ಮುಂಡರಗಿ: ಪಟ್ಟಣದ ಮೂಲಸೌಲಭ್ಯಗಳಿಗೆ ಆದ್ಯತೆ ಕಲ್ಪಿಸುವ 34,93,13000 ಮೊತ್ತದ 2025-26ನೇ ಸಾಲಿನ ಬಜೆಟ್‌ನ್ನು ಸೋಮವಾರ ಪುರಸಭೆ ಅಧ್ಯಕ್ಷೆ ನಿರ್ಮಲಾ ನಾಗರಾಜ ಕೊರ್ಲಹಳ್ಳಿ ಮಂಡಿಸಿದರು.
ಪುರಸಭೆಯಲ್ಲಿ ಎಲ್ಲ ತೆರಿಗೆ ಮೂಲಗಳಿಂದ 14,63,86,000 ರು.ಗಳನ್ನು ಆದಾಯ ನಿರೀಕ್ಷಿಸಲಾಗಿದೆ. 33,02,25000 ರು. ಅಭಿವೃದ್ಧಿಗೆ ಮೀಸಲಿದ್ದು, 1,91, 88,000 ರು. ಉಳಿತಾಯ ನಿರೀಕ್ಷಿಸಲಾಗಿದೆ.ಸರ್ಕಾರಿ, ಅರೆಸರ್ಕಾರಿ, ವಾಣಿಜ್ಯ ಮಳಿಗೆಗಳನ್ನು ಅಳತೆ ಮಾಡಿ ತೆರಿಗೆ ನಿಗದಿಗೊಳಿಸಿ ವಸೂಲಿ, ಪ್ರತಿ ವಾರ್ಡುಗಳಲ್ಲಿನ ಉದ್ಯಾನವನ ಸುಧಾರಣೆಗೆ ಕ್ರಮ, ಸ್ಮಶಾನ ಅಭಿವೃದ್ಧಿ, ಹಿರಿಯ ನಾಗರಿಕರಿಗೆ ತೆರಿಗೆ ಹಣ ತುಂಬಲು ಬಂದಾಗ ಅನುಕೂಲವಾಗಲು ಪುರಸಭೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯುವುದು, ಜಾಹಿರಾತುಗಳ ಫ್ಲೆಕ್ಸ್‌ಗೆ ತೆರಿಗೆ ನಿಗದಿ, ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಪಾದಚಾರಿಗಳ ಮೇಲಿರುವ ಅಂಗಡಿ ತೆರವುಗೊಳಿಸಿ ಸಂಚಾರಕ್ಕೆ ಕ್ರಮಕೈಗೊಳ್ಳುವುದು ಬಜೆಟ್‌ನಲ್ಲಿ ಸೇರಿವೆ.
ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ, ಬಿಪಿಎಲ್ ಕಾರ್ಡು ಹೊಂದಿದ ಬಡ ಕುಟುಂಬದವರು ಮೃತಪಟ್ಟಾಗ ಪುರಸಭೆಯಿಂದ ಸಹಾಯಧನ ನೀಡುವುದು, ಮಂಗಗಳ ಹಾವಳಿ ತಪ್ಪಿಸುವುದು, ಪುರಸಭೆ ಆವರಣದಲ್ಲಿರುವ ಗಾಂಧಿ ಭವನ ಹೈಟೆಕ್ ಮಾದರಿಯಲ್ಲಿ ನಿರ್ಮಾಣ, ಪುರಸಭೆ ವ್ಯಾಪ್ತಿಯಲ್ಲಿ ಗಿಡಮರಗಳ ನೆಡುವ ಯೋಜನೆ, ಬೇಸಿಗೆ ದಿನಗಳಲ್ಲಿ ಕೊಪ್ಪಳ ವೃತ್ತ, ಬಸ್ ನಿಲ್ದಾಣ ಇತರ ಪ್ರಮುಖ ಸ್ಥಳಗಳಲ್ಲಿ ಅರವಟ್ಟಿಗೆ ವ್ಯವಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯ ಅನುಕೂಲ ಒದಗಿಸುವದು, ಅಂತ್ಯಸಂಸ್ಕಾರಕ್ಕಾಗಿ ಹೊಸ ಶವವಾಹನ ಖರೀದಿಸುವದು, ಒಟ್ಟಾರೆ ಸಾರ್ವಜನಿಕ ತೆರಿಗೆ ಸಮರ್ಪಕ ವಸೂಲಿ ಮಾಡುವ ಮೂಲಕ ಸರಕಾರದ ಅನುದಾನವನ್ನು ಪಟ್ಟಣದ ಸೌಂದರ್ಯ ಮತ್ತು ಮೂಲಭೂತ ಸೌಲಭ್ಯಗಳಿಗೆ ಪ್ರಥಮ ಆದ್ಯತೆ ಕೊಡುವದು ಈ ಬಾರಿ ಬಜೆಟ್‌ನಲ್ಲಿ ಸೇರಿಸಲಾಗಿದೆ ಎಂದು ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಸಭೆಗೆ ತಿಳಿಸಿದರು. ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಪ್ರಸಕ್ತ ಸಾಲಿನ ಬಜೆಟ್ ಆಯವ್ಯಯ ಮುಖ್ಯಾಂಶಗಳನ್ನು ತಿಳಿಸುತ್ತಾ, ಪಟ್ಟಣದ ಅಭಿವೃದ್ಧಿಗೆ ಪೂರಕವಾಗಿರುವ ಬಜೆಟ್ ಇದಾಗಿದೆ, ವಿವಿಧ ಹಂತಗಳಲ್ಲಿ ತೆರಿಗೆ ಸಮರ್ಪಕವಾಗಿ ವಸೂಲಿ ಮಾಡಿದ ಮುಂಡರಗಿ ಪುರಸಭೆ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕರ ವಸೂಲಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರಣಕ್ಕೆ ನಮ್ಮ ಪುರಸಭೆಗೆ ಸರ್ಕಾರದಿಂದ 5 ಕೋಟಿ ರು.ಗಳ ಹೆಚ್ಚುವರಿ ಅನುದಾನ ದೊರೆಯಲಿದೆ ಎಂದರು. ಸದಸ್ಯ ನಾಗರಾಜ ಹೊಂಬಳಗಟ್ಟಿ ಮಾತನಾಡಿ, ಇದೊಂದು ಉತ್ತಮ ಬಜೆಟ್ ಆಗಿದ್ದು, ಪಟ್ಟಣಕ್ಕೆ ಯುಜಿಡಿ ಅವಶ್ಯಕತೆ ಇದ್ದು, ಇದಕ್ಕಾಗಿ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ವಿನಯ ಕುಲಕರ್ಣಿಯವರನ್ನು ಪುರಸಭೆ ಎಲ್ಲ ಸದಸ್ಯರು ಸೇರಿ ಭೇಟಿಯಾಗಿ 18 ಕೋಟಿ ರು.ಗಳ ಅನುದಾನಕ್ಕೆ ಮನವಿ ಸಲ್ಲಿಸೋಣ. ಇದು ಕಾರ್ಯಗತವಾದರೆ ಶೀಘ್ರದಲ್ಲಿ ಯುಜಿಡಿ ಯೋಜನೆ ಜಾರಿಗೊಳ್ಳಲಿದೆ ಎಂದರು.ಸದಸ್ಯ ಪ್ರಹ್ಲಾದ ಹೊಸಮನಿ ಮಾತನಾಡಿ, 24/7 ನೀರು ಪೂರೈಕೆ, ಟೌನ್ ಪ್ಲ್ಯಾನಿಂಗ್ ಮತ್ತು ಯುಜಿಡಿ ಯೋಜನೆ ಮುಂಡರಗಿ ಪಟ್ಟಣಕ್ಕೆ ಅವಶ್ಯ ಇದ್ದು, ಇದು ಜಾರಿಗೊಳ್ಳಬೇಕು ಹಾಗೂ ಆಡಳಿತಾತ್ಮಕ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಸಲಹೆ ನೀಡಿ ಒಟ್ಟಾರೆ ಇದೊಂದು ಉತ್ತಮ ಬಜೆಟ್ ಆಗಿದೆ ಎಂದರು. ಸದಸ್ಯ ಜ್ಯೋತಿ ಹಾನಗಲ್, ಸಂತೋಷ ಹಿರೇಮನಿ ಮಾತನಾಡಿ, ಅಧ್ಯಕ್ಷರು ಎಲ್ಲ ದೃಷ್ಟಿಯಿಂದಲೂ ಯೋಚಿಸಿ ಅಲೆದು, ತೂಗಿ ನೋಡಿ ಬಜೆಟ್ ಮಂಡಿಸಿದ್ದಾರೆ. ಕ್ರೀಡಾ ಚಟುಟಿಕೆಗಳಿಗೆ ಬಜೆಟ್‌ನಲ್ಲಿ ಕೇವಲ 9 ಸಾವಿರ ರು.ಗಳನ್ನು ಮಾತ್ರ ಮೀಸಲಿರಿಸಿದ್ದು, ಇನ್ನಷ್ಟು ಹೆಚ್ಚಿನ ಅನುದಾನ ಕಾಯ್ದಿರಿಸಿದರೆ ಕ್ರೀಡಾಸಕ್ತಿಯುಳ್ಳವರಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಮಾತನಾಡಿ, ಮುಂಡರಗಿ ಪುರಸಭೆ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಎಲ್ಲ ವಾರ್ಡುಗಳ ಅಭಿವೃದ್ಧಿ ಕ್ರಮ ಕೈಗೊಳ್ಳುಲಾಗುವುದು ಎಂದರು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದರಫಿ ಮುಲ್ಲಾ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ಶಿವಪ್ಪ ಚಿಕ್ಕಣ್ಣವರ, ತಿಮ್ಮಪ್ಪ ದಂಡಿನ, ಶಾಂತಾ ಕರಡಿಕೊಳ್ಳ, ಪ್ರಕಾಶ ಹಲವಾಗಲಿ, ಶಿವಾನಂದ ಬಾರಕೇರ, ದೇವಕ್ಕ ದಂಡಿನ, ರೆಹಮಾನಸಾಬ ಮಲ್ಲನಕೇರಿ, ಸುಮಾ ಬಳ್ಳಾರಿ ಸೇರಿದಂತೆ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.