ನೆಲಮಂಗಲ: ಪ್ರಜಾಸೇವಾ ಆಂದೋಲನ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ವೇದಿಕೆ. ಸಾಮಾನ್ಯರು ಮತ್ತು ಬಡವರು ಸರ್ಕಾರದ ವಿವಿಧ ಸೇವೆಗಳು ಹಾಗೂ ಕುಂದುಕೊರತೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಪ್ರಜಾಸೇವಾ ಆಂದೋಲನ ಸಭೆ ಆಯೋಜಿಸಲಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು

ನೆಲಮಂಗಲ: ಪ್ರಜಾಸೇವಾ ಆಂದೋಲನ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವ ವೇದಿಕೆ. ಸಾಮಾನ್ಯರು ಮತ್ತು ಬಡವರು ಸರ್ಕಾರದ ವಿವಿಧ ಸೇವೆಗಳು ಹಾಗೂ ಕುಂದುಕೊರತೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ಪ್ರಜಾಸೇವಾ ಆಂದೋಲನ ಸಭೆ ಆಯೋಜಿಸಲಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಸಭೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರಿಗೆ ತೊಂದರೆಯಾಗದಂತೆ, ಮನೆಬಾಗಿಲಿಗೆ ಅಥವಾ ಹತ್ತಿರದ ಕೇಂದ್ರಗಳಲ್ಲೇ ಸೇವೆ ಸಿಗುವಂತೆ ಸರಳ ವ್ಯವಸ್ಥೆ ಕಲ್ಪಿಸಲು ಸರ್ಕಾರವೇ ಜನರ ಬಳಿ ಬಂದು ಅಹವಾಲು ಸ್ವೀಕರಿಸಲು ಈ ಪ್ರಜಾಸೇವೆಯನ್ನು ಜಾರಿಗೊಳಿಸಿದೆ. ನಾನು ಶಾಸಕನಾದ ನಂತರ ಪ್ರತಿ 15 ದಿನಗಳಿಗೊಮ್ಮೆ ಜನಸ್ಪಂದನ ಸಭೆ ಆಯೋಜಿಸಿ ಸಮಸ್ಯೆ ಆಲಿಸುತ್ತಿದ್ದನು. ಜನರ ಸಮಸ್ಯೆಗಳಿಗೆ ನಿಗದಿತ ಸಮಯದೊಳಗೆ ಪರಿಹಾರ ಸಿಗುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಜೊತೆಗೆ ಇಂತಹ ಕ್ರಾಂತಿಕಾರಿ ಆಡಳಿತ ಸುಧಾರಣೆಗಳನ್ನು ಜಾರಿಗೆ ತರುತ್ತಿದೆ. ಸಾಮಾನ್ಯರ ಕಣ್ಣೀರು ಒರೆಸುವ ಮತ್ತು ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಇಲಾಖೆ ಪ್ರಮುಖ ಪಾತ್ರ ವಹಿಸಲಿದೆ. ಸಾರ್ವಜನಿಕರ ಕುಂದುಕೊರತೆ ಹಾಗೂ ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆ. ಆಡಳಿತದಲ್ಲಿ ಜವಾಬ್ದಾರಿ ಮತ್ತು ಪಾರದರ್ಶಕತೆ ಹೆಚ್ಚಲಿದೆ ಎಂದರು.

ತಾಲೂಕು ಮಟ್ಟದ ಸಭೆಗಳ ನಂತರ ಹೋಬಳಿ ಮಟ್ಟದಲ್ಲೂ ಜನಸ್ಪಂದನ ಸಭೆಗಳನ್ನು ಆಯೋಜಿಸಲಾಗುವುದು. ನಂತರ ತಾಲೂಕಿನ 27 ಗ್ರಾಪಂಗಳಲ್ಲಿ ಸಭೆ ಆಯೋಜಿಸಿ ಖುದ್ದು ನಾನೇ ಸಾರ್ವಜನಿಕರಿಂದ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸಕ್ಕೆ ಮುಂದಾಗುತ್ತೇನೆ. ಹಿಂದಿನ ಸಭೆಗಳಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಮುಂದಿನ ಸಭೆಗಳಲ್ಲಿ ಪರಾಮರ್ಶಿಸಿ ಪರಿಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಮಾತನಾಡಿ, ಇಂದಿನ ಪ್ರಜಾಸೇವಾ ಸಭೆಯಲ್ಲಿ ಕಂದಾಯ ಇಲಾಖೆ 72 ಅರ್ಜಿ, ನಗರಸಭೆ 6 ಅರ್ಜಿ, ತಾಪಂಗೆ ಸಂಬಂಧಪಟ್ಟಂತೆ 22 ಅರ್ಜಿ, ಎಡಿಎಲ್‌ಆರ್ ಇಲಾಖೆಗೆ ಸಂಬಂಧಪಟ್ಟಂತೆ 4 ಅರ್ಜಿ ಸೇರಿದಂತೆ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಸಾರ್ವಜನಿಕರು ತರುವ ಎಲ್ಲಾ ರೀತಿಯ ಕುಂದುಕೊರತೆ ಅರ್ಜಿಗಳನ್ನು ಶಾಸಕರು ಆಲಿಸಿದ್ದಾರೆ. ಈ ಅರ್ಜಿಗಳನ್ನು ಸರ್ಕಾರದ ಐಪಿಜಿಆರ್‌ಎಸ್ ಜಾಲತಾಣದಲ್ಲಿ ದಾಖಲಿಸಿ, ಅರ್ಜಿದಾರರಿಗೆ ತಕ್ಷಣವೇ ರಸೀದಿ ಅಥವಾ ಸ್ವೀಕೃತಿ ನೀಡಲಾಗಿದ್ದು, ಸಾಧ್ಯವಾದಷ್ಟು ಅರ್ಜಿಗಳಿಗೆ ಸ್ಥಳದಲ್ಲೇ ವಿಲೇವಾರಿ ಮಾಡಿ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ತಾಪಂ ಇಒ ಡಾ.ಬಿಂದು, ನಗರಸಭೆ ಆಯುಕ್ತ ಗಂಗಾಧರ್, ಎನ್‌ಪಿಎ ಅಧ್ಯಕ್ಷ ಎಂ.ಕೆ.ನಾಗರಾಜು, ನಗರಸಭೆ ಅಧ್ಯಕ್ಷ ಗಣೇಶ್, ಸದಸ್ಯ ಪ್ರದೀಪ್, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪೋಟೋ 1:

ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೇವಾ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದರು. ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ತಾಪಂ ಇಒ ಡಾ.ಬಿಂದು, ನಗರಸಭೆ ಆಯುಕ್ತ ಗಂಗಾಧರ್ ಇತರರಿದ್ದರು.