ಇಂದಿನ ಸ್ಪರ್ಧಾತ್ಮಕ ಮತ್ತು ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣದ ವ್ಯಾಖ್ಯಾನವೇ ಬದಲಾಗುತ್ತಿದೆ. ಶಿಕ್ಷಣವು ಕೇವಲ ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಡುವ ಮಾರ್ಗವಲ್ಲ, ಬದಲಿಗೆ ಬದುಕುವುದನ್ನು ಕಲಿಸುವ ಜೀವನ ವಿಧಾನ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮಲ್ಲಿಕಾರ್ಜುನ ಹಲಸಂಗಿ ಅಭಿಪ್ರಾಯಪಟ್ಟಿದ್ದಾರೆ.
- ದಾವಣಗೆರೆ ವಿವಿಯಲ್ಲಿ ಶಿಕ್ಷಕರ ದಿನಾಚರಣೆ । ಶಿಕ್ಷಣ ವಾಣಿಜ್ಯಿಕ ವ್ಯವಹಾರ ಆಗೋದು ಆತಂಕಕಾರಿ ಬೆಳವಣಿಗೆ: ಕಳವಳ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಇಂದಿನ ಸ್ಪರ್ಧಾತ್ಮಕ ಮತ್ತು ವೇಗವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಶಿಕ್ಷಣದ ವ್ಯಾಖ್ಯಾನವೇ ಬದಲಾಗುತ್ತಿದೆ. ಶಿಕ್ಷಣವು ಕೇವಲ ಜೀವನೋಪಾಯಕ್ಕಾಗಿ ಕೆಲಸ ಹುಡುಕಿಕೊಡುವ ಮಾರ್ಗವಲ್ಲ, ಬದಲಿಗೆ ಬದುಕುವುದನ್ನು ಕಲಿಸುವ ಜೀವನ ವಿಧಾನ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮಲ್ಲಿಕಾರ್ಜುನ ಹಲಸಂಗಿ ಅಭಿಪ್ರಾಯಪಟ್ಟರು.ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಆಧುನಿಕ ತಾಂತ್ರಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರವು ಅಗಾಧ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಡಿಜಿಟಲ್ ಕಲಿಕೆ, ಕೃತಕ ಬುದ್ಧಿಮತ್ತೆ ಮತ್ತು ಸ್ಮಾರ್ಟ್ ತರಗತಿಗಳು ಶಿಕ್ಷಣ ನೀಡುವ ವಿಧಾನವನ್ನು ಸಂಪೂರ್ಣ ಬದಲಾಯಿಸಿವೆ. ಸೇವೆಯಾಗಿ ಗುರುತಿಸಿಕೊಂಡಿದ್ದ ಶಿಕ್ಷಣ ವಾಣಿಜ್ಯಿಕ ವ್ಯವಹಾರ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ತಂತ್ರಜ್ಞಾನವು ಕಲಿಕೆಯನ್ನು ಗಡಿಗಳಿಲ್ಲದೇ ತಲುಪಿಸಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಗುಣಮಟ್ಟದ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಿದೆ. ಇ-ಲರ್ನಿಂಗ್, ದೃಶ್ಯ-ಶ್ರಾವ್ಯ ಮಾಧ್ಯಮಗಳು ಕಲಿಕೆಯನ್ನು ಹೆಚ್ಚು ಆಕರ್ಷಕ ಹಾಗೂ ಸರಳವಾಗಿಸಿವೆ. ತಂತ್ರಜ್ಞಾನದ ಅತಿಯಾದ ಬಳಕೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು, ಸಾಮಾಜಿಕ ಸಂವಹನ ಮತ್ತು ಸೃಜನಶೀಲತೆಯನ್ನು ಕುಂದಿಸುತ್ತಿದೆ. ಪರದೆಯ ಮೇಲಿನ ಅತಿಯಾದ ಅವಲಂಬನೆ ವಿದ್ಯಾರ್ಥಿಗಳ ಏಕಾಗ್ರತೆ ಹಾಗೂ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದರು.ಕುಲಪತಿ ಪ್ರೊ. ಬಿ.ಇ.ರಂಗಸ್ವಾಮಿ ಮಾತನಾಡಿ, ಶಿಕ್ಷಣವು ವ್ಯಕ್ತಿಗೆ ಸ್ವಾವಲಂಬನೆ, ಹೊಸ ಆಲೋಚನೆಗಳು ಮತ್ತು ಉದ್ಯಮಶೀಲತೆ ಕಲಿಸಬೇಕು. ಹಣ ಗಳಿಸುವುದು ಜೀವನದ ಒಂದು ಭಾಗ ಅಷ್ಟೇ, ಇಡೀ ಜೀವನವಲ್ಲ ಎಂಬುದನ್ನು ಶಿಕ್ಷಣ ಗ್ರಹಿಸುವಂತೆ ಮಾಡಬೇಕು. ಗುರು-ಶಿಷ್ಯರ ನಡುವಿನ ಭಾವನಾತ್ಮಕ ಸಂಬಂಧವನ್ನು ಬೆಸೆಯುವಂತಹ, ವಾಸ್ತವಿಕ ನೆಲೆಗಟ್ಟಿನ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಉದ್ಯೋಗವು ಹಣವನ್ನು ತರಬಹುದು. ಆದರೆ ಶಿಕ್ಷಣವು ಸಮಾಜದಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ವಿವೇಚಿಸುವ ಪ್ರಜ್ಞೆ ಮೂಡಿಸುತ್ತದೆ. ಜೀವನದಲ್ಲಿ ಎದುರಾಗುವ ಸವಾಲುಗಳು ಮತ್ತು ಕಷ್ಟದ ಸನ್ನಿವೇಶಗಳನ್ನು ಧೈರ್ಯದಿಂದ ಎದುರಿಸುವ ಜಾಣ್ಮೆಯನ್ನು ಶಿಕ್ಷಣ ನೀಡುತ್ತದೆಕುಲಸಚಿವ ಎಸ್.ಬಿ.ಗಂಟಿ ಮಾತನಾಡಿ, ಉದ್ಯೋಗವು ತಾತ್ಕಾಲಿಕವಾಗಿ ನಿಮ್ಮ ಹೊಟ್ಟೆ ಹೊರೆಯಬಹುದು. ಆದರೆ, ಶಿಕ್ಷಣವು ನಿಮ್ಮ ಜೀವನಪೂರ್ತಿ ಮಾರ್ಗದರ್ಶಕ ಬೆಳಕಾಗಿ ಇರುತ್ತದೆ. ಹೀಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ಪರಿಪೂರ್ಣ ಮಾನವೀಯ ಮೌಲ್ಯವುಳ್ಳ ಜವಾಬ್ದಾರಿಯುತ ಪ್ರಜೆಯಾಗಿ ರೂಪಿಸುವತ್ತ ಶಿಕ್ಷಕರು ಗಮನಹರಿಸಬೇಕಿದೆ. ಇದಕ್ಕೆ ಪ್ರೊ.ರಾಧಾಕೃಷ್ಣನ್ ಅವರೇ ಸ್ಫೂರ್ತಿ ಮತ್ತು ಪ್ರೇರಣೆಯಾಗಬೇಕು ಎಂದು ತಿಳಿಸಿದರು.
ಪ್ರೊ.ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಮುಗಿಸಿ ಕೊಲ್ಕತ್ತಾಗೆ ಹೊರಡುವಾಗ, ವಿದ್ಯಾರ್ಥಿಗಳು ಅವರಿಗೆ ಕುದುರೆ ಗಾಡಿಯನ್ನು ತಂದಿದ್ದರು. ಆದರೆ ಕುದುರೆಗಳನ್ನು ಕಟ್ಟಿ ಹಾಕದೆ, ವಿದ್ಯಾರ್ಥಿಗಳೇ ಸ್ವತಃ ಆ ಗಾಡಿಯನ್ನು ಮೈಸೂರು ರೈಲು ನಿಲ್ದಾಣದವರೆಗೆ ಎಳೆದೊಯ್ದು ತಮ್ಮ ನೆಚ್ಚಿನ ಗುರುವಿಗೆ ಗೌರವ ಸಲ್ಲಿಸಿದ್ದರು ಎಂಬ ಘಟನೆಯನ್ನು ಸ್ಮರಿಸಿದರು.ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಕೆ.ರಮೇಶ, ಹಣಕಾಸು ಅಧಿಕಾರಿ ಪ್ರೊ. ಆರ್.ಶಶಿಧರ ಉಪಸ್ಥಿತರಿದ್ದರು. ಪಿಎಂಇ ನಿರ್ದೇಶಕ ಪ್ರೊ. ಡಿ.ಜಿ.ಪ್ರಕಾಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಅಶ್ವಿನಿ ಯಳ್ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಡಾ.ಸತೀಶ್ ವಂದಿಸಿದರು. - - -
(ಕೋಟ್) ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಗೂ ಈಗಿನ ಹಾಸ್ಟೆಲ್ ಶಿಕ್ಷಣ ಪದ್ಧತಿಗೂ ಯಾವುದೇ ವ್ಯತ್ಯಾಸವಿಲ್ಲ. ಉಳ್ಳವರಿಗಷ್ಟೇ ಶಿಕ್ಷಣ ಎನ್ನುವ ಪರಿಕಲ್ಪನೆ ಮತ್ತೆ ಮೂಡುತ್ತಿದೆ. ಗುಣಮಟ್ಟದ ಶಿಕ್ಷಣ ಎಲ್ಲರಿಗೂ ಸಮಾನವಾಗಿ ತಲುಪುವಂತಾಗಬೇಕು.- ಪ್ರೊ. ಮಲ್ಲಿಕಾರ್ಜುನ ಹಲಸಂಗಿ, ವಿಶ್ರಾಂತ ಪ್ರಾಧ್ಯಾಪಕ.
- - --5ಕೆಡಿವಿಜಿ31:
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಬಿ.ಇ.ರಂಗಸ್ವಾಮಿ ಉದ್ಘಾಟಿಸಿದರು. ಪ್ರೊ.ಮಲ್ಲಿಕಾರ್ಜುನ ಹಲಸಂಗಿ, ಕುಲಸಚಿವ ಎಸ್.ಬಿ.ಗಂಟಿ, ಪ್ರೊ. ಡಿ.ಜಿ.ಪ್ರಕಾಶ, ಪ್ರೊ. ಸಿ.ಕೆ.ರಮೇಶ್, ಪ್ರೊ. ಆರ್.ಶಶಿಧರ, ಡಾ.ಸತೀಶ್, ಇದ್ದಾರೆ.