ಕೈಗಾರಿಕಾ ಅಭಿವೃದ್ಧಿ ಯೋಜನೆ: ಜಿಲ್ಲೆಗೆ ಅಗ್ರಸ್ಥಾನ ಕೊಡಿ

KannadaprabhaNewsNetwork |  
Published : Sep 07, 2026, 01:15 AM IST
ಫೋಟೋ- ಕಲಬುರಗಿ ಏರ್ಪೋರ್ಟ್‌ | Kannada Prabha

ಸಾರಾಂಶ

Industrial Development Plan: Give the district top priority

-ಮುಖ್ಯಮಂತ್ರಿ ಡಿಕೆ ಶಿವಕುಮಾರ್‌, ಸಚಿವ ಪ್ರಿಯಾಂಕ್‌ ಖರ್ಗೆಗೆ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯಿಂದ ಮನವಿ ಪತ್ರ

----

ಕನ್ನಡಪ್ರಭ ವಾರ್ತೆ ಕಲಬುರಗಿ

ಬೆಂಗಳೂರು ಹೊರತುಪಡಿಸಿ ರಾಜ್ಯದ ಐದು ನಗರಗಳನ್ನು ಕೈಗಾರಿಕಾ ಅಭಿವೃದ್ಧಿಗಾಗಿ ಗುರುತಿಸುವ ಯೋಜನೆಯಲ್ಲಿ ಕಲಬುರಗಿ ನಗರವನ್ನು ಕಡ್ಡಾಯವಾಗಿ ಸೇರಿಸಬೇಕು ಎಂದು ಒತ್ತಾಯಿಸಿ, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಯಿಂದ ಸಿಎಂ ಡಿಕೆ ಶಿವಕುಮಾರ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳನ್ನು ಬೆಳೆಸಲು, ಹೂಡಿಕೆದಾರರಿಗೆ ವಿಶೇಷ ಪ್ರೋತ್ಸಾಹ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲು ಮತ್ತು ಕೈಗಾರಿಕಾ ಅನುಮೋದನೆಗಳನ್ನು ನಿಗದಿತ ಅವಧಿಯಲ್ಲಿ ನೀಡಲು ಬೆಂಗಳೂರು ಹೊರತಾಗಿ ಐದು ನಗರಗಳನ್ನು ಗುರುತಿಸುವಂತೆ ಮುಖ್ಯಮಂತ್ರಿಗಳು ನೀಡಿರುವ ನಿರ್ದೇಶನವನ್ನು ಕೆಕೆಸಿಸಿಐ ಸ್ವಾಗತಿಸಿದೆ.

ಈ ಯೋಜನೆಯಿಂದ ರಾಜ್ಯದಲ್ಲಿ ಸಮತೋಲನದ ಪ್ರಾದೇಶಿಕ ಅಭಿವೃದ್ಧಿ ಸಾಧ್ಯವಾಗುವುದರ ಜೊತೆಗೆ ಉದ್ಯೋಗಾವಕಾಶ ಹೆಚ್ಚಲಿವೆ. ಕೈಗಾರಿಕೆ ಮತ್ತು ಹೂಡಿಕೆಗಳು ಕೇವಲ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗುವುದನ್ನು ತಪ್ಪಿಸಿ, ಹಿಂದುಳಿದ ಪ್ರದೇಶಗಳಿಗೂ ಅಭಿವೃದ್ಧಿಯ ಅವಕಾಶ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ಡಾ. ಡಿ. ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿ ಕಲ್ಯಾಣ ಭಾಗದ ತಾಲೂಕುಗಳನ್ನು ಹಿಂದುಳಿದ, ಅತ್ಯಂತ ಹಿಂದುಳಿದ ತಾಲೂಕುಗಳೆಂದು ಗುರುತಿಸಲಾಗಿತ್ತು. ಅದೇ ರೀತಿ, ಪ್ರಾದೇಶಿಕ ಅಸಮತೋಲನದ ಕುರಿತು ಅಧ್ಯಯನ ನಡೆಸಿದ ಡಾ. ಎಂ. ಗೋವಿಂದರಾವ್ ಅವರ ಅಧ್ಯಕ್ಷತೆಯ ಉನ್ನತಾಧಿಕಾರ ಸಮಿತಿ ವರದಿಯಲ್ಲಿಯೂ, ಪ್ರಮುಖ ಅಭಿವೃದ್ಧಿ ಸೂಚ್ಯಂಕಗಳ ಆಧಾರದ ಮೇಲೆ ಜಿಲ್ಲೆ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.

ಕಲಬುರಗಿ ಜಿಲ್ಲೆ ಹಾಗೂ ಇಡೀ ಕಲ್ಯಾಣ ಭಾಗವು ದಶಕಗಳಿಂದ ರಾಜ್ಯದ ಕೈಗಾರಿಕಾ ಅಭಿವೃದ್ಧಿ ಮತ್ತು ಹೂಡಿಕೆಯ ಮುಖ್ಯವಾಹಿನಿಯಿಂದ ದೂರ ಉಳಿದಿದ್ದು, ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಭಾಗದ ಅಗತ್ಯಕ್ಕೆ ತಕ್ಕಂತೆ ಕೈಗಾರಿಕೆಗಳು, ಮೂಲಸೌಕರ್ಯ, ಉದ್ಯೋಗಾವಕಾಶ ದೊರೆತಿಲ್ಲ ಎಂದು ಕೆಕೆಸಿಸಿಐ ತಿಳಿಸಿದೆ.

ಹಿಂದಿನ ಮತ್ತು ಇತ್ತೀಚಿನ ಸಮಿತಿಗಳ ವರದಿಗಳು ಈ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ಇನ್ನೂ ಸರಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿವೆ. ಹೀಗಾಗಿ, ಐದು ನಗರಗಳ ಕೈಗಾರಿಕಾ ಅಭಿವೃದ್ಧಿ ಯೋಜನೆಯಲ್ಲಿ ಕಲಬುರಗಿಯನ್ನು ಸೇರಿಸುವುದು ಕೇವಲ ಕೈಗಾರಿಕಾ ಬೇಡಿಕೆಯಾಗಿರದೆ, ಪ್ರಾದೇಶಿಕ ಅಸಮತೋಲನ ಸರಿಪಡಿಸಲು ಕೈಗೊಳ್ಳಬೇಕಾದ ಅತ್ಯಗತ್ಯ ಕ್ರಮವಾಗಿದೆ.

ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ರಾಜ್ಯದಲ್ಲಿ ‘ಎರಡನೇ ಬೆಂಗಳೂರು’ ನಿರ್ಮಿಸುವ ಕುರಿತು ಗಂಭೀರ ಚಿಂತಿಸಬೇಕಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷರೊಂದಿಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆಯನ್ನು ಕೆಕೆಸಿಸಿಐ ಸ್ವಾಗತಿಸಿದೆ.

ಈ ಹಿನ್ನೆಲೆಯಲ್ಲಿ, ಪ್ರಸ್ತಾಪಿತ ‘ಎರಡನೇ ಬೆಂಗಳೂರು’ ಪರಿಕಲ್ಪನೆಯಡಿ ಕಲಬುರಗಿಯನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಗಂಭೀರ ಪರಿಗಣಿಸಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

ಕಲಬುರಗಿಯನ್ನು ಪ್ರಮುಖ ಕೈಗಾರಿಕಾ, ವಾಣಿಜ್ಯ, ತಂತ್ರಜ್ಞಾನ ಮತ್ತು ಉದ್ಯೋಗ ಕೇಂದ್ರವಾಗಿ ಅಭಿವೃದ್ಧಿಪಡಿಸುವುದರಿಂದ ರಾಜ್ಯದ ಬೆಳವಣಿಗೆ ವಿಕೇಂದ್ರೀಕರಣಗೊಂಡು, ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೊಳಗಾದ ಕಲ್ಯಾಣ ಭಾಗವು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ.

ಕಲಬುರಗಿಯನ್ನು ಕೈಗಾರಿಕಾ ಅಭಿವೃದ್ಧಿಗೆ ಆಯ್ಕೆ ಮಾಡಲಾಗುವ ಐದು ನಗರಗಳಲ್ಲಿ ಒಂದಾಗಿ ಅಧಿಕೃತವಾಗಿ ಗುರುತಿಸಿ ಅಧಿಸೂಚನೆ ಹೊರಡಿಸಬೇಕು. ಕಲಬುರಗಿಗಾಗಿ ಸಮಗ್ರ ಕೈಗಾರಿಕಾ ಅಭಿವೃದ್ಧಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ, ಕಲಬುರಗಿ ಹಾಗೂ ಕಲ್ಯಾಣ ಭಾಗದಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪಿಎಂ ಮಿತ್ರ ಮೆಗಾ ಟೆಕ್ಸಟೈಲ್‌ ಪಾರ್ಕ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕು, ಕಲಬುರಗಿಯಲ್ಲಿ ಅಧಿಕಾರಯುತ ಪ್ರಾದೇಶಿಕ ಏಕಗವಾಕ್ಷಿ ಸೌಲಭ್ಯ ಕೇಂದ್ರ ಸ್ಥಾಪಿಸಬೇಕು. ಹೊಸ ಕೈಗಾರಿಕಾ ಪ್ರದೇಶಗಳು, ಸರಕು ಸಾಗಣೆ ಮತ್ತು ಉಗ್ರಾಣ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಕೋರಲಾಗಿದೆ.

ಕೈಗಾರಿಕೆಗಳಿಗೆ ಅಗತ್ಯವಿರುವ ವಿದ್ಯುತ್, ನೀರು, ರಸ್ತೆ, ರೈಲು ಮತ್ತು ವಿಮಾನ ಸಂಪರ್ಕವನ್ನು ಬಲಪಡಿಸುವುದರ ಜೊತೆಗೆ, ಶಹಾಬಾದ್‍ನಲ್ಲಿರುವ ಜಿಇ ಪವರ್ ಇಂಡಿಯಾ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಿ, ಬೃಹತ್ ಎಂಜಿನಿಯರಿಂಗ್, ಏರೋಸ್ಪೇಸ್, ರಕ್ಷಣಾ ಉತ್ಪಾದನೆ ಅಥವಾ ಇತರೆ ಆಧುನಿಕ ಕೈಗಾರಿಕೆಗಳಿಗೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಕೆಕೆಸಿಸಿಐ ಒತ್ತಾಯಿಸಿದೆ.

ಕಲಬುರಗಿ ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗಾಗಿ ನಿರ್ಧಿಷ್ಟ ಕೈಗಾರಿಕಾ ಮತ್ತು ಮೂಲಸೌಕರ್ಯ ಯೋಜನೆ ಘೋಷಿಸಿ, ಅವುಗಳಿಗೆ ಅಗತ್ಯ ಅನುದಾನ ಮೀಸಲಿಡಬೇಕು. ಯೋಜನೆಗಳ ಅನುಷ್ಠಾನಕ್ಕೆ ಜವಾಬ್ದಾರಿಯುತ ಸಂಸ್ಥೆಗಳನ್ನು ಗುರುತಿಸಿ, ಕಾಮಗಾರಿ ಪೂರ್ಣಗೊಳಿಸಲು ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ನಂಜುಂಡಪ್ಪ ಸಮಿತಿ ಹಾಗೂ ಇತ್ತೀಚಿನ ಡಾ. ಎಂ. ಗೋವಿಂದರಾವ್ ಸಮಿತಿ ವರದಿಗಳಲ್ಲಿನ ಅಂಶಗಳನ್ನು ಪರಿಗಣಿಸಿ, ಕಲಬುರಗಿಯನ್ನು ಐದು ನಗರಗಳ ಕೈಗಾರಿಕಾ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸುವುದರ ಜೊತೆಗೆ ‘ಎರಡನೇ ಬೆಂಗಳೂರು’ ಪರಿಕಲ್ಪನೆಯಡಿಯೂ ಪರಿಗಣಿಸಬೇಕು. ಇದು ದೀರ್ಘಕಾಲದ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಐತಿಹಾಸಿಕ ಹೆಜ್ಜೆಯಾಗಲಿದೆ.

ಕಲಬುರಗಿಯ ಸಮಗ್ರ ಅಭಿವೃದ್ಧಿಯಿಂದ ಇಡೀ ಕಲ್ಯಾಣ ಭಾಗಕ್ಕೆ ಅನುಕೂಲವಾಗುವುದರ ಜೊತೆಗೆ, ಸಂವಿಧಾನದ 371(ಜೆ)ನೇ ಕಲಂನ ಆಶಯಕ್ಕೂ ನಿಜವಾದ ಅರ್ಥ ದೊರೆಯಲಿದೆ ಎಂದು ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಹಾಗೂ ಗೌ.ಕಾ ಶಿವರಾಜ ವಿ. ಇಂಗಿನಶೆಟ್ಟಿ ತಿಳಿಸಿದ್ದಾರೆ.

ಫೋಟೋ

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಯಿಂದ ಸಿಎಂ ಡಿಕೆ ಶಿವಕುಮಾರ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರು ಪೂರೈಸಲು ಒತ್ತಾಯಿಸಿ ರಸ್ತೆ ತಡೆ ಚಳುವಳಿ
ಹೋರಾಟದ ಹಾದಿ ಹಿಡಿದಾದರು ಬರ ಪರಿಹಾರ ಪಡೆಯುತ್ತೇವೆ: ಸಚಿವ ಯತೀಂದ್ರ ಸಿದ್ದರಾಮಯ್ಯ