ತಾಲೂಕಿನ ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಗೊಳಪಡುವ 54ನೇ ವಿತರಣಾ ಕಾಲುವೆಯ ಕೆಳಭಾಗಕ್ಕೆ ನೀರು ಪೂರೈಕೆಯಾಗದಿರುವುದನ್ನು ಪ್ರತಿಭಟಿಸಿ ತಕ್ಷಣ ನೀರು ಬಿಡಲು ಒತ್ತಾಯಿಸಿ ರೈತರು ಭಾನುವಾರ ರಾಯಚೂರು-ಗಂಗಾವತಿ ಮುಖ್ಯರಸ್ತೆಯಲ್ಲಿ ಜವಳಗೇರ ಬಳಿ ರಸ್ತೆ ತಡೆ ಚಳವಳಿ ಮಾಡಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ತುಂಗಭದ್ರಾ ಎಡದಂಡೆ ನಾಲೆಯ ವ್ಯಾಪ್ತಿಗೊಳಪಡುವ 54ನೇ ವಿತರಣಾ ಕಾಲುವೆಯ ಕೆಳಭಾಗಕ್ಕೆ ನೀರು ಪೂರೈಕೆಯಾಗದಿರುವುದನ್ನು ಪ್ರತಿಭಟಿಸಿ ತಕ್ಷಣ ನೀರು ಬಿಡಲು ಒತ್ತಾಯಿಸಿ ರೈತರು ಭಾನುವಾರ ರಾಯಚೂರು-ಗಂಗಾವತಿ ಮುಖ್ಯರಸ್ತೆಯಲ್ಲಿ ಜವಳಗೇರ ಬಳಿ ರಸ್ತೆ ತಡೆ ಚಳವಳಿ ಮಾಡಿ ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 9.30ರಿಂದ ಪ್ರಾರಂಭವಾದ ರಸ್ತೆ ತಡೆ ಚಳವಳಿ ಮಧ್ಯಾಹ್ನ 12ರವರೆಗೆ ನಡೆಯಿತು. ಇದರಿಂದ ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟಾಯಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ರೈತರು ರಾಜ್ಯ ಸರ್ಕಾರ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಂಗಡಗಿ ರಾಜೀನಾಮೆ ಕೊಡಲಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಯುವ ಜವಾಬ್ದಾರಿ ಹೊತ್ತಿರುವ ಅಧ್ಯಕ್ಷ ಸಚಿವ ಶಿವರಾಜ ತಂಗಡಗಿ ತಮ್ಮ ಮನೆಗೆ ಬಂದ ರೈತರನ್ನು ಶಾಸಕರ ಹತ್ತಿರ ಹೋಗಿ ನನ್ನ ಹತ್ತಿರ ಬರಬೇಡಿ ಎಂದು ಹೇಳುತ್ತಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ಕರ್ತವ್ಯ ನಿರ್ವಹಣೆ ಮಾಡುವ ಇಚ್ಚೆಯಿದ್ದರೆ ಜವಾಬ್ದಾರಿ ಸ್ಥಾನದಲ್ಲಿ ಇರಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಡಿ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆಗ್ರಹಿಸಿದರು.

ಅ.11ಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಬಿಡಲಾಗಿದೆ. ಇಲ್ಲಿಯವರೆಗೂ ಜವಳಗೇರೆಯಿಂದ ಕೆಳಗೆ ಇರುವ ಜಮೀನುಗಳಿಗೆ ಇನ್ನು ನೀರು ತಲುಪಿಲ್ಲ. ಇದರಿಂದ ತೀವ್ರ ತೊಂದರೆಯಾಗಿದೆ. ಆದ್ದರಿಂದ ಅನಿವಾರ್ಯವಾಗಿ ರಸ್ತೆ ತಡೆ ಮಾಡುತ್ತಿರುವುದಾಗಿ ರೈತರು ಸಾರ್ವಜನಿಕರಿಗೆ ತಿಳಿಸಿದರು.

ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಕಾಂಗ್ರೆಸ ಮುಖಂಡ ಸೋಮನಗೌಡ ಬಾದರ್ಲಿ, ಜೆಡಿಎಸ್‌ ಮುಖಂಡರಾದ ಬಸವರಾಜ ನಾಡಗೌಡ, ರೈತ ಮುಖಂಡರಾದ ಅಮೀನಪಾಷ ದಿದ್ದಗಿ, ಬಸವರಾಜ ಗೊಡಿಹಾಳ, ಬಸವರಾಜ ಹಂಚಿನಾಳ, ಶರಣಪ್ಪ ಮಳ್ಳಿ, ರಾಮಯ್ಯ ಜವಳಗೇರಾ, ಡಾ.ರಿಯಾಜದ್ದೀನ್, ರಾಮಕೃಷ್ಣ ಬಾಲಯ ಕ್ಯಾಂಪ್ ಭಾಗವಹಿಸಿದ್ದರು.