ಇಂದ್ರಾಳಿ ರೈಲ್ವೇ ಮೇಲ್ಸೆತುವೆ ಅಳವಡಿಕೆ ಕಾಮಗಾರಿ ಆರಂಭ

KannadaprabhaNewsNetwork | Published : May 13, 2025 1:07 AM
Follow Us

ಸಾರಾಂಶ

ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಮಲ್ಪೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿರುವ ರೈಲ್ವೆ ಮಾರ್ಗದ ಮೇಲೆ, ಸೇತುವೆಯ ಗರ್ಡರ್ ಸರಿಸುವ ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು, ಮಂಗಳವಾರ ಸಂಜೆಯೊಳಗೆ ರೈಲ್ಪೆ ಹಳಿಗಳ ಮೇಲೆ ಸೇತುವ ಅಳವಡಿಕೆ ಪೂರ್ಣಗೊಳ್ಳುತ್ತದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಇಲ್ಲಿನ ಮಲ್ಪೆ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿರುವ ರೈಲ್ವೆ ಮಾರ್ಗದ ಮೇಲೆ, ಸೇತುವೆಯ ಗರ್ಡರ್ ಸರಿಸುವ ಪ್ರಕ್ರಿಯೆ ಸೋಮವಾರ ಆರಂಭವಾಗಿದ್ದು, ಮಂಗಳವಾರ ಸಂಜೆಯೊಳಗೆ ರೈಲ್ಪೆ ಹಳಿಗಳ ಮೇಲೆ ಸೇತುವ ಅಳವಡಿಕೆ ಪೂರ್ಣಗೊಳ್ಳುತ್ತದೆ.

ಈ ಕಾಮಗಾರಿಯನ್ನು ಸೋಮವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ವೀಕ್ಷಿಸಿದರು. ಇತ್ತೀಚೆಗೆ ಲಕ್ನೋದಿಂದ ಆಗಮಿಸಿದ್ದ ಆರ್‌ಡಿಎಸ್‌ಓ ಅವರು ಕಾಮಗಾರಿ ವೀಕ್ಷಿಸಿ ಸೇತುವೆ ಅಳವಡಿಕೆ ಪ್ರಕ್ರಿಯೆಗೆ ಅನುಮತಿ ನೀಡಿದ್ದರು. ಸೇತುವೆ ಅಳವಡಿಕೆ ಸಂದರ್ಭದಲ್ಲಿ ರೈಲು ಸಂಚಾರದಲ್ಲಿ ಮಾರ್ಪಾಡು ಮಾಡುವ ಪ್ರಕ್ರಿಯೆಗೆ ಕೇಂದ್ರ ಸಚಿವರು ಅನುಮತಿ ನೀಡಿದ್ದಾರೆ. ಆದ್ದರಿಂದ ಸೇತುವೆ ಅಳವಡಿಕೆ ಮಾಡಲಾಗುತ್ತಿದೆ ಎಂದರು. ಆದಿಉಡುಪಿ ಭಾಗದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಒಂದು ಹಾಗೂ ಎರಡನೇ ಹಂತದಲ್ಲಿ ಪರಿಹಾರ ನೀಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ 24 ಮಂದಿಗೆ ಪರಿಹಾರ ಸಿಕ್ಕಿರಲಿಲ್ಲ.ಇದನ್ನು ಒಂದೆರಡು ದಿನದೊಳಗೆ ಪಾವತಿಸಲಾಗುವುದು ಎಂದರು.ಸಂತೆಕಟ್ಟೆ ಸುರಂಗದಲ್ಲಿ ಒಂದು ಪಥಕ್ಕೆ ಕಾಂಕ್ರಿಟ್ ಮಾಡಲಾಗಿದೆ. ಈ ಕಾಮಗಾರಿಯೂ ವೇಗವಾಗಿ ನಡೆಯುತ್ತಿದ್ದು, ದಿನನಿತ್ಯ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಅಂಬಲಪಾಡಿಯದ್ದು ಕೂಡ ನಿಗದಿತ ಪ್ರಮಾಣಕ್ಕಿಂತ ವೇಘವಾಗಿ ಕಾಮಗಾರಿ ನಡೆಯುತ್ತಿದ್ದು, ಹಂತ-ಹಂತವಾಗಿ ಎಲ್ಲಾ ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗುವುದು ಎಂದರು. ಈ ವೇಳೆ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರಸಭೆ ಸದಸ್ಯ ಗಿರೀಶ್ ಅಂಚನ್ ಉಪಸ್ಥಿತರಿದ್ದರು.ಇಂದು ಅಳವಡಿಕೆ ಪೂರ್ಣ:

60 ಮೀಟರ್‌ ಉದ್ದದ ಕಬ್ಬಿಣದ ಸೇತುವೆ ಇದಾಗಿದ್ದು, ಅದನ್ನು ಬೇರೆಡೆ ನಿರ್ಮಿಸಿ, ರೈಲ್ವೆ ಹಳಿಯ ಮೇಲೆ ಸೇತುವೆಯಾಗಿ ಕೂರಿಸಲಾಗುತ್ತದೆ. ಒಂದು ಬದಿಯಿಂದ ಅದನ್ನು ಯಂತ್ರಗಳ ಮೂಲಕ ಇನ್ನೂಂದು ಬದಿಗೆ ಸರಿಸಲಾಗುತ್ತದೆ. ಸೇತುವೆ 1.5 ಮೀ. ಸರಿಸಲು 20 ನಿಮಿಷ ತೆಗೆದುಕೊಳ್ಳುತ್ತದೆ. ಈ ಕಾರಣಕ್ಕೆ ಸೋಮವಾರ ಬೆಳಗ್ಗಿನ ರೈಲುಗಳ ಓಡಾಟದಲ್ಲಿ ಅರ್ಧ ಗಂಟೆ ವ್ಯತ್ಯಯವಾಯಿತು. ರೈಲು ಹಾದುಹೋಗುವ ವೇಳೆ ಕಾಮಗಾರಿ ಸ್ಥಗಿತಗೊಳಿಸಲಾಯಿತು. ಮಂಗಳವಾರ ಸೇತುವೆ ಒಂದು ಬದಿಯಿಂದ ಇನ್ನೊಂದು ತುದಿ ತಲುಪಲಿದೆ. ಬಳಿಕ ಕಾಂಕ್ರಿಟ್ ಹಾಕುವ ಪ್ರಕ್ರಿಯೆ ನಡೆಯಲಿದೆ. ತಾಂತ್ರಿಕ ಪರಿಶೀಲನೆ ನಡೆದು ವಾಹನ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.