ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಭಾರತೀಯ ಅಂಚೆ ಇಲಾಖೆಯ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ಮಾತ್ರ ವರ್ಷಕ್ಕೆ ೫೨೦ ರು. ಹಣ ಪಾವತಿಸಿ ವಿಮೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಅಂದರೆ ಅಕಸ್ಮಾತ್ ಜಾರಿ ಬಿದ್ದು ಮೂಳೆ ಮುರಿದರೂ ವಿಮೆ ಯೋಜನೆಯಲ್ಲಿ ನಿಯಮಾನುಸಾರ ಧನ ಸಹಾಯ ದೊರೆಯುತ್ತದೆ, ಮೃತಪಟ್ಟಲ್ಲಿ ೧೦ ಲಕ್ಷ ರು. ಮತ್ತು ಸಂಪೂರ್ಣ ಊನಗೊಂಡರೂ ಗರಿಷ್ಠ ಮೊತ್ತ ದೊರೆಯುತ್ತದೆ ಹಾಗೂ ಈ ರೀತಿಯ ಸೌಲಭ್ಯ ಇನ್ಯಾವುದೇ ವಿಮಾ ಯೋಜನೆಯಲ್ಲಿ ಇಲ್ಲವೆಂದು ಹಾಸನದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಪ್ರಕಾಶ್ ನಾಯಕ್ ಮಾಹಿತಿ ನೀಡಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಭಾರತೀಯ ಅಂಚೆ ಇಲಾಖೆಯ ಉಪ ಅಂಚೆ ಕಚೇರಿ ವತಿಯಿಂದ ಆಯೋಜನೆ ಮಾಡಿದ್ದ ಅಂಚೆ ಜನಸಂಪರ್ಕ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ಉಳಿತಾಯ ಖಾತೆ, ಅವರ್ತನೀಯ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಮಹಿಳಾ ಸನ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು, ಅಟಲ್ ಪೆನ್ಷನ್ ಯೋಜನೆಯಲ್ಲಿ ಕನಿಷ್ಠ ವಿನಿಯೋಜನೆ ಹಾಗೂ ವೃದ್ಧಾಪ್ಯದಲ್ಲಿ ಗರಿಷ್ಠ ಲಾಭಗಳ ಕುರಿತು ವಿವರಿಸಿದರು.
ಪಟ್ಟಣದ ಅಂಚೆ ಇಲಾಖೆಯ ಅಂಚೆ ನಿರೀಕ್ಷಕ ಮಹೇಶ್ ಕೆ., ಪುರಸಭಾಧ್ಯಕ್ಷ ಕೆ.ಶ್ರೀಧರ್, ತಾ. ಶಿಕ್ಷಕರ ಸಂಘದ ಅಧ್ಯಕ್ಷ ಈರಯ್ಯ, ಗುತ್ತಿಗೆದಾರ ಬಿ.ಎನ್.ಪ್ರಭಾಕರ್ ಮಾತನಾಡಿದರು.
ಹಾಸನ ವಿಭಾಗದ ಸಹಾಯಕ ಅಂಚೆ ಅಧೀಕ್ಷಕಿ ಶೋಭಾ ನಾಯಕ್ ಅವರು ವರ್ಗಾವಣೆಗೊಂಡ ಯಶೋಧ ಹಾಗೂ ಮಧು ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಗಣೇಶ್ ಪ್ರಾರ್ಥಿಸಿದರು, ಸುಧಾಕರ್ ಸ್ವಾಗತಿಸಿದರು ಹಾಗೂ ನಂದಿನಿ ನಿರೂಪಿಸಿದರು. ಅಂಚೆ ಪಾಲಕ ಆನಂದ್ ಎಚ್.ಪಿ., ಗೌತಮ್, ಪೃಥ್ವಿ, ರಾಜು, ಜಮಿಲ್ ಇತರರು ಇದ್ದರು.