ಕನ್ನಡಪ್ರಭ ವಾರ್ತೆ ಬೆಂಗಳೂರು
ಪಶುವೈದ್ಯಾಧಿಕಾರಿಗಳ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತ ಬಿಜೆಪಿ ಮುಖಂಡ ಬಸವರಾಜ ಕನ್ನಾಳೆ ತಂಡ ಹುದ್ದೆಗಳ ‘ಡೀಲ್’ಗೆ ಅಭ್ಯರ್ಥಿಗಳ ಜತೆ ವಾಟ್ಸಾಪ್ ಕರೆಗಳು, ತಮ್ಮ ಸ್ನೇಹಿತರು, ಸಂಬಂಧಿಕರ ಸಿಮ್ ಬಳಸಿರುವುದು ಸಿಐಡಿ ತನಿಖೆ ವೇಳೆ ಬೆಳಕಿಗೆ ಬಂದಿದೆ.ಈ ವಾಟ್ಸಾಪ್ ಸಂವಹನ ಹಿನ್ನೆಲೆಯಲ್ಲಿ ಆರೋಪಿಗಳ ಸಂಪರ್ಕ ಜಾಲ ಶೋಧನೆ ಸಿಐಡಿಗೆ ತಾಂತ್ರಿಕವಾಗಿ ಸವಾಲಾಗಿದೆ. ತಮ್ಮ ಮೊಬೈಲ್‌ಗಳಿಂದ ಅಭ್ಯರ್ಥಿಗಳ ಜತೆ ಆರೋಪಿಗಳು ಸಂಭಾಷಿಸಿದ್ದರೆ ಮೊಬೈಲ್ ಕರೆಗಳ ವಿವರ (ಸಿಡಿಆರ್) ಆರೋಪಿಗಳ ಸಂಪರ್ಕ ಜಾಲ ಪತ್ತೆ ಹಚ್ಚಲು ಸಿಐಡಿಗೆ ನೆರವಾಗುತ್ತಿತ್ತು. ಆದರೆ ವಾಟ್ಸಪ್ ಕರೆಗಳ ಮಾಹಿತಿ ಸಂಗ್ರಹಕ್ಕೆ ಸಿಐಡಿ ಇದೀಗ ಸೈಬರ್ ತಜ್ಞರ ನೆರವು ಪಡೆದಿದೆ ಎಂದು ಮೂಲಗಳು ಹೇಳಿವೆ.
ಇನ್ನೊಂದೆಡೆ ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲೂ ಸಿಮ್ ಪಡೆದು ಕನ್ನಾಳೆ ತಂಡ ಡೀಲ್ ಕುದುರಿಸಲು ಬಳಸಿದೆ. ಈ ಹಿನ್ನೆಲೆಯಲ್ಲಿ ಅವರ ಕೆಲ ಬಂಧುಗಳಿಗೂ ತನಿಖೆಯ ಬಿಸಿ ತಟ್ಟಿದೆ ಎಂದು ತಿಳಿದು ಬಂದಿದೆ.ಕನ್ನಾಳೆ ಆಪ್ತನ ವಿಮಾ ಕಂಪನಿಗೆ ಸಿಐಡಿ ರೇಡ್:ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತಮ್ಮ ಶೋಧಕಾರ್ಯ ಮುಂದುವರೆಸಿದ್ದಾರೆ. ಬೀದರ್‌ನಲ್ಲಿ ಹಗರಣದ ಪ್ರಮುಖ ಶಂಕಿತ ಬಸವರಾಜ ಕನ್ನಾಳೆ ಮತ್ತು ಆತನ ಆಪ್ತ ರಾಜಶೇಖರ ಎಂಬುವರಿಗೆ ಸೇರಿದ ವಿಮಾ ಕಂಪನಿಗಳ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ಅಗತ್ಯ ದಾಖಲೆಗಳು, ಕಂಪ್ಯೂಟರ್ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.ಹಗರಣದಲ್ಲಿ ಅಕ್ರಮ ಹಣವನ್ನು ವಿವಿಧೆಡೆ ಹೂಡಿಕೆ ಮಾಡಿರುವ ಶಂಕೆಯಡಿ ಸಿಐಡಿ ಅಧಿಕಾರಿಗಳು ಬೀದರ್ ನಗರದ ಚಿದ್ರಿ ರಸ್ತೆಯಲ್ಲಿರುವ ಸರ್ವರಕ್ಷಾ ಸುವಿಧಾ ಪ್ರೈವೇಟ್ ಲಿಮಿಟೆಡ್ ಜನಲ್ ಲೈಫ್ ಇನ್ಶುರೆನ್ಸ್’ ಕಚೇರಿ ಮೇಲೆ ಮಿಂಚಿನ ದಾಳಿ ನಡೆಸಿದ್ದಾರೆ. ಡಿವೈಎಸ್‌ಪಿ ಅಸ್ಲಂ ಬಾಷಾ ತಂಡದ ನೇತೃತ್ವ ವಹಿಸಿದ್ದರು. ಬಸವರಾಜ ಕನ್ನಾಳೆ ಅಕ್ರಮ ಹಣವನ್ನು ವಿಮಾ ಕಂಪನಿ ಮೇಲೆ ಹೂಡಿಕೆ ಮಾಡಿದ್ದಾನೆ ಎಂಬ ಬಲವಾದ ಶಂಕೆ ಮೇರೆಗೆ ಪರಿಶೀಲನೆ ನಡೆಸಲಾಗುತ್ತಿದೆ.ವಿಶೇಷವೆಂದರೆ ಈ ವಿಮಾ ಕಂಪನಿಯು ರಾಜಶೇಖರ್ ಎಂಬುವವರ ಕುಟುಂಬಕ್ಕೆ ಸೇರಿದವರ ಕಟ್ಟಡದಲ್ಲಿದ್ದು, ರಾಜಶೇಖರ್ ಹಾಗೂ ಬಸವರಾಜ್ ಕನ್ನಾಳೆ ಅತ್ಯಂತ ಆಪ್ತ ಮಿತ್ರರಾಗಿದ್ದಾರೆ. ಹೀಗಾಗಿ ಇದರಿಂದಾಗಿ ನೇಮಕಾತಿಯ ಅಕ್ರಮ ಹಣದ ವಹಿವಾಟು ಈ ಸಂಸ್ಥೆಯ ಮೂಲಕ ಜರುಗಿದೆಯೇ ಎಂಬ ಅನುಮಾನದ ಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ.ದಾಳಿಯ ವೇಳೆ ಕಚೇರಿಯಲ್ಲಿದ್ದ ಕಂಪ್ಯೂಟರ್‌ಗಳು, ಹಾರ್ಡ್‌ಡಿಸ್ಕ್‌ಗಳು ಹಾಗೂ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.ಕೆಪಿಎಸ್‌ಸಿ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ, ಅಂಕಗಳ ತಿದ್ದುಪಡಿ ಹಾಗೂ ಲಂಚ ಪಡೆದು ಹುದ್ದೆ ನೀಡಿದ ಗಂಭೀರ ಆರೋಪಗಳು ಕೇಳಿಬಂದಿದ್ದವು. ಈ ಜಾಲದ ಮೂಲವನ್ನು ಹುಡುಕ ಹೊರಟಿರುವ ಸಿಐಡಿ, ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿದ್ದು, ಬೀದರ್ ಭಾಗದಲ್ಲಿ ಹಗರಣದ ಹಣವನ್ನು ಆಸ್ತಿ ಹಾಗೂ ವಿವಿಧ ಉದ್ಯಮಗಳಲ್ಲಿ ಬೆನಾಮಿ ಹೆಸರಿನಲ್ಲಿ ಹೂಡಿಕೆ ಮಾಡಿರುವುದನ್ನು ಭೇದಿಸಲು ಕಾರ್ಯಾಚರಣೆ ಮುಂದುವರಿಸಿದೆ.
