ಶಕ್ತಿ ಯೋಜನೆಯಲ್ಲೂ ಅನ್ಯಾಯ, ಶೀಘ್ರ ದಾಖಲೆ ಬಿಡುಗಡೆ: ಶಾಸಕ ಟೆಂಗಿನಕಾಯಿ

KannadaprabhaNewsNetwork |  
Published : Dec 21, 2025, 03:00 AM IST
ಬೆಳಗಾವಿ ಚಳಿಗಾಲದ ಅಧಿವೇಶನ ಪೂರ್ಣಗೊಳಿಸಿ ಹುಬ್ಬಳ್ಳಿಗೆ ಆಗಮಿಸಿ ಶಾಸಕ ಮಹೇಶ ಟೆಂಗಿನಕಾಯಿ ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ಧೂರಿ ಮೆಗವಣಿಗೆ ಮಾಡಿದರು. | Kannada Prabha

ಸಾರಾಂಶ

ಹಣ ಬಿಡುಗಡೆಯಾಗದಿದ್ದರೆ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟವೇ ಭರವಸೆ ನೀಡಿತ್ತು. ಆದರೆ, ಅಧಿವೇಶನ ಮುಗಿದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.

ಹುಬ್ಬಳ್ಳಿ:

ಬೆಳಗಾವಿ ಅಧಿವೇಶನದಲ್ಲಿ ಫೆಬ್ರುವರಿ ಹಾಗೂ ಮಾರ್ಚ್‌ ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡದಿರುವ ಕುರಿತು ದಾಖಲೆ ಸಮೇತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ, ಶಕ್ತಿ ಯೋಜನೆಯ ಹಣ ಬಿಡುಗಡೆಯಲ್ಲಿ ಆಗಿರುವ ಅನ್ಯಾಯ ಕುರಿತು ಶೀಘ್ರ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಎರಡು ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡದ ಪ್ರಕರಣವನ್ನು ಬಯಲಿಗೆ ತಂದಿದ್ದರಿಂದ ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಗೃಹಲಕ್ಷ್ಮೀ ಯೋಜನೆ ಮಾತ್ರವಲ್ಲದೆ ಉಳಿದ ಗ್ಯಾರಂಟಿ ಯೋಜನೆಗಳಲ್ಲೂ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದ ಟೆಂಗಿನಕಾಯಿ, ಮುಂದಿನ ದಿನಗಳಲ್ಲಿ ಸರ್ಕಾರದ ಮತ್ತಷ್ಟು ಹಗರಣಗಳನ್ನು ಬಯಲಿಗೆಳೆಯಲಾಗುವುದು. ಶಕ್ತಿ ಯೋಜನೆಯಡಿ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ ಮಾಡುವಲ್ಲಿಯೂ ಅನ್ಯಾಯವಾಗಿದ್ದು ಈ ಕುರಿತು ಶೀಘ್ರದಲ್ಲಿಯೇ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ಘೋಷಿಸಿದರು.

ಗೃಹಲಕ್ಷ್ಮೀ ಹಣ ಬಿಡುಗಡೆಯಾಗದಿದ್ದರೆ ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟವೇ ಭರವಸೆ ನೀಡಿತ್ತು. ಆದರೆ, ಅಧಿವೇಶನ ಮುಗಿದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಗೃಹಲಕ್ಷ್ಮೀ ಹಣ ಬಿಡುಗಡೆ ಕುರಿತು ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟನೆ ನಡೆಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಕಾರ್ಯಕರ್ತರು ರಾಜ್ಯದ 1.28 ಕೋಟಿ ಮಹಿಳೆಯರಿಗೆ ಹಣ ಬಿಡುಗಡೆಯಾಗುವ ವರೆಗೂ ವಿರಮಿಸದೆ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕೆಂದರು.

ಶಾಸಕರಿಗೆ ಅದ್ಧೂರಿ ಸ್ವಾಗತ

ಗೃಹಲಕ್ಷ್ಮೀ ಹಣ ಬಾಕಿ ವಿಚಾರ ಬೆಳಕಿಗೆ ತಂದ ಶಾಸಕ ಮಹೇಶ ಟೆಂಗಿನಕಾಯಿ ಅವರಿಗೆ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮಹಿಳಾ ಕಾರ್ಯಕರ್ತೆಯರು ಆರತಿ ಎತ್ತಿ ಅದ್ಧೂರಿ ಸ್ವಾಗತ ಕೋರಿದರು. ಇಲ್ಲಿನ ಗೋಕುಲ ರಸ್ತೆಯಿಂದ ಶಾಸಕರ ಕಚೇರಿಯ ವರೆಗೂ ಒಂದು ಕಿಮೀ ಮೆರವಣಿಗೆ ಮಾಡಲಾಯಿತು. ಹಲವು ಕಾರ್ಯಕರ್ತರು ಬೈಕ್‌ ರ‍್ಯಾಲಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''