ಕೈಗಾರಿಕೆಗಳು ಬೇಕು ನಿಜ, ಜೀವ ತೆಗೆಯೋದಕ್ಕಲ್ಲ..! : ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork |  
Published : Jun 27, 2025, 12:48 AM IST
ಸೈದಾಪುರ ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ ನಾರಾಯಣಸ್ವಾಮಿ ಭೇಟಿ ನೀಡಿ ಪರೀಶಿಲಿಸಿದರು.  | Kannada Prabha

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಗುರುವಾರ ಮಧ್ಯಾಹ್ನ ಭೇಟಿ ನೀಡಿದರು.

ಕನ್ನಡಪ್ರಭ ಸರಣಿ ವರದಿ ಭಾಗ : 80

ಕನ್ನಡಪ್ರಭ ವಾರ್ತೆ ಯಾದಗಿರಿ/ಸೈದಾಪುರ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಗುರುವಾರ ಮಧ್ಯಾಹ್ನ ಭೇಟಿ ನೀಡಿದರು. ವಿಷಕಾರಿ ಕೆಮಿಕಲ್‌ ತ್ಯಾಜ್ಯ ಕಂಪನಿಗಳಿಂದ ಇಲ್ಲಿನ ಜನ-ಜಲ-ಜೀವನದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ನೊಂದ ಈ ಭಾಗದ ಜನರ ಅಳಲು ಆಲಿಸಲು ಕೆಲ ದಿನಗಳ ಹಿಂದೆಯೇ ಇಲ್ಲಿಗೆ ಬರಬೇಕಿದ್ದ ಅವರ ಪ್ರವಾಸ ಆಗ ಮುಂದೂಡಲಾಗಿತ್ತು.

ಕನ್ನಡಪ್ರಭದ ಸರಣಿ ವರದಿಗಳೂ ಅವರ ಗಮನಕ್ಕೆ ಬಂದಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ, ಗುರುವಾರ ಅವರು ಭೇಟಿ ನೀಡಿ, ಅಲ್ಲಿನ ಜನರ ಕುರಿತು ಕುಂದುಕೊರತೆಗಳ ಆಲಿಸಿದರಲ್ಲದೆ, ಕಂಪನಿಗಳ ಪರಿಶೀಲನೆ ನಡೆಸಿದರು. ಕಡೇಚೂರು ಕೈಗಾರಿಕಾ ಪ್ರದೇಶಕ್ಕೂ ಬರುವ ಮುನ್ನ ಜಿಲ್ಲಾಧಿಕಾರಿಯವರೊಡನೆ ಈ ಕುರಿತು ಸಮಗ್ರವಾಗಿ ಚರ್ಚಿಸಿದ್ದರು. ಈವರೆಗಿನ ಬೆಳವಣಿಗೆಗಳು, 27 ಕಂಪನಿಗಳಿಗೆ ನೋಟಿಸ್‌ ನೀಡಿರುವ ವಿಚಾರ ಹಾಗೂ ಷರತ್ತುಗಳ ಉಲ್ಲಂಘಿಸಿದ್ದ ಕಂಪನಿಗೆ ಬೀಗಮುದ್ರೆ ಜಡಿದ ಬಗ್ಗೆ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ವಿಪಕ್ಷ ನಾಯಕ ಛಲವಾದಿ ಅವರಿಗೆ ವಿವರಣೆ ನೀಡಿದ್ದರು. ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳ ಭೇಟಿ ಮಾಡಿದ ನಂತರ, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ದಿನನಿತ್ಯ ಜನರು ಅನುಭವಿಸುತ್ತಿರುವ ತೊಂದರೆಗಳನ್ನು ಪತ್ರಿಕಾ ಮಾಧ್ಯಮಗಳಲ್ಲಿ ಮತ್ತು ಗ್ರಾಮಸ್ಥರಿಂದ ಕೇಳಲ್ಪಟ್ಟಿದ್ದೇನೆ. ಅಭಿವೃದ್ಧಿಗೆ ಕೈಗಾರಿಕೆಗಳು ಅವಶ್ಯಕ. ಹಾಗಂತ, ಪರಿಸರಕ್ಕೆ ಮತ್ತು ಜನರಿಗೆ ತೊಂದರೆಯಾಗುವ ಕಂಪನಿಗಳ ಸ್ಥಾಪಿಸೋದು ಸರಿಯಲ್ಲ ಎಂದು ಹೇಳಿದರು. ಕಂಪನಿಗಳು ಪರಿಸರದ ನಿಯಮಗಳನ್ನು ಮೀರದಂತೆ ಕ್ರಮ ವಹಿಸಬೇಕು ಎಂದ ಅವರು, ಕೈಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಇನ್ನೂ 36 ಕಂಪನಿಗಳು ನೋಂದಣಿ ಮಾಡಿಸಿದ್ದನ್ನು ಕೈಗಾರಿಕಾ ಅಧಿಕಾರಿಗಳು ಹೇಳಿದ್ದನ್ನು ಕೇಳಿದ ಛಲವಾದಿ ಕೆಲಕಾಲ ದಂಗಾದರು.

ಈಗಿರುವ 27 ಕೆಮಿಕಲ್‌ ಕಂಪನಿಗಳಿಂದಲೇ ಇಂತಹ ದುಸ್ಥಿತಿಯಾದರೆ, ಮುಂದೆ ಬರುವ 34 ಫಾರ್ಮಾ ಕಂಪನಿಗಳಿಂದ ಜನರ ಪರಿಸ್ಥಿತಿ ಏನಾದೀತು ಎಂದು ಆತಂಕ ವ್ಯಕ್ತಪಡಿಸಿದ ಅವರು, ನೋಂದಣಿ ಮಾಡಿಸಿರುವ ಆ 36 ಕಂಪನಿಗಳಿಗೆ ಅನುಮತಿ ನಿರಾಕರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ನೋಟಿಸ್‌ ಕೊಟ್ಟರೆ ಸಾಲದು, ಯಾವ್ಯಾವ ಕಂಪನಿಗಳು ಷರತ್ತುಗಳ ಉಲ್ಲಂಘಿಸುತ್ತಿವೆಯೋ ಅವುಗಳ ಮೇಲೆ ಕಟ್ಟುನಿಟ್ಟಿನ ಕ್ರಮ, ಸೀಝ್‌ ಆಗಬೇಕು. ಎಂದವರು ತಿಳಿಸಿದರು.

-----------

ಈ ಕೆಮಿಕಲ್‌ ಕಂಪನಿಗಳಿಂದ ಜನರ, ಪರಿಸರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ, ಇದನ್ನು ತಡೆಗಟ್ಟಿ ಎಂದು ಇಲ್ಲಿನ (ಗುರುಮಠಕಲ್‌) ಶಾಸಕರು ಕೈಗಾರಿಕಾ ಸಚಿವರಿಗೆ ತಿಳಿಸಿದರೆ, ಅವರು (ಸಚಿವ ಎಂ. ಬಿ. ಪಾಟೀಲರು) ಇಂಡಸ್ಟ್ರಿಯಲ್‌ ಫ್ರೆಂಡ್ಲೀ ಇರಬೇಕು ಅಂದಿದ್ದಾರಂತೆ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಕೈಗಾರಿಕೆಗಳು ಬರಬೇಕು ನಿಜ. ಆದರೆ ಪ್ರಾಣ ಕಳೆಯೋದಕ್ಕಲ್ಲ. ತಮ್ಮ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ, ಸ್ಥಳೀಯರಿಗೆ ಉದ್ಯೋಗ ದೊರಕಿಸುಕೊಂಡುವಂತಹ ಕಾರ್ಯ ಮಾಡಬೇಕು. ಸಚಿವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. "ಇಂಡಸ್ಟ್ರಿಯಲ್‌ ಫ್ರೆಂಡ್ಲೀ " ಇರಬೇಕು ಅಂದರೆ ಯಾವ ರೀತಿ ಇರಬೇಕು ಎಂದು ಅವರೇ (ಸಚಿವ ಎಂ. ಬಿ. ಪಾಟೀಲ್‌) ಇಲ್ಲಿನ ಜನರಿಗೆ ಬಂದು ತಿಳಿಸಲಿ. : ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ