ಬಳ್ಳಾರಿ: ಅರ್ಸೆಲರ್ ಮಿತ್ತಲ್, ಬ್ರಹ್ಮಿಣಿ ಹಾಗೂ ಎನ್‌ಎಂಡಿಸಿ ಸ್ಟೀಲ್ ಕಾರ್ಖಾನೆಗಾಗಿ ರೈತರಿಂದ ಬಲವಂತದಿಂದ ವಶಪಡಿಸಿಕೊಂಡಿರುವ ಭೂಮಿಗೆ ಸರಿಯಾದ ದರ ನೀಡದೇ ಮೋಸ ಮಾಡಿದೆ. ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಭೂ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ರೈತ ಸಂಘ, ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟಗಳ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ರೈತರಿಗೆ ಖರೀದಿಸಿದ ಭೂಮಿಯಿಂದ ಕೈಗಾರಿಕೆಗಳನ್ನು ಸ್ಥಾಪಿಸಲಾಗುವುದು. ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗ ನೀಡಲಾಗುವುದು ಎಂಬ ಭರವಸೆ ಹುಸಿಯಾಗಿದೆ. ಕೆಐಎಡಿಬಿ ಮಾಡಿರುವ ವಂಚನೆಯನ್ನು ತಡೆದು ಮುಖ್ಯಮಂತ್ರಿ ಸಮಕ್ಷಮದಲ್ಲಿ ಜರುಗಿದ ಸಭೆಯಲ್ಲಿ ರೈತರು ಮಂಡಿಸಿದ ಅಹವಾಲುಗಳನ್ನು ತಕ್ಷಣ ಪರಿಹಾರಕ್ಕೆ ಮುಂದಾಗಬೇಕು. ರೈತರಿಂದ ಭೂಮಿ ಖರೀದಿಸಿ ಮಾರುಕಟ್ಟೆಯ ದರ ನೀಡದೇ ವಂಚನೆ ಮಾಡಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಈ ಹಿಂದಿನ ಭೂಬೆಲೆಯನ್ನು ರದ್ದುಗೊಳಿಸಿ ಹೊಸ ಬೆಲೆಯನ್ನು ಘೋಷಣೆ ಮಾಡಬೇಕು. ಇಲ್ಲವೇ ರೈತರ ಜಮೀನುಗಳನ್ನು ವಾಪಸ್ ನೀಡಬೇಕು. ಕಳೆದ 15 ವರ್ಷಗಳಿಂದ ರೈತರಿಗಾದ ಉದ್ಯೋಗ ನಷ್ಟಕ್ಕೆ ಕಾರ್ಖಾನೆಯ ಕಂಪನಿಗಳಿಂದ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.
ಕುಡಿತಿನಿಯಿಂದ ಪಾದಯಾತ್ರೆ ಮೂಲಕ ಬಳ್ಳಾರಿಗೆ ಆಗಮಿಸಿದ ಪ್ರತಿಭಟನಾಕಾರರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಭೂ ಸಂತ್ರಸ್ತ ಹೋರಾಟ ಸಮಿತಿಯ ಪ್ರಮುಖರಾದ ಯು.ಬಸವರಾಜ್, ಸತ್ಯಬಾಬು, ಜಂಗ್ಲಿಸಾಬ್, ಎಂ.ತಿಪ್ಪೇಸ್ವಾಂಇ, ಸಿದ್ದಪ್ಪ, ಗವನೂರು ಅಂಜಿನಪ್ಪ, ಶ್ರೀಧರ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.