ಕನ್ನಡಪ್ರಭ ವಾರ್ತೆ ಬೈಂದೂರು
ಬೈಂದೂರು ಕ್ಷೇತ್ರದಲ್ಲಿ ಮಳೆಯ ಕೊರತೆ ಇದ್ದು, ಕುಡಿಯುವ ನೀರು ಮತ್ತು ಕೃಷಿಕರಿಗೆ ಸಮಸ್ಯೆ ಆಗುತ್ತಿದೆ. ಆದರೆ ರಾಜ್ಯ ಸರ್ಕಾರ ಬೈಂದೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡದೆ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ.
ಯಾವ ಆಧಾರದಲ್ಲಿ ನಮ್ಮ ತಾಲೂಕನ್ನು ಬರಗಾಲ ಪೀಡಿತ ಪ್ರದೇಶದಿಂದ ಹೊರಗಿಟ್ಟಿದ್ದಾರೆ ಎನ್ನುವುದೇ ಒಂದು ಪ್ರಶ್ನೆಯಾಗಿ ಉಳಿದಿದೆ ಎಂದು ಸರ್ಕಾರದ ನಿಲುವಿನ ವಿರುದ್ಧ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥಿತಗೊಳಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಪಿಡಿಓಗಳೊಂದಿಗೆ ಸಭೆ ನಡೆಸಿದರು.
ಬೈಂದೂರು ಕ್ಷೇತ್ರದ ಕಾಳು ಸಂಕಗಳ ಅಭಿವೃದ್ಧಿಗಾಗಿ ಈ ಹಿಂದಿನ ಬಿಜೆಪಿ ಸರ್ಕಾರ 5 ಕೋಟಿ ಅನುದಾನ ಘೋಷಿಸಿದ್ದು, ಪ್ರಸ್ತುತ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ದಾನಿಗಳ ನೆರವಿನಿಂದ ಕೆಲವೊಂದು ಕಡೆ ಕಾಲು ಸಂಕ ನಿರ್ಮಿಸುತ್ತಿದ್ದೇವೆ ಎಂದರು.
ಬಿಸಿಲಿನ ಬೇಗೆ ಆರಂಭಕ್ಕೂ ಮುನ್ನವೇ ಬೈಂದೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ಆರಂಭಗೊಂಡಿದ್ದು, ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು. ತುಂಬಾ ಕಡೆ ವಾಟರ್ ಮ್ಯಾನ್‌ಗಳ ಸಮಸ್ಯೆ ಕೂಡ ಇದ್ದು ಎರಡೆರಡು ಗ್ರಾಮಕ್ಕೆ ಒಬ್ಬ ವಾಟರ್ ಮ್ಯಾನ್ ಎಂಬ ಪರಿಸ್ಥಿತಿಯಿದೆ.
ಸಂಭಾವ್ಯ ನೀರಿನ ಕೊರತೆಯ ಸಮಸ್ಯೆಯನ್ನು ನೀಗಿಸಲು ಅಧಿಕಾರಿಗಳು ಈಗಿನಿಂದಲೇ ಸಿದ್ಧರಾಗಿರುವಂತೆ ಎಚ್ಚರಿಸಿದರು. ನೀರಿನ ಲಭ್ಯತೆಗಾಗಿ ಬೈಂದೂರು ಕ್ಷೇತ್ರಗಳಲ್ಲಿ ಹಲವಾರು ಕಡೆ ಡ್ಯಾಮ್‌ಗಳಲ್ಲಿ ಹಲಗೆ ಹಾಕಿರುವುದರಿಂದ ಕೆಲವು ಕಡೆ ಗದ್ದೆಗಳು ಮುಳುಗಡೆಯಾದ ದೂರುಗಳು ಬಂದಿದ್ದು, ಇದಕ್ಕೂ ಕೂಡ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರ ಸಮ್ಮುಖದಲ್ಲಿ ಶೀಘ್ರವಾಗಿ 94c ಜನಸ್ಪಂದನ ಸಭೆ ನಡೆಸುವಂತೆ ಬೈಂದೂರು ಮತ್ತೆ ಕುಂದಾಪುರ ತಹಶೀಲ್ದಾರ್‌ಗೆ ತಿಳಿಸಲಾಗಿದ್ದು, ಪ್ರತಿ ಮಂಗಳವಾರ ಎರಡು ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದರು.