ಕನ್ನಡಪ್ರಭ ವಾರ್ತೆ ಭಟ್ಕಳ
ಇಂಡಿಯನ್ ನವಾಯತ್ ಫೋರಂ (ಐಎನ್ಎಫ್ ) ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಒಂದು ದಿನದ ವೃತ್ತಿ ಮತ್ತು ನಾಯಕತ್ವ ಶಿಬಿರವನ್ನು ಅಮೀನಾ ಪ್ಯಾಲೇಸ್‌ನಲ್ಲಿ ಯಶಸ್ವಿಯಾಗಿ ನಡೆಯಿತು.ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಐಎನ್ಎಫ್ ಅಧ್ಯಕ್ಷ ಅಫ್ತಾಬ್ ಹುಸೇನ್ ಕೋಲಾ ಮಾತನಾಡಿ, ವಿದ್ಯಾರ್ಥಿಗಳಿಗೆ ಭವಿಷ್ಯದ ವೃತ್ತಿ ಆಯ್ಕೆಗಳಲ್ಲಿ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಮಾರ್ಗದರ್ಶನ ನೀಡುವುದು ಶಿಬಿರದ ಉದ್ದೇಶವಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಗುರಿಗಳನ್ನು ಸರಿಯಾಗಿ ಗುರುತಿಸಿದಾಗ ಮಾತ್ರ ಯಶಸ್ಸಿನ ದಾರಿ ಸುಗಮವಾಗುತ್ತದೆ ಎಂದರು.ಶಿಬಿರದಲ್ಲಿ ಬೆಂಗಳೂರಿನ ಪ್ರಸಿದ್ಧ ವೃತ್ತಿ ಸಲಹೆಗಾರ ಮತ್ತು ಸಿಗ್ಮಾ ಸಂಸ್ಥೆಯ ಸಂಸ್ಥಾಪಕ ಅಮೀನ್-ಇ-ಮುದಸ್ಸರ ಕರಿಯರ್ ಕ್ಯಾಂಪಸ್ ವಿಷಯದ ಮೇಲೆ ಪ್ರಭಾವಿ ಅಧಿವೇಶನ ನಡೆಸಿ, ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗಾವಕಾಶಗಳು, ಹೊಸ ತಲೆಮಾರಿನ ವೃತ್ತಿಗಳು ಹಾಗೂ ತಮಗೆ ತಕ್ಕ ಆಯ್ಕೆಗಳನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅರಿವು ಮೂಡಿಸಿದರು. ಕೇರಳದ ಅನುಭವಾಧಾರಿತ ಶಿಕ್ಷಣ ಹಾಗೂ ನಾಯಕತ್ವ ತರಬೇತಿ ತಜ್ಞ ಸುಹೈಲ್ ಬಾಬು, ಸಂವಹನ, ತಂಡದ ಕೆಲಸ, ಸಮಯ ನಿರ್ವಹಣೆ ಮತ್ತು ನಾಯಕತ್ವದ ಕೌಶಲ್ಯಗಳ ಕುರಿತು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ಸಾಹ ತೋರಿದರು.
ಇದೇ ಸಂದರ್ಭ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಪರಿಚಯ ಅಧಿವೇಶನ ನಡೆಯಿತು.ವಿದ್ಯಾರ್ಥಿವೇತನ ಮಾರ್ಗದರ್ಶಿ ಅಧಿವೇಶನದಲ್ಲಿ ತಾಲೂಕು ಅಲ್ಪಸಂಖ್ಯಾತ ವಿಸ್ತರಣಾಧಿಕಾರಿ ಶಮ್ಸುದ್ದೀನ್ ಶೇಖ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ರಾಜ್ಯ ಹಾಗೂ ಕೇಂದ್ರ ಸೇವೆಗಳ ಸಿವಿಲ್ ಸರ್ವಿಸ್ ಪರೀಕ್ಷೆಗಳ ಕುರಿತು ಪ್ರಾಥಮಿಕ ಮಾರ್ಗದರ್ಶನ ನೀಡುವ ವಿಶೇಷ ಅಧಿವೇಶನವೂ ಜರುಗಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಜಿಎಸ್ಟಿ ಉಪ ಆಯುಕ್ತ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತ ಪುಸ್ತಕಗಳ ಲೇಖಕ ಮುಹಮ್ಮದ್ ರಫಿ ಪಾಶಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಸಾಧನೆಗೆ ಕಠಿಣ ಪರಿಶ್ರಮ ಮತ್ತು ನಿಷ್ಠೆ ಅಗತ್ಯ ಎಂದು ಪ್ರೇರಣಾದಾಯಕ ಭಾಷಣ ಮಾಡಿದರು. ಸಾಲಿಕ್ ಕೋಲಾ ಮತ್ತು ತನ್ವೀರ್ ಮೊಟಿಯಾ ಕಾರ್ಯಕ್ರಮ ಸಂಯೋಜಕರಾಗಿ ಪ್ರಮುಖ ಪಾತ್ರ ವಹಿಸಿದರು.