಪಾಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿ ಲೀಲಾವತಿ. ಮುಖಂಡ ಎಚ್.ಎ. ಉಮಾಪತಿ ಇತರರು ಇದ್ದರು.