ಚನ್ನಗಿರಿ ಕ್ಷೇತ್ರದ ಎಲ್ಲ ಗ್ರಾಮಗಳಿಗೂ ಮೂಲಸೌಲಭ್ಯ

KannadaprabhaNewsNetwork | Published : May 13, 2025 11:55 PM
ಚನ್ನಗಿರಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಲು ಶಾಸಕನಾದ ದಿನದಿಂದಲೇ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಬಸವರಾಜ ಶಿವಗಂಗಾ ಹೇಳಿದ್ದಾರೆ.
Follow Us

- ಶಾಸಕ ಬಸವರಾಜ ಶಿವಗಂಗಾ ಭರವಸೆ । ಮೆಳನಾಯ್ಕನಕಟ್ಟೆ, ತಿಳಿನೀರುಕಟ್ಟೆ 24*7 ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಚನ್ನಗಿರಿ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಲು ಶಾಸಕನಾದ ದಿನದಿಂದಲೇ ಪ್ರಾಮಾಣಿಕ ಕೆಲಸ ಮಾಡುತ್ತಿದ್ದೇನೆ ಎಂದು ಶಾಸಕ ಬಸವರಾಜ ಶಿವಗಂಗಾ ಹೇಳಿದರು.

ತಾಲೂಕಿನ ತಿಳಿನೀರುಕಟ್ಟೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ, ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಂಸ್ಥೀಕರಣದ ಬಲವರ್ಧನೆ ಅಂಗವಾಗಿ ತಾಲೂಕಿನ ಮೆಳನಾಯ್ಕನಕಟ್ಟೆ ಮತ್ತು ತಿಳಿನೀರುಕಟ್ಟೆ ಗ್ರಾಮದ 24*7ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭದಲ್ಲಿ ನೆಲ್ಲಿಗಳಿಗೆ ಪೂಜೆ ಸಲ್ಲಿಸಿ, ಸಮಾರಂಭ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಇಂತಹ ಬೇಸಿಗೆ ಸಂದರ್ಭದಲ್ಲೂ ಚನ್ನಗಿರಿ ಕ್ಷೇತ್ರದ ಯಾವೊಂದು ಗ್ರಾಮಕ್ಕೂ ಕುಡಿಯುವ ನೀರಿನ ತೊಂದರೆಯಾಗಿಲ್ಲ. ಈ ದಿನ ತಾಲೂಕಿನ ಮೆಳನಾಯ್ಕನಕಟ್ಟೆ ಮತ್ತು ತಿಳಿನೀರು ಕಟ್ಟೆ ಗ್ರಾಮಗಳನ್ನು 24*7 ನೀರು ಸರಬರಾಜು ಗ್ರಾಮ ಎಂದು ಘೋಷಣೆ ಮಾಡುತ್ತೀರುವುದು ಸಂತಸ ತಂದಿದೆ ಎಂದು ಶಾಸಕರು ಹೇಳಿದರು.

ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ 25 ಗ್ರಾಮಗಳಿಗೆ 24*7 ಕುಡಿಯುವ ನೀರು ಗ್ರಾಮಗಳನ್ನಾಗಿ ಘೋಷಣೆ ಮಾಡಲು ಉದ್ದೇಶಿಸಿದ್ದೇವೆ. ಈಗಾಗಲೇ 6 ಗ್ರಾಮಗಳಲ್ಲಿ ಈ ಯೋಜನೆ ಕಾಮಗಾರಿ ಮುಕ್ತಾಯಗೊಂಡಿದೆ. ಈ ದಿನ ಎರಡು ಗ್ರಾಮಗಳಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ ಎಂದರು.

300 ಮನೆಗಳಿರುವ ತಿಳಿನೀರು ಕಟ್ಟೆ ಗ್ರಾಮದ ಎಲ್ಲ ಮನೆಗಳಿಗೂ ನೆಲ್ಲಿಗಳನ್ನು ಹಾಕಿಸಿದ್ದು, ಗ್ರಾಮದ ಎಲ್ಲ ಮನೆಗಳಿಗೂ ದಿನದ 24 ಗಂಟೆ ಕಾಲವೂ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಈ ಗ್ರಾಮದಲ್ಲಿ ಬಗರ್‌ಹುಕುಂ ಜಮೀನು ಸಾಗುವಳಿ ಮಾಡಿದ ಬಹಳಷ್ಟು ಬಡರೈತರಿದ್ದಾರೆ. ನಮೂನೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಮುಂದಿನ 3 ತಿಂಗಳೊಳಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಿದ್ದೇವೆ. ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ 6 ತಿಂಗಳ ಸಮಯಾವಕಾಶ ನೀಡಿ ಅವರಿಗೂ ಹಕ್ಕುಪತ್ರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಈ ಗ್ರಾಮಕ್ಕೆ ಸ್ಮಶಾನ ಸೌಲಭ್ಯವಿಲ್ಲ. ಈ ದಿನವೇ ಗ್ರಾಮದ ಹತ್ತಿರದ ಸರ್ಕಾರಿ ಜಾಗ ಗುರುತಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸುರೇಶ್ ಇಟ್ನಾಳ್ ಮಾತನಾಡಿ, ಪ್ರತಿಯೊಬ್ಬರಿಗೂ 55 ಲೀಟರ್ ನೀರು ಕೊಡಬೇಕು ಎಂಬ ಉದ್ದೇಶದಿಂದ ಜಲಜೀವನ್ ಮಿಷನ್ ಎಂಬ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಗೆ ರಾಜ್ಯ ಸರ್ಕಾರ 45 ಪರ್ಸೆಂಟ್, ಕೇಂದ್ರ ಸರ್ಕಾರ 45 ಪರ್ಸೆಂಟ್ ಅನುದಾನ ನೀಡಲಿದೆ. ಇನ್ನುಳಿದ 10 ಪರ್ಸೆಂಟ್ ಹಣವನ್ನು ಜನರಿಂದ ವಂತಿಕೆ ಸಂಗ್ರಹಿಸಿ ಈ ಯೋಜನೆ ಸಹಕಾರಗೊಳಿಸಲಾಗುತ್ತಿದೆ. ಜಿಲ್ಲೆಯಲ್ಲಿ 100 ಗ್ರಾಮಗಳನ್ನು ಗುರುತಿಸಿ ದಿನದ 24 ಗಂಟೆಗಳಲ್ಲಿಯೂ ನೀರು ಕೊಡಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದರು.

ಸಮಾರಂಭ ಅಧ್ಯಕ್ಷತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಇಒ ಬಿ.ಕೆ.ಉತ್ತಮ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಭಿಯಂತರ ಲೋಹಿತ್, ಗ್ರಾಪಂ ಸದಸ್ಯರಾದ ಜಗದೀಶ್, ಕಮಲಮ್ಮ, ಸುಖನ್ಯ, ಮನೋಜ್, ಗ್ರಾಮದ ಮುಖಂಡರಾದ ದಾಸಪ್ಪ, ಶಶಿನಾಯ್ಕ್, ರಾಮನಾಯ್ಕ್, ತಾಪಂ ಮಾಜಿ ಸದಸ್ಯ ಮಾವಿನಕಟ್ಟೆ ಶ್ರೀಕಾಂತ್, ಗ್ರಾಮಸ್ಥರು ಹಾಜರಿದ್ದರು.

- - -

(ಕೋಟ್‌) ಇನ್ನು ನೀರಿಗಾಗಿ ಜನರು ಕಾಯಬೇಕಾದ ಅವಶ್ಯಕತೆ ಇಲ್ಲ. ಇದುವರೆಗೂ 7 ಗ್ರಾಮಗಳನ್ನು ನಿರಂತರ ನೀರು ಸರಬರಾಜು ಗ್ರಾಮಗಳೆಂದು ಘೋಷಣೆ ಮಾಡಲಾಗಿದೆ. ಸಾರ್ವಜನಿಕರು ನೀರನ್ನು ಪೋಲು ಮಾಡದೇ, ಹಿತಮಿತವಾಗಿ ಬಳಕೆ ಮಾಡಬೇಕು.

- ಡಾ. ಸುರೇಶ ಇಟ್ನಾಳ್‌, ಸಿಇಒ, ಜಿಪಂ

- - -

-13ಕೆಸಿಎನ್ಜಿ1.ಜೆಪಿಜಿ:

ಚನ್ನಗಿರಿ ತಾಲೂಕಿನ ತಿಳಿನೀರು ಕಟ್ಟೆಯಲ್ಲಿ ಶಾಸಕ ಬಸವರಾಜ ವಿ.ಶಿವಗಂಗಾ ನಿರಂತರ ನೀರು ಸರಬರಾಜಿನ ನೆಲ್ಲಿಗಳಿಗೆ ಪೂಜೆ ಸಲ್ಲಿಸಿದರು.