ರಾಜ್ಯದಲ್ಲಿ ಆವರಿಸಿರುವ ಬರಕ್ಕೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್‌ನಿಂದ ಕೇಂದ್ರ ಸರ್ಕಾರವೇ ಪರಿಹಾರ ಒದಗಿಸಬೇಕಾಗಿದ್ದು, ರಾಜ್ಯ ಸರ್ಕಾರ ಮನವಿ ಮಾಡಿಕೊಂಡರೂ ಸರಿಯಾಗಿ ಸ್ಪಂದಿಸಿಲ್ಲ. ಇದು ಹೀಗೆ ಮುಂದುವರೆದರೆ ಹೋರಾಟದ ಹಾದಿ ಹಿಡಿದಾದರೂ ಬರ ಪರಿಹಾರ ಪಡೆಯಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ರಾಜ್ಯದಲ್ಲಿ ಆವರಿಸಿರುವ ಬರಕ್ಕೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್‌ನಿಂದ ಕೇಂದ್ರ ಸರ್ಕಾರವೇ ಪರಿಹಾರ ಒದಗಿಸಬೇಕಾಗಿದ್ದು, ರಾಜ್ಯ ಸರ್ಕಾರ ಮನವಿ ಮಾಡಿಕೊಂಡರೂ ಸರಿಯಾಗಿ ಸ್ಪಂದಿಸಿಲ್ಲ. ಇದು ಹೀಗೆ ಮುಂದುವರೆದರೆ ಹೋರಾಟದ ಹಾದಿ ಹಿಡಿದಾದರೂ ಬರ ಪರಿಹಾರ ಪಡೆಯಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.ಎರಡು ದಿನಗಳ ಕಾಲ ನಗರ ಪ್ರವಾಸ ಕೈಗೊಂಡಿರುವ ಸಚಿವರು, ಸ್ಥಳೀಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುತ್ತದೆ. ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಹಣ ನೀಡುವಲ್ಲಿ ನಿರ್ಲಕ್ಷ್ಯ ತೋರಿತ್ತು, ಇದರ ವಿರುದ್ಧ ಕಾನೂನು ಹೋರಾಟ ನಡೆಸಿ ಸುಪ್ರೀಂ ಕೋರ್ಟ್ ಆದೇಶದ ಬಳಿಕ ತೆರಿಗೆ ಪಾಲನ್ನು ಪಡೆಯಬೇಕಾಯಿತು. ಇದೀಗ ಬರ ಪರಿಹಾರದ ವಿಚಾರವಾಗಿಯೂ ಹೋರಾಟ ನಡೆಸಲಾಗುವುದು ಎಂದರು.
ಬೆಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಆಯೋಜಿಸಿರುವ ಸಮಾವೇಶಕ್ಕೆ ಕೆಲವರಿಗೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದು ಅಹಿಂದ ಸಮಾವೇಶವಲ್ಲ. ಹಿಂದುಳಿದ ವರ್ಗಗಳ ಒಕ್ಕೂಟದ ಸಮಾವೇಶವಾಗಿದ್ದು, ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ಆಯೋಜಕರೇ ತೀರ್ಮಾನಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.ಬಿಜೆಪಿ ಪಾದಯಾತ್ರೆ ವಿಫಲ: ಬಿಜೆಪಿ ಪಾದಯಾತ್ರೆಯ ಉದ್ದೇಶವಾಗಿದ್ದ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ, ಈಡೇರಿದರೂ ಪಾದಯಾತ್ರೆ ನಡೆಸುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೇ ಹೊರತು ಬೇರೇನಿಲ್ಲ, ಬಿಜೆಪಿಯ ಪಾದಯಾತ್ರೆ ವಿಫಲವಾಗಿದ್ದು, ಜನರು ಯಾರೂ ಸೇರುತ್ತಿಲ್ಲ, ರೈತರು ಬರದಿಂದ ತತ್ತರಿಸುತ್ತಿದ್ದಾರೆ. ಆದರೆ, ವಿಧಾನಸಭೆ ಅಧಿವೇಶನದಲ್ಲಿ ಬರದ ಕುರಿತು ಚರ್ಚಿಸಲು ಅವಕಾಶ ನೀಡದೆ ಬಿಜೆಪಿ ನಾಯಕರು ರಾಜಕೀಯ ಮಾಡಲು ಸಮಯ ವ್ಯರ್ಥ ಮಾಡಿದ್ದಾರೆ. ಸ್ಪಷ್ಟತೆ ಹಾಗೂ ಜನರ ಕಾಳಜಿಯಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಬದಲು ರಾಜಕೀಯ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.