ಪಟ್ಟಣದ ಸಂತೆ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಗುಡಿಬಂಡೆ: ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ದೇವಸ್ಥಾನದಲ್ಲಿ ವಿದ್ಯುತ್ ದೀಪಗಳ ಅಲಂಕಾರ ಕಾರ್ಯದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರೊಬ್ಬರು ಗೋಪುರದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶುಕ್ರವಾರ ರಾತ್ರಿ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.

ಮೃತರನ್ನು ಪಟ್ಟಣದ 3ನೇ ವಾರ್ಡ್‌ನ ಬೆಟ್ಟದ ಕೆಳಗಿನ ಪೇಟೆ ನಿವಾಸಿ ರಹಮತ್ (೩೦) ಎಂದು ಗುರುತಿಸಲಾಗಿದೆ. ಪಟ್ಟಣದ ಸಂತೆ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ನಾಲ್ಕನೇ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುವ ಕಾರ್ಯವನ್ನು ರಹಮತ್ ಅವರಿಗೆ ವಹಿಸಲಾಗಿತ್ತು.

ಶುಕ್ರವಾರ ಸಂಜೆ ದೇವಸ್ಥಾನದ ಆವರಣದಲ್ಲಿ ದೀಪಗಳ ಅಲಂಕಾರ ಕಾರ್ಯದಲ್ಲಿ ತೊಡಗಿದ್ದ ಅವರು, ಬಳಿಕ ದೇವಸ್ಥಾನದ ಗೋಪುರದ ಮೇಲೂ ವಿದ್ಯುತ್ ದೀಪಗಳನ್ನು ಅಳವಡಿಸುವ ಕೆಲಸ ಮಾಡುತ್ತಿದ್ದರು. ಅಲಂಕಾರ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೊನೆಯ ಹಂತದ ಕೆಲಸ ನಿರ್ವಹಿಸುತ್ತಿದ್ದ ವೇಳೆ ರಾತ್ರಿ ಸುಮಾರು 7.50ರ ವೇಳೆಗೆ ಕಾಲು ಜಾರಿ ಗೋಪುರದಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಹಮತ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಹಮತ್ ಅವರು ಸುಮಾರು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ದಿನಗೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದ ಅವರು ಕುಟುಂಬದ ಪ್ರಮುಖ ಆಧಾರವಾಗಿದ್ದರು. ಇದೀಗ ಅವರ ಅಕಾಲಿಕ ನಿಧನದಿಂದ ಪತ್ನಿ ಹಾಗೂ ಇಬ್ಬರು ಮಕ್ಕಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗುಡಿಬಂಡೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣವೇನು ಎಂಬುದರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

05ಜಿಯುಡಿ1: ಮೃತ ಯುವಕ ರಹಮತ್.