)
ಸಂಪತ್ ತರೀಕೆರೆ
ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಹೆಚ್ಚುವರಿ ಐದು ಕೆ.ಜಿ. ಅಕ್ಕಿ ಬದಲಿಗೆ ‘ಇಂದಿರಾ ಕಿಟ್’ ನೀಡುವ ಯೋಜನೆಗೆ ಬೆಲೆ ಏರಿಕೆ ಬಿಸಿ ತಟ್ಟಿದ್ದು, ರಾಜ್ಯ ಸರ್ಕಾರವನ್ನು ಗೊಂದಲಕ್ಕೆ ಸಿಲುಕಿಸಿದೆ.
ಇಂದಿರಾ ಕಿಟ್ ಕೊಡುವ ಯೋಜನೆ ಜಾರಿಯಾದರೆ, ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 250ರಿಂದ 300 ಕೋಟಿ ರು. ಉಳಿತಾಯವಾಗಲಿದೆ ಎಂದು ಒಂದೂವರೆ ವರ್ಷದ ಹಿಂದೆ ಅಂದಾಜಿಸಲಾಗಿತ್ತು. ಆದರೆ, ಅಡುಗೆ ಎಣ್ಣೆ, ಬೇಳೆ ಕಾಳುಗಳ ದರ ಹೆಚ್ಚಳದಿಂದಾಗಿ ಈಗ ಈ ಯೋಜನೆ ಜಾರಿಯಾದರೆ ತಿಂಗಳಿಗೆ 110 ರಿಂದ 120 ಕೋಟಿ ರು. ಹೆಚ್ಚುವರಿ ಹಣ ಖರ್ಚು ಮಾಡಬೇಕಾಗುತ್ತದೆ. ಹೀಗಾಗಿ ಇಂದಿರಾ ಕಿಟ್ ಯೋಜನೆ ದುಬಾರಿಯಾಗಲಿದೆ ಎಂದು ಆಹಾರ ಇಲಾಖೆ ಮೂಲಗಳು ಮಾಹಿತಿ ನೀಡಿವೆ.ಆರ್ಥಿಕ ಹೊರೆ:
ಆ ನಂತರದ ಬೆಳವಣಿಗೆಯಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿನ ಬಿಕ್ಕಟ್ಟು, ಯುದ್ಧದಿಂದಾಗಿ ಬೇಳೆ, ಕಾಳು, ಅಡುಗೆ ಎಣ್ಣೆ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. ಇದೀಗ ಕೆ.ಜಿ. ತೊಗರಿ ಬೇಳೆ 105 ರು.ನಿಂದ 160 ರು.ಗೆ, ಕೆಜಿ ಅಡುಗೆ ಎಣ್ಣೆ 140 ರು.ನಿಂದ 209 ರು.ಗೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆ ಅನುಷ್ಠಾನಕ್ಕೆ ಬಂದರೆ ಪ್ರತಿ ತಿಂಗಳು ಯೋಜನೆಗೆ 650 -670 ಕೋಟಿ ರು.ವೆಚ್ಚವಾಗಲಿದ್ದು, ವರ್ಷಕ್ಕೆ 7500 ಕೋಟಿ ರು. ಬೇಕಾಗಲಿದೆ. ಹಾಗಾಗಿ, ಯೋಜನೆ ವೆಚ್ಚ ದುಬಾರಿ ಆಗಿರುವುದು ಸರ್ಕಾರವನ್ನು ಚಿಂತೆಗೀಡು ಮಾಡಿದೆ.
ಅನ್ನಭಾಗ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಪ್ರಮುಖವಾಗಿದೆ. ಈಗಾಗಲೇ ಅನರ್ಹರು ಪಡೆದಿರುವ ಸುಮಾರು 14 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್‌ಗಳನ್ನು ಇಲಾಖೆ ರದ್ದು ಮಾಡಿದೆ. ಈ ಮೂಲಕ ಯೋಜನಾ ವೆಚ್ಚ ಕಡಿಮೆ ಮಾಡಲು ಸಾಕಷ್ಟು ಸರ್ಕಸ್ ನಡೆಸುತ್ತಿದೆ. ಈ ನಡುವೆ ಇಂದಿರಾ ಕಿಟ್ ಮೂಲಕ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಕೊಡುವ ಬದಲು, ಪೋಷಕಾಂಶಯುಕ್ತ ಬೇಳೆ, ಕಾಳು, ಅಡುಗೆ ಎಣ್ಣೆ ಕೊಡುವ ಯೋಜನೆಯಾಗಿ ಇಂದಿರಾ ಕಿಟ್ ಯೋಜನೆ ಜಾರಿಗೆ ಮುಂದಾಗಿತ್ತು.
ಆರಂಭದಲ್ಲಿ ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ 5 ಕೆಜಿ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಫಲಾನುಭವಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರು. ನಗದು ಭತ್ಯೆಯನ್ನು ಡಿಬಿಟಿ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಸಂದಾಯ ಮಾಡುತ್ತಿತ್ತು. ಆ ನಂತರ ಭಾರತೀಯ ಆಹಾರ ನಿಗಮವು ರಾಜ್ಯ ಸರ್ಕಾರಕ್ಕೆ ಪ್ರತಿ ಕೆಜಿ ಅಕ್ಕಿಗೆ 22.50 ರು.ನಂತೆ ಮಾರಾಟ ಮಾಡಲು ಒಪ್ಪಿಗೆ ಸೂಚಿಸಿದ್ದರಿಂದ ಆಹಾರ ಇಲಾಖೆ 2 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಅಕ್ಕಿಯನ್ನು ಪ್ರತಿ ತಿಂಗಳು ನಿಗಮದಿಂದ ಖರೀದಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತಿದೆ.