ಕನ್ನಡಪ್ರಭ ವಾರ್ತೆ ಬೈಂದೂರು
ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಸೌಕರ್ಯ ಒದಗಿಸಲಾಗುತ್ತಿದೆ ಹಾಗೂ ಉತ್ತಮ ಕಲಿಕಾ ವಾತಾವರಣ ನಿರ್ಮಿಸಲಾಗಿದೆ. ಇದರ ಹೊರತಾಗಿಯೂ ಕೆಲವು ವಿದ್ಯಾರ್ಥಿಗಳು ಅಶಿಸ್ತಿನಿಂದ ವರ್ತಿಸಿರುವ ಘಟನೆಗಳು ನಡೆದಿವೆ. ಇದರಿಂದ ಇತರ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಹಾಗೂ ಕಲಿಕಾ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಹಾಗಾಗಿ ಇಂತಹ ಯಾವುದೇ ರೀತಿಯ ಅಶಿಸ್ತಿನ ನಡವಳಿಕೆಗೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ ನೀಡಿದರು.ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿನಲ್ಲಿ ಹೊಸ ವಿದ್ಯಾರ್ಥಿಗಳ ಸೇರ್ಪಡೆ ಹಾಗೂ ಹಾಸ್ಟೆಲ್ ನಿರ್ವಹಣೆ ಮತ್ತು ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಶಿಸ್ತಿನ ವರ್ತನೆ ಘಟಿಸಿದಾಗ ಅಥವಾ ಅಂತಹ ಸನ್ನಿವೇಶ ಘಟಿಸುವ ಸೂಚನೆ ಸಿಕ್ಕಿದ್ದಲ್ಲಿ ಕೂಡಲೇ ಹಾಸ್ಟೆಲ್ ಸಮಿತಿಯ ಗಮನಕ್ಕೆ ತರಬೇಕು ಎಂದು ಸಭೆಗೆ ತಿಳಿಸಿದರು.ಕಳೆದ ಎರಡು ವರ್ಷಗಳಿಂದ ಪೋಸ್ಟ್ ಮೆಟ್ರಿಕ್ ಹಾಸ್ಟೆಲ್ ಗಳಲ್ಲಿ ವಿಪರೀತ ಬೇಡಿಕೆ ಇದ್ದು ಪ್ರತಿ ವರ್ಷ ಸರಾಸರಿ 150-200 ವಿದ್ಯಾರ್ಥಿಗಳು ಅರ್ಜಿ ಹಾಕಿಯೂ ಹಾಸ್ಟೆಲ್ ವಂಚಿತರಾಗಿರುವ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ ಹಿನ್ನಲೆಯಲ್ಲಿ ಕುಂದಾಪುರ ಶಾಸಕರಾ ಕಿರಣ್ ಕುಮಾರ್ ಕೊಡ್ಗಿ ಜೊತೆಗೂಡಿ ಈ ಬಗ್ಗೆ ಕಳೆದ ಹಲವು ಅಧಿವೇಶನಗಳಲ್ಲಿ ಸರಕಾರದ ಗಮನ ಸೆಳೆಯಲಾಗಿದೆ. ಹಾಸ್ಟೆಲ್ ಸೀಟು ಕೊರತೆ ಬಗ್ಗೆ ಕಳೆದ 5 ವರ್ಷಗಳ ದತ್ತಾಂಶ ಒದಗಿಸಿ ಅದರ ಆಧಾರದ ಮೇಲೆ ಕುಂದಾಪುರ ಭಾಗದಲ್ಲಿ ಹೊಸ ಹಾಸ್ಟೆಲ್ ಮಂಜೂರಾತಿಗೆ ಸಚಿವರಿಗೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ರವಿ ಕುಮಾರ್ ಹುಕ್ಕೇರಿ, ಬೈಂದೂರು ತಾಲೂಕು ಪಂಚಾಯಿತಿ ಇಓ ರಾಜ್ ಕುಮಾರ್, ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಹಿಂದುಳಿದ ವರ್ಗಗಳ ಇಲಾಖೆ ತಾಲೂಕು ಅಧಿಕಾರಿ ಶಶಿಕಲಾ ಹಾಗೂ ವಿವಿಧ ಹಾಸ್ಟೆಲ್ ಗಳ ವಾರ್ಡನ್ ಗಳು ಇದ್ದರು.