- ರಥೋತ್ಸವ ಕಣ್ತುಂಬಿಕೊಂಡ ಸಾವಿರಾರು ಭಕ್ತರು- ರಥೋತ್ಸವಕ್ಕೆ ಜಾನಪದ ಕಲಾ ತಂಡಗಳ ಮೆರುಗು
ಬಿ. ಶೇಖರ್ ಗೋಪಿನಾಥಂ
ಕನ್ನಡಪ್ರಭ ವಾರ್ತೆ ಮೈಸೂರುಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಮತ್ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಅದ್ಧೂರಿಯಾಗಿ ನೆರವೇರಿತು.
ಗುರುವಾರ ಬೆಳಗ್ಗೆ 4ಕ್ಕೆ ಕರ್ತೃ ಗದ್ದುಗೆಯನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. 6ಕ್ಕೆ ಮಠದ ಗುರು ಪರಂಪರೆಯ ಸಂಸ್ಮರಣೋತ್ಸವ ಹಾಗೂ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ 9ಕ್ಕೆ ಉತ್ಸವ ಮೂರ್ತಿಗೆ ರಾಜೋಪಚಾರ ನಡೆಯಿತು. ಬೆಳಗ್ಗೆ 10.30ಕ್ಕೆ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಪೂಜಾ ವಿಧಿವಿಧಾನ ಪೂರೈಸಲಾಯಿತು.
ರಥೋತ್ಸವದಲ್ಲಿ ದೊಡ್ಡ ತೇರಿನೊಂದಿಗೆ ಚಿಕ್ಕತೇರೂ ಮುಂದೆ ಸಾಗಿತು. ಸುತ್ತೂರು ಮೂಲ ಮಠದವರೆಗೂ ಭಕ್ತರು ರಥದೊಂದಿಗೆ ಹೆಜ್ಜೆ ಹಾಕಿದರು. ದೊಡ್ಡಮ್ಮತಾಯಿ ದೇವಸ್ಥಾನದ ವೃತ್ತ ಬಳಸಿ ರಥೋತ್ಸವವು ಕರ್ತೃಗದ್ದುಗೆಗೆ ಮರಳಿತು.
ರಥೋತ್ಸವದ ಮೆರವಣಿಗೆಗೆ ಸುಮಾರು 35 ಜಾನಪದ ಕಲಾತಂಡಗಳು ಮೆರುಗು ಹೆಚ್ಚಿಸಿದವು. ನಂದಿಧ್ವಜ, ನಗಾರಿ, ವೀರಭದ್ರನ ಕುಣಿತ, ನಾದಸ್ವರ, ತವಿಲ್, ಸ್ಯಾಕ್ಸೋಪೋನ್ ವಾದನ, ಪೂಜಾ ಕುಣಿತ, ಗಾರುಡಿ ಗೊಂಬೆಗಳು, ಡೊಳ್ಳು, ತಮಟೆ- ನಗಾರಿ, ಗೊರವರ ಕುಣಿತ, ಕೋಲಾಟ, ಜಾಂಜ್ ಮೇಳ, ಕಂಸಾಳೆ, ಹುಲಿವೇಷ, ಪಟದ ಕುಣಿತ, ದೊಣ್ಣೆವರಸೆ, ವೀರಮಕ್ಕಳ ಕುಣಿತವು ಭಕ್ತರನ್ನು ಮೋಡಿ ಮಾಡಿತು.