ಹುಬ್ಬಳ್ಳಿ:
ಇಂದೋರ್ ಹೋಗುವ ಮುನ್ನ ಕರದಾತರ ಅಭಿಪ್ರಾಯವನ್ನೂ ಕೇಳಬೇಕಿತ್ತು ಅಲ್ವೇ? ಸ್ವಚ್ಛತೆ ಮಾಡಬೇಕೆಂದರೆ ಇಂದೋರ್‌ಗೆ ಹೋಗಿ ಬರಬೇಕೇ? ಇಲ್ಲೇ ಇದ್ದುಕೊಂಡು ಇಲ್ಲಿನ ವ್ಯವಸ್ಥೆಯನ್ನೇ ಸರಿಮಾಡಿಕೊಂಡು ಕ್ಲೀನ್ ಸಿಟಿ ಮಾಡಲು ಸಾಧ್ಯವಿಲ್ಲವೇ? ಎಂದು ಜಗದೀಶ ಹೊಂಬಳ ಎಂಬುವವರು ಪೋನ್ ಕರೆ ಮಾಡಿ ಪ್ರಶ್ನಿಸಿದ್ದಾರೆ. ಇದು ಮೇಯರ್‌ಗೆ ಇರುಸು ಮುರುಸವನ್ನುಂಟು ಮಾಡಿದೆ. ಅದಕ್ಕೆ ಅವರು ತಮಗೆ ಪ್ರವಾಸ ಮಾಡಲು ಆ ಅನುದಾನದಲ್ಲಿ ಅವಕಾಶವಿದೆ. ಜತೆಗೆ ಅಲ್ಲಿನ ಪರಿಸ್ಥಿತಿ ಅರಿತುಕೊಂಡು ಬಂದರೆ ಇಲ್ಲಿ ಇನ್ನು ಹೆಚ್ಚಿನ ಸ್ವಚ್ಛತೆಗೆ ಒತ್ತು ನೀಡಬಹುದಾಗಿದೆ ಎಂದರಲ್ಲದೇ, ಪೌರಕಾರ್ಮಿಕರನ್ನು ತಂಡಗಳನ್ನಾಗಿ ಮಾಡಿ ಹಂತ-ಹಂತವಾಗಿ ಅಧ್ಯಯನಕ್ಕೆ ಕಳುಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪ್ರತಿ ಸಂಡೆ ಸ್ವಚ್ಛ:ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸ್ವಚ್ಛ ಸಂಡೆ ಕಾರ್ಯಕ್ರಮ ಜಾರಿಗೊಳಿಸಲು ತೀರ್ಮಾನಿಸಿದ್ದು ವಾರ್ಡ್ಗಳಲ್ಲಿ ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು
ಇತ್ತೀಚೆಗೆ ಪ್ರವಾಸ ಕೈಗೊಂಡಿದ್ದ ಇಂದೋರನಲ್ಲಿ ತ್ಯಾಜ್ಯವನ್ನು 6 ವಿಧವಾಗಿ ಸಂಗ್ರಹಿಸಲಾಗುತ್ತದೆ. ಒಣ ಕಸ, ಹಸಿ ಕಸ, ಪ್ಲಾಸ್ಟಿಕ್ ತ್ಯಾಜ್ಯ, ಇಲೆಕ್ಟ್ರಿಕ್ ತ್ಯಾಜ್ಯ, ನೀರಿನ ಬಾಟಲಿ ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತದೆ. ಆದರೆ, ಇಲ್ಲಿ ಒಣ ಹಾಗೂ ಹಸಿ ಕಸ ಮಾತ್ರ ಪ್ರತ್ಯೇಕಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದ ಮೇಯರ್, ಅವಳಿ ನಗರದ ವಿವಿಧೆಡೆ ಎಲ್ಇಡಿ ಬೀದಿದೀಪಗಳನ್ನು ಪ್ರಾತ್ಯಕ್ಷಿಕೆ ರೂಪದಲ್ಲಿ ಅಳವಡಿಸಿದ್ದು 3 ತಿಂಗಳು ಅವುಗಳ ಕಾರ್ಯನಿರ್ವಹಣೆ ಅವಲೋಕಿಸಿದ ನಂತರ ಹಂತ-ಹಂತವಾಗಿ ಎಲ್ಲೆಡೆ ಅಳವಡಿಕೆ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಉಪ ಆಯುಕ್ತ ವಿಜಯಕುಮಾರ ಆರ್. ಸೇರಿದಂತೆ ವಲಯ ಸಹಾಯಕ ಆಯುಕ್ತರು ಪಾಲ್ಗೊಂಡಿದ್ದರು.